ವಾರ್ಡ್ ಸಮಿತಿ: ಸಂವಿಧಾನ ಕೊಟ್ಟಿರುವ ಜನಾಧಿಕಾರ

ತುಮಕೂರು

    ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‍ಗಳಲ್ಲೂ ಅಲ್ಲಿನ ಸ್ಥಳೀಯ ನಿವಾಸಿಗಳನ್ನು ಒಳಗೊಂಡ ವಾರ್ಡ್ ಸಮಿತಿ ರಚನೆಗೊಳ್ಳಲೇಬೇಕು. ಇದು ನಗರಾಡಳಿತದಲ್ಲಿ ಸಾರ್ವಜನಿಕ ಸಹಭಾಗಿತ್ವಕ್ಕಾಗಿ ದೇಶದ ಸಂವಿಧಾನ ಕೊಟ್ಟಿರುವ ಜನಾಧಿಕಾರ ಎಂದು ಬೆಂಗಳೂರಿನ ಸಿವಿಕ್ ಸಂಸ್ಥೆಯ ಮುಖ್ಯಸ್ಥೆ ಕಾತ್ಯಾಯಿನಿ ಚಾಮರಾಜ್ ಸ್ಪಷ್ಟಶಬ್ದಗಳಲ್ಲಿ ಹೇಳಿದರು.

     ತುಮಕೂರಿನ ಸರಸ್ ಫೌಂಡೇಷನ್ ಮತ್ತು ಬೆಂಗಳೂರಿನ ಸಿವಿಕ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ತುಮಕೂರು ನಗರದಲ್ಲಿ ಏರ್ಪಟ್ಟಿದ್ದ “ನಗರಾಡಳಿತದಲ್ಲಿ ಸಾರ್ವಜನಿಕರ ಸಹಭಾಗಿತ್ವ ಮತ್ತು ಮಾಹಿತಿ ಹಕ್ಕು” ಕುರಿತ ಕಾರ್ಯಾಗಾರದಲ್ಲಿ ಅವರು ವಿಷಯ ಮಂಡಿಸಿ ಮಾತನಾಡುತ್ತಿದ್ದರು.

      ವಾರ್ಡ್ ಸಮಿತಿಯ ರಚನೆಯನ್ನು ಯಾರೂ ಸಹ ವಿರೋಧಿಸುವಂತಿಲ್ಲ. ಏಕೆಂದರೆ ಇದು ಸಂವಿಧಾನದ ಆಶಯ. ಅದರಲ್ಲೂ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಜನಪ್ರತಿನಿಧಿಗಳು ಸಂವಿಧಾನವೇ ಕೊಟ್ಟಿರುವ ಈ ಜನಾಧಿಕಾರವÀನ್ನು ವಿರೋಧಿಸಿದರೆ, ಅವರು ಸಂವಿಧಾನವನ್ನೇ ವಿರೋಧಿಸಿದಂತೆ ಆಗುತ್ತದೆ ಎಂದು ಎಚ್ಚರಿಸಿದರು.

     ವಾರ್ಡ್ ಸಮಿತಿ ರಚನೆಯಿಂದ ಜನಪ್ರತಿನಿಧಿಗಳ ಅಧಿಕಾರ ಖಂಡಿತ ಮೊಟಕಾಗದು. ಇದಕ್ಕೆ ಬದಲಾಗಿ ವಾರ್ಡ್‍ನ ಎಲ್ಲ ಕಾಮಗಾರಿಗಳಲ್ಲೂ ಎಲ್ಲರೂ ಅಪೇಕ್ಷಿಸುವ ಪಾರದರ್ಶಕತೆ ಉಂಟಾಗುತ್ತದೆ. ಪ್ರತಿಯೊಂದು ಕಾಮಗಾರಿಗಳ ಹಿನ್ನೆಲೆಯಲ್ಲಿ ಸ್ಥಳೀಯ ಜನರ ಬೇಕು-ಬೇಡಗಳು ಅಡಕವಾಗಿರುತ್ತವೆ. ನಮ್ಮ ವಾರ್ಡ್‍ನಲ್ಲಿ ನಾವು ರೂಪಿಸುವ ಅಭಿವೃದ್ಧಿ ಕಾಮಗಾರಿಗಳು ಚೆನ್ನಾಗಿ ಆಗುತ್ತಿದೆಯೆಂಬ ಹೆಮ್ಮೆ ಜನರಲ್ಲಿರುತ್ತದೆ.

     ಜನಪ್ರತಿನಿಧಿ ಮತ್ತು ಜನರ ನಡುವೆ ಅಂತರ ಕಡಿಮೆಯಾಗಿ, ಸಾಮೀಪ್ಯ ಹೆಚ್ಚುತ್ತದೆ. ಇದರಿಂದ ಆಯಾ ಜನಪ್ರತಿನಿಧಿ ಮತ್ತಷ್ಟು ಜನಪ್ರಿಯರಾಗಬಹುದು. ಆದ್ದರಿಂದ ಪಾಲಿಕೆ ಸದಸ್ಯರಲ್ಲಿ ವಾರ್ಡ್ ಸಮಿತಿ ಬಗ್ಗೆ ಯಾವುದೇ ಆತಂಕ ಬೇಡ ಎಂದು ಒತ್ತಿ ಹೇಳಿದ ಅವರು, ಪ್ರಜಾಪ್ರಭುತ್ವದ ಮೂಲ ಆಶಯವೂ ಇದೇ ಆಗಿದ್ದು, ಜನಾಧಿಕಾರ ಎಂಬುದು ಕೆಳಹಂತದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಂತಾಗುತ್ತದೆ ಎಂದು ಅನೇಕ ಉದಾಹರಣೆಗಳೊಂದಿಗೆ ವಿವರಿಸಿದರು.

     ವಾರ್ಡ್ ಸಮಿತಿ ರಚನೆಗೆ ಸಂಬಂಧಿಸಿದಂತೆ ಇರುವ 74 ನೇ ಸಂವಿಧಾನ ತಿದ್ದುಪಡಿ, 2011 ರಲ್ಲಿ ರಾಜ್ಯದಲ್ಲಿ ಹೊರಡಿಸಿದ ಕರ್ನಾಟಕ ಮಹಾನಗರ ಪಾಲಿಕೆಗಳ ತಿದ್ದುಪಡಿ ಕಾಯಿದೆ, ಸಮುದಾಯ ಭಾಗವಹಿಸುವಿಕೆ ಕಾಯಿದೆ, ವಾರ್ಡ್ ಸಮಿತಿ ಮತ್ತು ಏರಿಯಾ ಸಭೆಯ ನಿಯಮಗಳ ಬಗ್ಗೆ ಸವಿವರ ಮಾಹಿತಿ ನೀಡಿದ ಅವರು, ವಾರ್ಡ್ ಸಮಿತಿ ಮತ್ತು ಏರಿಯಾ ಸಭೆ ಬಗ್ಗೆಕಾಯಿದೆಯಲ್ಲಿ ಕೆಲವೊಂದು ಅಸ್ಪಷ್ಟತೆ ಇದೆಯಾದರೂ, ಮೊದಲ ಹಂತದಲ್ಲಿ ಇವುಗಳನ್ನು ರಚಿಸಿಕೊಂಡು ಕಾರ್ಯೋನ್ಮುಖರಾಗಲು ಯಾವುದೇ ಅಡ್ಡಿಯಿಲ್ಲ. ಈಗ ಆಗಬೇಕಾಗಿರುವುದು ಇದೇ.

    ಈ ನಿಟ್ಟಿನಲ್ಲಿ ನಾಗರಿಕರು ಮತ್ತು ಸಂಘಟನೆಗಳು ಕ್ರಿಯಾಶೀಲವಾಗಿ, ವಾರ್ಡ್ ಸಮಿತಿ ಮತ್ತು ಏರಿಯಾ ಸಭೆ ರಚನೆಗೆ ಪಾಲಿಕೆ ಮತ್ತು ಸರ್ಕಾರದ ಮೇಲೆ ಅಗತ್ಯ ಒತ್ತಡಗಳನ್ನು ಹಾಕಬೇಕು ಎಂದು ಕಾತ್ಯಾಯಿನಿ ಚಾಮರಾಜ್ ಹೇಳಿದರು.
ಮಾಹಿತಿ ಹಕ್ಕು ಬಳಸಿಕೊಳ್ಳಿ

   ಮಾಹಿತಿ ಹಕ್ಕು ಕುರಿತು ವಿಷಯ ಮಂಡಿಸಿದ ಬೆಂಗಳೂರಿನ ಗ್ರಾಹಕ ಹಕ್ಕು, ಶಿಕ್ಷಣ ಮತ್ತು ಜಾಗೃತಿ ವೇದಿಕೆ ಮುಖ್ಯಸ್ಥ ವೈ.ಜಿ. ಮುರಳೀಧರನ್, ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಹಾಗೂ ಸರ್ಕಾರದ ಹಣಕಾಸು ನಿರ್ವಹಣೆÉಯಲ್ಲಿ ಹಂತ-ಹಂತವಾಗಿ ಸುಧಾರಣೆ ತರಲು ಮತ್ತು ಪಾರದರ್ಶಕತೆ ಮೂಡಿಸಲು ಮಾಹಿತಿ ಹಕ್ಕು ಕಾಯ್ದೆಯನ್ನು ಪ್ರತಿಯೊಬ್ಬ ನಾಗರಿಕರೂ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಅನೇಕ ಉದಾಹರಣೆಗಳೊಂದಿಗೆ ವಿವರಿಸಿದರು.

    ತುಮಕೂರು ಮಹಾನಗರ ಪಾಲಿಕೆಯ ವೆಬ್‍ಸೈಟ್‍ನ್ನು ವಿಶೇಷವಾಗಿ ಉಲ್ಲೇಖಿಸುತ್ತ, ಇದರಲ್ಲಿ ಮಾಹಿತಿ ಹಕ್ಕು ಕಾಯ್ದೆ ಕಲಂ 4 (1) (ಬಿ) ಪ್ರಕಾರ ಪಾಲಿಕೆಯು ಸ್ವಯಂಪ್ರೇರಣೆಯಿಂದ ಪ್ರಕಟಿಸಬೇಕಾದ ಅದೆಷ್ಟೋ ಸಂಗತಿಗಳನ್ನು ಪ್ರಕಟಿಸಿಯೇ ಇಲ್ಲ. ವೆಬ್‍ಸೈಟ್‍ನಲ್ಲಿ ಮಾಹಿತಿಗಳನ್ನು ಬಹಿರಂಗಗೊಳಿಸುವ ಹಂತದಿಂದಲೇ ಆಡಳಿತ ಸುಧಾರಣೆ ಮತ್ತು ಪಾರದರ್ಶಕತೆ ಆರಂಭವಾಗಬೇಕಾಗಿದೆ. ಸಾರ್ವಜನಿಕರಿಗೆ ಬೇಕಾದ ಅನೇಕ ಸಂಗತಿಗಳು ಈ ಹಂತದಲ್ಲೇ ಗೊತ್ತಾದರೆ, ಮುಂದಿನ ಗೊಂದಲಗಳಿಗೆ ತೆರೆ ಬೀಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮೊದಲನೆಯದಾಗಿ ಇಂತಹ ಸಂಗತಿಗಳತ್ತ ಗಮನಿಸಬೇಕಾಗಿದೆ ಎಂದು ಒತ್ತಿ ಹೇಳಿದರು.

     ಲೋಕಸಭೆ, ವಿಧಾನ ಸಭೆ ಕಲಾಪ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶವಿರುವಾಗ, ಅಷ್ಟೇ ಏಕೆ, ವಾರ್ಡ್ ಸಮಿತಿ ಸಭೆಯನ್ನು ವೀಕ್ಷಿಸಲು ಹಾಗೂ ಅದನ್ನು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲು ಕಾನೂನಿನಲ್ಲಿ ಅವಕಾಶ ಇರುವಾಗ, ಮಹಾನಗರ ಪಾಲಿಕೆ ಸಭೆಯನ್ನು ಸಾರ್ವಜನಿಕರು ಖುದ್ದು ವೀಕ್ಷಿಸಲು ಅಥವಾ ಸಾರ್ವಜನಿಕ ವೀಕ್ಷಣೆಗೆ ಅನುಕೂಲವಾಗುವಂತೆ ಪಾಲಿಕೆ ಸಭೆಯ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲು ಯಾವ ಕಾನೂನು ಅಡ್ಡಿಯಾಗಿದೆ? ಎಂದು ಪ್ರಶ್ನಿಸಿದ ಅವರು, ಇಂತಹ ಸಂಗತಿಗಳನ್ನು ವಿರೋಧಿಸುವುದೆಂದರೆ ಪಾರದರ್ಶಕತೆಯನ್ನೇ ವಿರೋಧಿಸಿದಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

     ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಸಂಪನ್ಮೂಲ ಹೊಂದಿರುವ ಪಾಲಿಕೆಗಳಲ್ಲಿ ಆರ್ಥಿಕ ಪಾರದರ್ಶಕತೆಗಾಗಿ ಇಂತಹ ವಾರ್ಡ್ ಸಮಿತಿಗಳಷ್ಟೇ ಅಲ್ಲದೆ, ಸಲಹಾ ಸಮಿತಿಗಳೂ ರಚನೆಗೊಳ್ಳಬೇಕು. ಅಂತಿಮವಾಗಿ ಜನರ ಸಹಭಾಗಿತ್ವವೇ ಪ್ರಧಾನವಾಗಿದ್ದು, ಈ ನಿಟ್ಟಿನಲ್ಲಿ ನಾಗರಿಕರು ಒತ್ತಡ ಹಾಕಬೇಕು ಎಂದು ವೈ.ಜಿ.ಮುರಳೀಧರನ್ ಹೇಳಿದರು.

     ಸಂವಾದದಲ್ಲಿ ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು, ಪಾಲಿಕೆ ಸದಸ್ಯೆ ಫರೀದಾಬೇಗಂ, ಮಾಜಿ ಪಾಲಿಕೆ ಸದಸ್ಯರಾದ ಪ್ರೆಸ್ ರಾಜಣ್ಣ ಮತ್ತು ಮಹಮದ್ ಹಫೀಜ್, ಮಾಜಿ ನಗರಸಭಾ ಸದಸ್ಯ ಕುಬೇರ ನಾಗಭೂಷಣ್, ರಂಗಕರ್ಮಿ ಡಮರುಗ ಉಮೇಶ್, ಹೋರಾಟಗಾರರಾದ ಎಲ್.ಆರ್.ನಾರಾಯಣಾಚಾರ್, ಇಮ್ರಾನ್ ಪಾಷ, ನಾಗರಿಕ ಸಮಿತಿ ಮುಖಂಡ ಪ್ರಕಾಶ್ ಭಾರದ್ವಾಜ್ ಮೊದಲಾದವರು ಅನೇಕ ವಿಷಯಗಳ ಬಗ್ಗೆ ಚರ್ಚಿಸಿದರು.

      ಸರಸ್ ಫೌಂಡೇಷನ್ ಅಧ್ಯಕ್ಷ ಆರ್.ವಿಶ್ವನಾಥನ್ ಸ್ವಾಗತಿಸಿದರು. ಕಾರ್ಯದರ್ಶಿ ಆರ್.ಎಸ್.ಅಯ್ಯರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಟೂಡಾ ಸದಸ್ಯ ಜಿ.ಕೆ.ಶ್ರೀನಿವಾಸ್ ವಂದಿಸಿದರು. ಕಾರ್ಯಾಗಾರದಲ್ಲಿ ಪಾಲಿಕೆ ಸದಸ್ಯ ವಿಷ್ಣುವರ್ಧನ್, ನಿವೃತ್ತ ಪ್ರಾಚಾರ್ಯ ಸಿ.ಯತಿರಾಜು, ಕೊಳಗೇರಿ ನಿವಾಸಿಗಳ ಸಂಘದ ನರಸಿಂಹಮೂರ್ತಿ, ಕಮ್ಯೂನಿಸ್ಟ್ ಮುಖಂಡ ಬಿ.ಉಮೇಶ್, ಮಾರುತಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಶೇಷಾದ್ರಿ ಒಳಗೊಂಡು ಹಲವು ಗಣ್ಯರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap