ವಾರಣಾಸಿ:
ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿ, ನಾಮಪತ್ರ ಸಲ್ಲಿಸಿದ್ದ ಕಾಮಿಡಿಯನ್ ಶ್ಯಾಮ್ ರಂಗೀಲಾ ಅವರ ನಾಮಪತ್ರವನ್ನು ತಿರಸ್ಕೃತವಾಗಿದೆ.
ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿಯವರ ಧ್ವನಿಯನ್ನು ಅನುಕರಿಸುವ ಮೂಲಕ ದೇಶದಲ್ಲೆಡೆ ಸುದ್ದಿಯಾಗಿದ್ದ ಶ್ಯಾಮ್ ರಂಗೀಲಾ, ತಾನು ನಾಮಪತ್ರದ ಅರ್ಜಿಯನ್ನು ಪಡೆಯಲು ತೊಂದರೆ ಎದುರಿಸುತ್ತಿದ್ದೇನೆ, ಅಧಿಕಾರಿಗಳು ನಾಮಪತ್ರದ ಅರ್ಜಿಯನ್ನು ಕೊಡುತ್ತಿಲ್ಲ ಎಂದು ಆರೋಪಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಸೇರಿದಂತೆ 15 ಅಭ್ಯರ್ಥಿಗಳ ನಾಮಪತ್ರಗಳನ್ನು ಸ್ವೀಕರಿಸಲಾಗಿದೆ ಎಂಬ ಮಾಹಿತಿಯನ್ನು ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಹಾಸ್ಯದ ಮೂಲಕ ಹಿಂದಿ ಭಾಷಿಕ ರಾಜ್ಯಗಳಲ್ಲಿ ಜನಪ್ರಿಯತೆ ಗಳಿಸಿರುವ ಶ್ಯಾಮ್ ರಂಗೀಲಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಇತ್ತೀಚೆಗೆ ಘೋಷಿಸಿದ್ದರು.
ನಾಮಪತ್ರ ಸಲ್ಲಿಸುವ ಕೊನೆಯ ದಿನ ಮೇ 14ರಂದು ವಾರಾಣಸಿಗೆ ಬಂದು ನಾಮಪತ್ರ ಸಲ್ಲಿಸಿದ್ದರು. ನಾಮ ಪತ್ರ ಸಲ್ಲಿಸಿ ಶ್ಯಾಮ್ ರಂಗೀಲಾ ಚುನಾವಣಾಧಿಕಾರಿಯ ಕಚೇರಿಯಿಂದ ಹೊರಬರುತ್ತಿದ್ದಂತೆಯೇ, ನಾಮಪತ್ರ ಸಲ್ಲಿಸಿರುವುದೇ ನಮ್ಮ ವಿಜಯ ಎಂದು ಹೇಳುತ್ತಾ, ವಿಕ್ಟರಿ ಚಿಹ್ನೆಯನ್ನು ಪ್ರದರ್ಶಿಸಿದ್ದರು. ಆದರೆ, ನಾಮಪತ್ರ ಸಲ್ಲಿಸಿ 24 ಗಂಟೆಯೊಳಗೆ ತಿರಸ್ಕರಿಸಲಾಗಿದೆ.