ಬೆಂಗಳೂರು
ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಸರ್ಕಾರ ಉರುಳಿಸಲು ಕಾಂಗ್ರೆಸ್ ನಾಯಕ ರಮೇಶ್ ಜಾರಕಿಹೊಳಿ ವಿದ್ಯುಕ್ತ ಪ್ರಯತ್ನ ಆರಂಭಿಸಿರುವ ಕುರಿತು ತಣ್ಣಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ವರಿಷ್ಟ,ಮಾಜಿ ಪ್ರಧಾನಿ ದೇವೇಗೌಡ,ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಮೇಶ್ ಜಾರಕಿಹೊಳಿ ಏನು ಮಾಡುತ್ತಾರೆ ಎಂಬುದು ಕಾಂಗ್ರೆಸ್‍ಗೆ ಬಿಟ್ಟ ವಿಷಯ.ನಮಗೆ ಸಂಬಂಧಪಟ್ಟವಿಷಯವಲ್ಲ ಎಂದಿದ್ದಾರೆ.
ಸರ್ಕಾರಕ್ಕೆ ಏನೋ ಗಂಡಾಂತರವಾಗಲಿದೆ ಎಂಬುದು ಭ್ರಮೆ.ಸರ್ಕಾರಕ್ಕೆ ಏನೂ ಆಗುವುದಿಲ್ಲ.ಬದಲಿಗೆ ಈಗಿರುವುದಕ್ಕಿಂತ ಅದು ಮತ್ತಷ್ಟು ಸುಭದ್ರವಾಗಿರಲಿದೆ ಎಂದು ಹೇಳಿದ್ದಾರೆ.
ಪದ್ಮನಾಭನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರಕ್ರಿಯಿಸಿದ ಗೌಡರು, ನಾನು ಆ ಬಗ್ಗೆ ಮಾತನಾಡುವುದಿಲ್ಲ ಎಂದಷ್ಟೇ ಹೇಳಿದರು.
ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ವಿಚಾರ ಕುರಿತು ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರು. ಹಾಗಾಗಿ, ಆ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡುವುದಿಲ್ಲ. ಕಾಂಗ್ರೆಸ್ ನಿಂದ ಅಭ್ಯರ್ಥಿಗಳು ಹಾಕುತ್ತಾರೆ. ನಾವು (ಜೆಡಿಎಸ್) ಅದಕ್ಕೆ ಬೆಂಬಲ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ವಿಚಾರ ಕುರಿತು ಸಿಎಂ ಕುಮಾರಸ್ವಾಮಿಯವರು ನೋಡಿಕೊಳ್ಳುತ್ತಾರೆ. ನನಗೆ ಆ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲ ಎಂದರು.
ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಉಮೇಶ್ ಜಾಧವ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡರು. ಇನ್ನು ಕುಂದಗೊಳ ಕ್ಷೇತ್ರದ ಶಾಸಕರಾಗಿ, ಕೆಲ ತಿಂಗಳ ಹಿಂದೆಯಷ್ಟೇ ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದರು. ಹಾಗಾಗಿ, ಈ ಎರಡೂ ಕ್ಷೇತ್ರಗಳಿಗೆ ಮೇ 19 ರಂದು ಉಪಚುನಾವಣೆ ನಡೆಯಲಿದ್ದು, ಈ ಕ್ಷೇತ್ರಗಳ ಫಲಿತಾಂಶ ಸಹ ಮೇ 23 ರಂದು ಹೊರಬೀಳಲಿದೆ.