ಪಾವಗಡ
ಪಟ್ಟಣದ ಕುಮಾರಸ್ವಾಮಿ ಬಡಾವಣೆಯ ನೀರಿನ ಬವಣೆ ಹೇಳತೀರದು. ಜನರ ನಿರಂತರ ಮನವಿಗೆ ಓಗೊಟ್ಟು ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜೀ ತತ್‍ಕ್ಷಣ ಅವರ ನೆರವಿಗೆ ಧಾವಿಸಿ ಈವರೆವಿಗೆ ಪ್ರತಿ ದಿವಸ 10000 ಲೀಟರಿನ ನೀರನ್ನು ವಿನಿಯೋಗಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಸರಿ.
ಆದರೆ ಇಂದು ಮಧ್ಯಾಹ್ನ ಅಲ್ಲಿಯ ನಾಗರೀಕರು ಮುಖ್ಯವಾಗಿ ಹೆಂಗಸರು, ವೃದ್ಧರು ಆದಿಯಾಗಿ ನೀರಿನ ಬವಣೆಯನ್ನು ವಿವರಿಸಿ ಒಂದು ರೀತಿಯ ಕಳಕಳಿಯ ಮನವಿಯನ್ನು ಸ್ವಾಮೀಜಿಯವರಿಗೆ ಸಲ್ಲಿಸಿದರು. ಇವರ ಈ ದುಃಸ್ಥಿತಿಯನ್ನು ಕಂಡು ಸ್ವಾಮೀಜಿಯವರು ಮಳೆ ಬರುವವರೆಗೆ ಮತ್ತು ಬೇರೆ ವ್ಯವಸ್ಥೆ ಆಗುವವರೆಗೆ ದಿನಕ್ಕೆ 20000 ಲೀಟರ್ ನೀರಿನ ಟ್ಯಾಂಕರನ್ನು ಕಳುಹಿಸುತ್ತೇನೆ ಎಂದು ಭರವಸೆ ನೀಡಿದ ನಂತರ ಪರಿಸ್ಥಿತಿ ತಿಳಿಯಾಯಿತು.
ಆ ಹೆಂಗಸರ ಬವಣೆಯನ್ನು ನೋಡಲಾಗದೆ ಮಕ್ಕಳಾದಿಯಾಗಿ ಉರಿಯುವ ಬಿಸಿಲಿನಲ್ಲಿ ನಿಂತು ನೀರಿಗಾಗಿ ಪರಿತಪಿಸುತ್ತಿರುವವರನ್ನು ನೋಡಿದ ಸ್ವಾಮೀಜಿಯವರು ತತ್‍ಕ್ಷಣ 20000 ಲೀಟರ್ ನೀರನ್ನು ನೀಡಲು ಮುಂದಾಗಿದ್ದಾರೆ. ನಿಜಕ್ಕೂ ಪಾವಗಡದ ಹಾಗೂ ಮುಖ್ಯವಾಗಿ ಬಡಾವಣೆಯ ಜನರಿಗೆ ಆಪತ್ಕಾಲದಲ್ಲಿ ಸಹಾಯ ಹಸ್ತವನ್ನು ನೀಡುತ್ತಿರುವ ಸ್ವಾಮೀಜಿಯವರಿಗೆ ಬಡಾವಣೆಯ ಜನರು ಪೂರ್ಣ ಹರಸಿ ತಮ್ಮ ಕೃತಜ್ಞತೆಯನ್ನು ತೋರಿದರು.
ಸ್ವಾಮೀಜಿಯವರ ಸಮಾಧಾನಕರ ಮಾತುಗಳನ್ನು ಕೇಳಿದ ನಂತರವೇ ಜನರು ಮುಂದಿನ ನೀರು ವಿತರಣೆಗೆ ಅವಕಾಶ ಮಾಡಿಕೊಟ್ಟರು. ಒಟ್ಟಿನಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ ಈ ಭಯಂಕರ ಬಿಸಿಲಿನ ಝಳಕ್ಕೆ ತತ್ತರಿಸಿರುವ ನಾಗರಿಕರಿಗೆ ನೀರು ಮತ್ತು ನೊಂದ ಮೂಕ ಪ್ರಾಣಿಗಳಿಗೆ ಮೇವನ್ನು ನಿರಂತರವಾಗಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾದುದು.