ಜನರ, ತಜ್ಞರ ಸಲಹೆ ಪಡೆದು ಗ್ರಾಮಾಭಿವೃದ್ಧಿಗೆ ಸಮಗ್ರ ಜನರ ಯೋಜನೆ ಅನುಷ್ಠಾನಗೊಳಿಸಿ

ಹಾವೇರಿ

    ಜನರ, ವಿವಿಧ ಕ್ಷೇತ್ರಗಳ ತಜ್ಞರ ಸಲಹೆಗಳನ್ನು ಪಡೆದು ಜನಸಹಭಾಗಿತ್ವದ ಸಮಗ್ರ ಜನರ ಅಭಿವೃದ್ಧಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಮುಂದಾಗುವಂತೆ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಕೇರಳ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ವಿಜಯಾನಂದ ಅವರು ಕರೆ ನೀಡಿದರು.

      ಕಾಗಿನೆಲೆ ಕನಕ ಕಲಾಭವನದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್, ಬ್ಯಾಡಗಿ ತಾಲೂಕು ಪಂಚಾಯತಿ ಹಾಗೂ ಕಾಗಿನೆಲೆ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಷಯ ಕುರಿತು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಆಯೋಜಿಸಲಾದ ಒಂದು ದಿನದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

       ಜನರ ಅಗತ್ಯತೆ, ಅವಶ್ಯಕತೆಗಳನ್ನು ಅವರ ಬೇಡಿಕೆಗೆ ಅನುಸಾರ ರೂಪಗೊಳ್ಳಬೇಕು. ಜನಾಂದೋಲನದ ಮಾದರಿಯಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ಪದವೀಧರರು, ವಿದ್ಯಾವಂತರು, ವಿವಿಧ ಸಾಮಾಜಿಕ ಸಂಘಟನೆಗಳು, ಸ್ವ ಸಹಾಯ ಗುಂಪುಗಳು ತಜ್ಞರಿಂದ ಮಾಹಿತಿ ಪಡೆಯಬೇಕು. ಈ ಮಾಹಿತಿಗಳು ಗ್ರಾಮ ಸಭೆಗಳಲ್ಲಿ ಚರ್ಚೆಗಳಾಗಬೇಕು. ತಜ್ಞ ವಿಶ್ಲೇಷಕರಿಂದ ಮೌಲ್ಯಮಾಪನಕ್ಕೆ ಒಳಪಡಬೇಕು. ಅಂತಿಮವಾಗಿ ಸರ್ವರ ಅಭಿಪ್ರಾಯದಿಂದ ಸಮಗ್ರ ಜನ ಸಹಭಾಗಿತ್ವದ ಯೋಜನೆಗಳು ರೂಪಗೊಳ್ಳುತ್ತದೆ ಎಂದು ಹೇಳಿದರು.

      ಇದೇ ಮಾದರಿಯನ್ನು ಕೇರಳ ಸರ್ಕಾರ ಮಾಡಿತ್ತು. ಅಲ್ಲಿನ ಮುಖ್ಯಮಂತ್ರಿಗಳು ಸಮಾಜದ ವಿವಿಧ ತಜ್ಞರಿಗೆ ಖುದ್ದಾಗಿ ಪತ್ರ ಬರೆದು ಜನಪರ ಯೋಜನೆಗಳನ್ನು ರೂಪಿಸಲು ತಜ್ಞರ ಐಡಿಯಾಗಳನ್ನು ಕೋರಿದರು. ಎಲ್ಲರನ್ನೂ ಒಂದೆಡೆ ಸೇರಿಸಿದರು. ಇಂತಹ ಜನಾಂದೋಲನದಿಂದ ಗ್ರಾಮೀಣಾಭಿವೃದ್ಧಿ ಯೋಜನೆಗಳು ಕೇರಳದಲ್ಲಿ ಯಶಸ್ವಿಯಾಯಿತು. ಈ ಮಾದರಿ ಸಮಗ್ರ ಗ್ರಾಮೀಣಾಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಹೇಳಿದರು.

        ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡಗಳಲ್ಲ. ಸರ್ಕಾರ ನೀಡಿದ ಅನುದಾನವನ್ನು ನಿರ್ಧಿಷ್ಟ ಕ್ಷೇತ್ರಗಳಿಗೆ ಹಂಚಿಕೆಮಾಡಿ ವೆಚ್ಚ ಮಾಡುವುದಲ್ಲ. ಜನಸಂಖ್ಯೆ ಮತ್ತು ಸಂಪನ್ಮೂಲಗಳನ್ನು ಸಮತೋಲನಗೊಳಿಸಿ ಆರೋಗ್ಯ ,ಶಿಕ್ಷಣ, ಮಾನವ ಸಂಪನ್ಮೂಲಗಳ ಬೆಳವಣಿಗೆ , ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಕ್ಷೇತ್ರವಾರು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಯೋಜನೆಗಳನ್ನು ರೂಪಿಸಬೇಕು. ಯೋಜನಾ ವೆಚ್ಚವನ್ನು ತಗ್ಗಿಸಬೇಕು.

