ತುಮಕೂರು:
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೋಮವಾರ ಬಿಜೆಪಿ ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿಗೆ ಕೆಸ್ತೂರು ಗ್ರಾಪಂ ಪಿಡಿಓ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ನೀಡಿದ್ದಾರೆ. ಕೆಸ್ತೂರು ಗ್ರಾಮ ಪಂಚಾಯಿತಿ ಪಿ.ಡಿ.ಓ ಬಿಜೆಪಿ ಕಾರ್ಯಕರ್ತ ಕೆ.ಎನ್ ರವಿಗೆ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಮುಂದೆ ಹಾರಿಸಿರುವ ಬಿಜೆಪಿ ಬಾವುಟ ತೆರವು ಗೊಳಿಸಲು ಜೂನ್ 22 ರಂದು ಮೌಖಿಕವಾಗಿ ಸೂಚಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೆಸ್ತೂರು ಮುಖ್ಯ ರಸ್ತೆ ಮೂಲಕ ಹಾದುಹೋಗುತ್ತಿದ್ದು, ರವಿ ಅಂಗಡಿ ಮುಂದಿರುವ ಬಿಜೆಪಿ ಬಾವುಟವನ್ನು ತೆರವುಗೊಳಿಸಿ, ನಂತರ ಬೇಕಿದ್ದರೆ ಹಾಕಿಕೊಳ್ಳಿ ಎಂದು ಪಿಡಿಓ ಮೌಖಿಕ ಆದೇಶ ನೀಡಿದ್ದಾರೆ. ರವಿ ಬಿಜೆಪಿ ಪಕ್ಷದ ಬಾವುಟ ತೆರವುಗೊಳಿಸದ ಕಾರಣಕ್ಕೆ ರವಿಗೆ ಎಚ್ಚರಿಕೆ ನೋಟೀಸು ನೀಡಿದ್ದಾರೆ.
ಇದು ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾಂತಂತ್ರ್ಯವನ್ನು ಹತ್ತಿಕ್ಕುವ ಹಾಗೂ ರಾಷ್ಟ್ರೀಯ ಪಕ್ಷದ ಧ್ವಜಕ್ಕೆ ಅಗೌರವ ತೋರುವುದಾಗಿದೆ. ಇದು ಖಂಡನೀಯ ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ. ಸಂಬಂಧಿಸಿದ ಪಿ.ಡಿ.ಓ ಈ ತರಹದ ನೋಟೀಸನ್ನು ನೀಡಿ, ಕ್ರಮಕ್ಕೆ ಮುಂದಾಗಿರುವುದು ಪಕ್ಷ ರಾಜಕಾರಣವನ್ನು ಸೂಚಿಸುತ್ತದೆ.
ಇದೇ ತರಹದ ವರ್ತನೆಯನ್ನು ಜಿಲ್ಲೆಯಲ್ಲಿ ಹಲವಾರು ಸರ್ಕಾರಿ ಅಧಿಕಾರಿಗಳು ನಡೆಸುತ್ತಿದ್ದು, ಇದರ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಮತ್ತು ಪಕ್ಷಾತೀತವಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕಾಗಿದೆ ಎಂದೂ ಕೂಡ ಅವರು ಆಗ್ರಹಿಸಿದ್ದಾರೆ. ಶಾಸಕ ಜೊತೆಯಲ್ಲಿ ಶಿವಪ್ರಸಾದ್, ವಿಶ್ವನಾಥ್, ಅಪ್ಪಾಜಪ್ಪ, ರವಿ, ಸರೋಜಗೌಡ, ಪ್ರೇಮಹೆಗ್ಗಡೆ, ಶ್ರೀನಿವಾಸ್,ಡಾ.ಫರ್ಜಾನ ರಹೀಂ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
