ಬಳ್ಳಾರಿ
ವಿವಾದಾಸ್ಪದ ಪಕ್ಷಗಳ ತೃಪ್ತಿಯೊಂದಿಗೆ ಸಾರ್ವಜನಿಕ ಉಪಯುಕ್ತತೆಗಳ ವಿವಾದಗಳನ್ನು ನಿರ್ಧರಿಸುವಲ್ಲಿ ಖಾಯಂ ಜನತಾ ನ್ಯಾಯಾಲಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವಕುಮಾರ ಹಂಚಾಟೆ ಅವರು ತಿಳಿಸಿದರು.
ನಗರದ ಜಿಲ್ಲಾ ಕೋರ್ಟ್ ಆವರಣದಲ್ಲಿ ಮಂಗಳವಾರರಂದು ವೀಡಿಯೋ ಕಾನ್ಪೆರೆನ್ಸ್‌ನ ಮೂಲಕ ಮಾತನಾಡಿದರು.
ರಾಜ್ಯದಲ್ಲಿ ೬ ಜಿಲ್ಲಾ ಕೇಂದ್ರದಲ್ಲಿ ಜನತಾ ನ್ಯಾಯಾಲಯವನ್ನು ಸ್ಥಾಪನೆ ಮಾಡಲಾಗಿದ್ದು, ಈ ನ್ಯಾಯಾಲಯದ ಮೂಲಕ ಕಾನೂನಿನ ಸೇವೆಗಳಾದ ವಿಮೆ ಸೇವೆ, ಬ್ಯಾಂಕಿಂಗ್ ಹಾಗೂ ಹಣಕಾಸು ಸಂಸ್ಥೆಗಳ ಸೇವೆ, ಪ್ರಯಾಣಿಕರನ್ನು ಅಥವಾ ಸರಕುಗಳನ್ನು ವಾಯು ಮಾರ್ಗ,
ರಸ್ತೆ ಅಥವಾ ನೀರಿ ಮೂಲಕ ಸಾಗಿಸುವ ಸಾಗಣಿಕೆಯ ಸೇವೆ, ಅಂಚೆ, ಟೆಲಿಗ್ರಾಫ್ ಅಥವಾ ದೂರವಾಣಿ ಸೇವೆ, ಸಾರ್ವಜನಿಕರಿಗೆ ವಿದ್ಯುತ್, ನೀರಿನ ಸರಬರಾಜು ಮಾಡುವ ಯಾವುದೇ ಸಂಸ್ಥೆ, ಸಾರ್ವಜನಿಕ ಸಂರಕ್ಷಣೆ ಅಥವಾ ನೈರ್ಮಲ್ಯ ವ್ಯವಸ್ಥೆ, ವಸತಿ ಮತ್ತು ರಿಯಲ್ ಎಸ್ಟೇಟ್ ಸೇವೆ, ಶಿಕ್ಷಣ ಸೇವೆ ಹಾಗೂ ಇತರೆ ಸೇವೆಗಳನ್ನು ಸಾರ್ವಜನಿಕರಿಗೆ ಉಪಯುಕ್ತ ಸೇವೆಗಳಾಗಿರುತ್ತವೆ.
ಈ ಅದಾಲತ್‌ಗಳಿಗೆ ಬರುವ ಪ್ರಕರಣಗಳಲ್ಲಿ ವಿವಾದಕ್ಕೊಳಗಾದ ಸ್ವತ್ತಿನ ಮೌಲ್ಯ ಹಾಗೂ ಹಣಕಾಸು ಸಂಸ್ಥೆಗಳ ವ್ಯವಹಾರಕ್ಕೆ ಸಂಬಂದಪಟ್ಟಂತೆ ಮೌಲ್ಯ ೧ ಕೋಟಿ ರೂ.ಗಳು ಮೀರಿರಬಾರದು ಎಂದರು.
ಜನತಾ ನ್ಯಾಯಾಲಯ ಮುಖ್ಯ ಅಂಶಗಳು:- ಖಾಯಂ ಜನತಾ ನ್ಯಾಯಾಲವು ಜಿಲ್ಲಾ ನ್ಯಾಯಾಧೀಶರಾಗಿರುವ ಅಥವಾ ಜಿಲ್ಲಾ ನ್ಯಾಯಾಧೀಶರಗಿಂತ ಹೆಚ್ಚಿನ ಶ್ರೇಣಿಯ ನ್ಯಾಯಿಕ ಅಧಿಕಾರಿಯಾಗಿರುವ ವ್ಯಕ್ತಿಯೊಬ್ಬರನ್ನು ಅದರ ಅಧ್ಯಕ್ಷರನ್ನಾಗಿ ಮತ್ತು ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದಂತೆ ಸಾಕ್ಷಷ್ಟು ಅನುಭವ ಇರುವ ಇಬ್ಬರ ವ್ಯಕ್ತಿಗಳನ್ನು ಸದಸ್ಯರಾಗಿರುತ್ತಾರೆ.