     ಸಾಮಾಜಿಕ ಸುಧಾರಣೆ, ಜಾತಿ ಮತ್ತು ಬಡತನ ನಿರ್ಮೂಲನೆ, ದುರ್ಬಲ, ವಿಕಲಚೇತನರ ಏಳ್ಗೆಗೆ ಶೂನ್ಯ ಬಂಡವಾಳದ ಯೋಜನೆ ರೂಪಿತವಾಗಬೇಕು. ಜನರ ಸಾಮೂಹಿಕ ಸಹಭಾಗಿತ್ವ ಈ ಕ್ಷೇತ್ರದಲ್ಲಿ ಹೆಚ್ಚಾಗಬೇಕು. ಮಹಾತ್ಮಗಾಂಧೀಜಿ ಅವರ ಗ್ರಾಮ ಸ್ವರಾಜ್‍ದ ಕಲ್ಪನೆಯಂತೆ ಗ್ರಾಮದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯ ದೃಷ್ಟಿಕೋನದಿಂದ ಯೋಜನೆಗಳನ್ನು ರೂಪಿಸಲು ತಾವು ಬದ್ಧರಾಗಬೇಕು ಎಂದು ಕರೆ ನೀಡಿದರು.

       ಗಾಂಧೀಜಿ ಅವರ 150ನೇ ವರ್ಷಾಚರಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಅವರು ಕಂಡ ಗ್ರಾಮ ಸ್ವರಾಜ್ ಕಲ್ಪನೆ ಸಹಕಾರಗೊಳಿಸಬೇಕು. ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳ ಲಾಭ ದೊರಕಬೇಕು. ಇಂತಹ ಯೋಜನೆಗಳನ್ನು ರೂಪಿಸಬೇಕು. ಗ್ರಾಮ ಸಭೆಗಳಲ್ಲೇ ಯೋಜನೆಗಳು ತಯಾರಾಗಬೇಕು. ಯೋಜನಗೆಳ ತಯಾರಿ ಎಂದರೆ ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಹಂಚಿಕೆಯಲ್ಲ, ಕಡಿಮೆ ವೆಚ್ಚ, ಶೂನ್ಯ ಬಂಡವಾಳದ ಯೋಜನೆಗಳು ಜಾರಿಯಾಗಬೇಕು. ಇದಕ್ಕೆ ಜನರ ಸಹಭಾಗಿತ್ವ, ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದು ಹೇಳಿದರು.

       ಗ್ರಾಮೀಣ ಅಭಿವೃದ್ಧಿಗೆ ಉದ್ಯೋಗ ಖಾತ್ರಿ ಯೋಜನೆಗಳು, 14ನೇ ಹಣಕಾಸು ಯೋಜನೆಯ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬಹಳಷ್ಟು ಅನುದಾನ ಬರುತ್ತಿದೆ. ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಬಹು ಹಂತದ ಬಹು ಸಾಧ್ಯತೆಯ ಸಮಗ್ರ ಅಭಿವೃದ್ಧಿಯ ಯೋಜನೆಯ ಜೊತೆಗೆ ಜೀವ ವೈವಿದ್ಯತೆಗಳ ರಕ್ಷಣೆಗೆ ಆದ್ಯತೆ ನೀಡಿ ಜನಪರ ಯೋಜನೆಗಳನ್ನು ರೂಪಿಸಬೇಕು. ಉದ್ಯೋಗ ಸೃಜನೆ, ಆರೋಗ್ಯ ಹಾಗೂ ಶಿಕ್ಷಣದ ಬೆಳವಣಿಗೆ, ಸೇವಾಲಯದ ಸುಧಾರಣೆ, ಮೂಲ ಸೌಕರ್ಯಗಳ ಸುಧಾರಣೆ, ಆರ್ಥಿಕ ಬೆಳವಣಿಗೆ, ಸಾಮಾಜಿಕ ಸುಧಾರಣೆ, ಮಾನವ ಸಂಪನ್ಮೂಲಗಳ ಬೆಳವಣಿಗೆಗೆ ಪೂರಕವಾಗಿ ಯೋಜನೆ ರೂಪಿಸಿ ಒಂದು ನಿರ್ಧಿಷ್ಟ ಅವಧಿಯಲ್ಲಿ ಯೋಜನೆಗಳು ಪೂರ್ಣಗೊಳ್ಳವಂತೆ ಕ್ರಮವಹಿಸಿ ಎಂದು ಹೇಳಿದರು.

       ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಆಯ್ಕೆಯಾಗಿರುವ ಜನಪ್ರತಿನಿಧಿಗಳಿಗೆ ಹಾಗೂ ಗ್ರಾಮದ ಜನರಿಗೆ ಯೋಜನೆ ರೂಪಿಸುವುದು ಎಂದರೆ ಏನು ಎಂದು ತಿಳಿಯಬೇಕು. ಯೋಜನೆಗಳನ್ನು ರೂಪಿಸುವಾಗ ಯಾವ ಅಂಶಗಳನ್ನು ಗ್ರಹಿಸಬೇಕು ಎಂಬ ಅರಿವು ಇರಬೇಕು. ಯೋಜನೆಯನ್ನು ರೂಪಿಸುವ ಸಮಿತಿಗಳ ಸದಸ್ಯರು ತಮ್ಮ ಕೆಲಸ ಕೇವಲ ಪುನಾರವರ್ತಿತ ಕೆಲಸವೆಂದು ಭಾವಿಸದೇ ಹೊಸದನ್ನು ಚಿಂತಿಸಬೇಕು. ಹೀಗಾದಾಗ ಮಾತ್ರ ಸಮಗ್ರ ಯೋಜನೆಯನ್ನು ತಯಾರಿಸಲು ಸಾಧ್ಯ ಎಂದು ತಿಳಿಸಿದರು.

       ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಸ್.ಕೆ.ಕರಿಯಣ್ಣನವರ ಮಾತನಾಡಿ, ಸರ್ಕಾರವು ಗ್ರಾಮದ ಅಭಿವೃದ್ಧಿಯ ಹೊಣೆಯನ್ನು ನಮಗೆ ನೀಡಿದೆ. ಪ್ರತಿ ಸದಸ್ಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಜನರ ಸಹಭಾಗಿತ್ವದಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕೆಲಸಮಾಡಬೇಕು ಎಂದು ಹೇಳಿದರು.

       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರು ಮಾತನಾಡಿ, ಸ್ಥಳೀಯ ಸಂಸ್ಥೆಗಳು ಅತ್ಯಂತ ಬಲಿಷ್ಠವಾಗಿದೆ. ಗ್ರಾಮ ಪಂಚಾಯತಿ ಸದಸ್ಯರಿಗೆ ಹೆಚ್ಚಿನ ಅಧಿಕಾರವಿದೆ.. ಗ್ರಾಮದ ಅಭಿವೃದ್ಧಿಗೆ ತೆಗೆದುಕೊಳ್ಳುವ ತೀರ್ಮಾನಗಳನ್ನು ಯಾರೂ ಬದಲಾಯಿಸುವಂತಿಲ್ಲ. ತಮಗಿರುವ ಅಧಿಕಾರವನ್ನು ಬಳಸಿಕೊಂಡು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ಜೀವ ವೈವಿದ್ಯತೆಗಳ ರಕ್ಷಣೆ, ಜಲ ಮೂಲಗಳ ರಕ್ಷಣೆ, ಮಾನವ ಸಂಪನ್ಮೂಲಗಳ ಅಭಿವೃದ್ಧಿಗೆ ದೂರದೃಷ್ಟಿಯಿಂದ ಜನಾಭಿಪ್ರಾಯ ಪಡೆದು ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗುವಂತೆ ಮನವಿ ಮಾಡಿಕೊಂಡರು.

       ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಗಣೇಶ ಪ್ರಸಾದ, ಮಾಜಿ ಶಾಸಕರಾದ ಡಿ.ಆರ್.ಪಾಟೀಲ ಮಾತನಾಡಿದರು.ತಾಲೂಕು ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಸವಿತಾ ರಮೇಶ ಸುತ್ತಕೋಟಿ, ಕಾಗಿನೆಲೆ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಹಯಾತಬಿ ಮತ್ತಿಹಳ್ಳಿ, ಉಪ ಕಾರ್ಯದರ್ಶಿ ಗೋವಿಂದಸ್ವಾಮಿ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಜಿ.ಪಂ. ಸದಸ್ಯರು, ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಗಳ ಅಧ್ಯಕ್ಷ, ಉಪಾಧ್ಯಕ್ಷರುಗಳು ಹಾಗೂ ಸದಸ್ಯರುಗಳು ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಸಹಾಯಕ ಕಾರ್ಯದರ್ಶಿ ಜಾಫರ ಸುತಾರ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link