ವಿವಾದ ಹೊಂದಿರುವ ಯಾವುದೇ ಪಕ್ಷಕಾರನು ಸಾರ್ವಜನಿಕ ಉಪಯುಕ್ತತಾ ಸೇವೆಗಳ ಕುರಿತಂತೆ ಆ ವಿವಾದವನ್ನು ನ್ಯಾಯಾಲಕ್ಕೆ ಕೊಂಡೊಯ್ಯುವುದಕ್ಕೆ ಮೊದಲು ವಿವಾದದ ಇತ್ಯರ್ಥಕ್ಕಾಗಿ ಖಾಯಂ ಜನತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಯಾವುದೇ ಕಾನೂನಿನಡಿ ರಾಜಿ ಮಾಡಿಕೊಳ್ಳುವ ಅವಕಾಶವಿರದ ಅಪರಾಧಕ್ಕೆ ಸಂಬಂಧಿಸಿದ ವಿಷಯವನ್ನು ಇತ್ಯರ್ಥಗೊಳಿಸಲು ಖಾಯಂ ಜನತಾ ನ್ಯಾಯಾಲಯಕ್ಕೆ ಅಧಿಕಾರ ಇರುವುದಿಲ್ಲ.
ಖಾಯಂ ಜನತಾ ನ್ಯಾಯಾಲಯ ಹೊರಡಿಸುವ ಐತೀರ್ಪು :- ಖಾಯಂ ಜನತಾ ನ್ಯಾಯಾಲಯವು ಹೊರಡಿಸುವ ಪ್ರತಿಯೊಂದು ಐತೀರ್ಪುನ್ನೂ ಸಿವಿಲ್ ನ್ಯಾಯಾಲಯದ ಡಿಕ್ರಿಯೆಂದೇ ಪರಿಭಾವಿಸಲಾಗುವುದು. ಈ ಅಧಿನಿಯಮದಡಿ ಪ್ರಕರಣದ ಗುಣಾವಗುಣಗಳ ಮೇರೆಗೆ ಅಥವಾ ಇತ್ಯರ್ಥದ ಒಪ್ಪಂದದಿಂದ ಹೊರಡಿಸಲಾದ ಖಾಯಂ ಜನತಾ ನ್ಯಾಯಾಲಯದ ಪ್ರತಿಯೊಂದು ಐತೀರ್ಪು ಅಂತಿಮವಾದುದಾಗಿದ್ದು ಸಂಬಂಧಿಸಿದ ಪಕ್ಷಕಾರರು ಮತ್ತು ಅವರ ಮೂಲಕ ಕ್ಲೇಮ್ ಮಾಡುವ ಪ್ರತಿಯೊಬ್ಬರಿಗೂ ಬಂಧನಕಾರಿಯಾಗುತ್ತದೆ. ಖಾಯಂ ಜನತಾ ನ್ಯಾಯಾಲಯ ಐತೀರ್ಪಿನ ವಿರುದ್ಧ ಯಾವುದೇ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವಂತಿಲ್ಲ ಎಂದರು.
ಖಾಯಂ ಜನತಾ ನ್ಯಾಯಾಲಯ ಜಾಗೃತಿ ಮೂಡಿಸಿ: ಖಾಯಂ ಜನತಾ ನ್ಯಾಯಾಲಯವು ಪ್ರತಿ ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು. ಈ ಜಾಗೃತಿ ಜಾಥದಲ್ಲಿ ಚರ್ಚೆ, ಪ್ರಬಂಧ ಮತ್ತು ಭಾಷಣ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಮುಂದಿನ ದಿನಗಳಲ್ಲಿ ಖಾಯಂ ಜನತಾ ನ್ಯಾಯಾಲಯದ ಕುರಿತು ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮಗಳಲ್ಲಿ ಸಾಕ್ಷರತಾ ಬಸ್ ಸಂಚಾರದ ಮೂಲಕ ಅರಿವು ಮೂಡಿಸಬೇಕು. ಪ್ರಕರಣಗಳ ಸಂಕ್ಷಿಪ್ತವಾಗಿ ಸಾರ್ವಜನಿಕರಿಗೆ ವಿವರಿಸುವ ಪ್ರಯತ್ನವನ್ನು ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಕೋರ್ಟ್ ವ್ಯವಸ್ಥಾಪಕ ವೀರೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.