ಜಾತಿ,ಬೇಧ ನಿರಾಕರಣೆ ಸಮಾಜ ನಿರ್ಮಾಣ ಅವಶ್ಯ : ಡಾ.ಬಂಜಗೆರೆ ಜಯಪ್ರಕಾಶ್

ಚಿತ್ರದುರ್ಗ:

   ಜಾತಿ ರಹಿತ ಸಮ ಸಮಾಜದ ನಿರ್ಮಾಣಕ್ಕಾಗಿ ಮತ್ತೆ ಕಲ್ಯಾಣ ಕಾರ್ಯಕ್ರಮವನ್ನು ಡಾ.ಪಂಡಿತಾರಾಧ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಆಯೋಜಿಸಿರುವುದು ಅನಿವಾರ್ಯ ಮತ್ತು ಪ್ರಸ್ತುತವಾಗಿದೆ ಎಂದು ಚಿಂತಕ, ಸಾಹಿತಿ, ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.ಇಲ್ಲಿನ ಪತ್ರಕರ್ತರ ಭವನದಲ್ಲಿ ಚಿತ್ರದುರ್ಗದ ಅರಿವಿನ ಚಾವಡಿ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ಮತ್ತೆ ಕಲ್ಯಾಣ ಏಕೆ, ಹೇಗೆ ಎಂಬುದರ ಕುರಿತ ಮಾತುಕತೆಯಲ್ಲಿ ಅವರು ಸಂವಾದ ನೆಡೆಸಿ ಮಾತನಾಡಿದರು.

     ಮತ್ತೆ ಕಲ್ಯಾಣ ಎನ್ನುವುದು ಲಿಂಗಾಯತರಿಗಷ್ಟೇ ಸೀಮಿತವಲ್ಲ, ಮತ್ತೆ ಕಲ್ಯಾಣ ಸಮರೋಪಾದಿಯಲ್ಲಿ ಆಗಬೇಕಾದರೆ ಎಲ್ಲ ಜಾತಿಗಳೂ ಈ ಕಲ್ಯಾಣ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.ಜಾತಿ ಬೇಧಗಳನ್ನು ನಿರಾಕರಿಸಿದ ಸಮಾಜಬೇಕು. ಕಲ್ಯಾಣ ಎಂದರೆ ಅದೊಂದು ರೂಪಕವಾಗಿದೆ. ವಿಷಮತೆಯ ಸನ್ನಿವೇಶದಲ್ಲಿ ನಾವಿದ್ದೇವೆ. ಶೋಷಣೆ, ಅಸ್ಪೃಶ್ಯತೆ, ಅಸಮಾನತೆಗಳನ್ನು ಅಳಿಸಿ ಹಾಕಲು 12ನೇ ಶತಮಾನದಲ್ಲಿ ನಡೆದ ಬಸವ ಕ್ರಾಂತಿಯು ಎಂದೆಂದಿಗೂ ಶಾಶ್ವತ ಮತ್ತು ಅತ್ಯಗತ್ಯವಲ್ಲದೆ ಇಂದಿನ ಅನಿವಾರ್ಯ ಕೂಡಾ ಆಗಿದೆ ಎಂದರು.

      ಜಾತಿ ಇಂದು ನಿರ್ಣಯಕ ಶಕ್ತಿಯಾಗಿದೆ. ಇದರಿಂದಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟಿನಲ್ಲಿದ್ದೇವೆ. ವೈದಿಕ ವ್ಯವಸ್ಥೆಗೆ, ಜಾತಿ ವ್ಯವಸ್ಥೆಗೆ ಭಿನ್ನವಾಗಿದೆ. ಸ್ನೇಹಿತರಾಗಲು ಜಾತಿ ತೀರ್ಮಾನ ಮಾಡುತ್ತದೆ. ಜಾತಿ ಹೊಡೆದು ಹಾಕುವ ಕೆಲಸ ಆಗುತ್ತಿಲ್ಲ. ಅಂದು ಅನುಭವ ಮಂಟಪ ಜಾತಿ ಬೇಧಗಳನ್ನು ಹೊಡೆದು ಹಾಕಿತು. ಆದರೆ ಇಂದು ಜಾತಿಗಳು ಹೆಚ್ಚು ಗಟ್ಟಿಯಾಗತೊಡಗಿವೆ. ಜಾತಿ, ಭಕ್ತಿ, ದೇವರು ಎನ್ನುವ ಹೆಸರಿನಲ್ಲಿ ವಿಪರೀತ ಮೌಢ್ಯಕ್ಕೆ ತಳ್ಳಲಾಗುತ್ತಿದೆ. ಮೌಢ್ಯದಿಂದಾಗಿ ಮನುಷ್ಯ ಆತಂಕಕ್ಕಿಡಗಿದ್ದಾನೆ. ಜಾತಿಗಳು ಗೋಡೆಗಳು ಬಲಿಷ್ಠವಾದಷ್ಟು ದೇಶಕ್ಕೆ ಮಾರಕ ಎಂದು ಎಚ್ಚರಿಸಿದರು.

     ಲಿಂಗಾಯತ ಜಾತಿಯ ಪುನರುಜ್ಜೀವನಕ್ಕಾಗಿ ಅಥವಾ ಸಂಘಟನೆಗಾಗಿ ಮತ್ತೆ ಕಲ್ಯಾಣ ಕಾರ್ಯಕ್ರಮ ಎನ್ನುವ ತಪ್ಪು ಕಲ್ಪನೆಯಿಂದ ಹೊರಬರಬೇಕು. ತಪ್ಪು ತಿಳಿವಳಿಕೆಯೇ ಬಹುದೊಡ್ಡ ಶತ್ರು. ಇಂತಹ ತಪ್ಪು ಗ್ರಹಿಕೆಯಾದರೆ ದೇಶಕ್ಕೆ ಮುಳುವಾಗಲಿದೆ. ಕಲ್ಯಾಣ ಎನ್ನುವುದು ಲಿಂಗಾಯತರಿಗೆ ಸೀಮಿತವಲ್ಲ. ಶೋಷಿತ ತಳ ಸಮುದಾಯಗಳು ಕಲ್ಯಾಣದ ಕನಸು ಕಾಣಬೇಕು ಎಂದು ಹೇಳಿದರು.

     ಇಂದಿನ ಸಂದಿಗ್ದತೆಗಳನ್ನು ದೂರ ಮಾಡಬೇಕಾದರೆ ಪ್ರತಿಯೊಂದು ಜಾತಿಯು ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಒಳಗೊಳ್ಳಬೇಕಿದೆ. ಅಸಂಖ್ಯಾತ ಜಾತಿಗಳನ್ನು ಒಗ್ಗೂಡಿಸಿಕೊಂಡೇ ಕಲ್ಯಾಣ ಮಾಡಲಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.ಕನ್ನಡ ವಿವೇಕ ಪ್ರಜ್ಞೆ ನಾಶ ಮಾಡಲು ಸಾಧ್ಯವಿಲ್ಲ. ಜೈನ, ಬೌದ್ಧ ಧರ್ಮಕ್ಕೆ ಆಶ್ರಯ ನೀಡಿದ್ದು ಇದೇ ಕನ್ನಡದ ನೆಲ ಎನ್ನುವುದು ಬಹಳ ಮುಖ್ಯ. 12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕಕ್ಕೆ ಒತ್ತು ನೀಡಿದರು. ವೃತ್ತಿ ಆಧರಿತವಾಗಿ ವ್ಯಕ್ತಿಗಳನ್ನು ಗುರುತಿಸಿದರು.

     ಕಾಯಕ ಎಂದರೆ ದೇವರಿಗಿಂತ ದೊಡ್ಡದು. ಕಾಯಕ ದುಡಿದು ತಿನ್ನು ಎನ್ನುತ್ತದೆ. ಕಾಯಕ ಎಂದೂ ಭಿಕ್ಷೆ ಬೇಡು ಎನ್ನುವುದಿಲ್ಲ. ಕಾಯಕ ಎಂದರೆ ತತ್ವ. ಅದು ಶ್ರಮ ಹಾಕಿ ದುಡಿದು ಹೊಟ್ಟೆ ತುಂಬಿಸಲು ಹೇಳುತ್ತದೆ. ಕಾಯಕ ಜೀವಿಗಳು ಸಹೋದರರಾಗಿದ್ದಾರೆ. ಅವರು ಸಾಮಾಜಿಕ ತತ್ವದ ಆಧಾರದಲ್ಲಿ ಸಮಾಜ ನಿರ್ಮಾಣ ಮಾಡಿದ್ದಾರೆ. ದೇವಸ್ಥಾನ ಬೇರೆ, ಪೂಜೆ ಬೇರೆ, ಕೆಲಸ ಬೇರೆ ಎಂದು 12ನೇ ಶತಮಾನದಲ್ಲಿ ತಿಳಿದಿರಲಿಲ್ಲ.

      ಅಂದರೆ ಮಾಡುವ ಕಾಯಕದಲ್ಲೇ ದೇವರು, ದೇವಸ್ಥಾನ, ಪೂಜೆಯನ್ನು ಕಾಣುತ್ತಿದ್ದರು ಎಂದು ಹೇಳಿದರು.ದುಡಿಯದೇ ಊಟ ಮಾಡುವುದು ಪಾಪ ಎನ್ನುವ ಪ್ರಜ್ಞೆ ಕಾಯಕ ಜೀವಿಗಳಲ್ಲಿತ್ತು. ಶ್ರಮ ಜೀವಿಗಳು ಎಂದೂ ರಾಜಾಶ್ರಯ ಕೇಳಿದವರಲ್ಲ, ಭಿಕ್ಷೆ ಬೇಡಿದವರಲ್ಲ, ಕಾಯಕದಿಂದ ದುಡಿದು ಜೀವನ ಮಾಡಿದವರು ಎಂದು ಅವರು ತಿಳಿಸಿದರು.

      12ನೇ ಶತಮಾನದಲ್ಲಿ ನೇಕಾರ, ಕಮ್ಮಾರ, ಕುಂಬಾರ, ಅಂಬಿಗ ಸೇರಿದಂತೆ ಇತರೆ 17 ಜಾತಿಗಳು ಅಸ್ಪೃಶ್ಯರಾಗಿದ್ದರು. ಇವರಿಗೆ ಯಾವುದೇ ರೀತಿಯ ಸಾಮಾಜಿಕ ಸ್ಥಾನಮಾನ ಇರಲಿಲ್ಲ. ಇಂಥವುಗಳ ವಿರುದ್ಧ ಬಸವಣ್ಣ ಹೋರಾಟ ಮಾಡಿದರು ಎಂದರು.ಮಠ ಮಾನ್ಯಗಳು, ಬಸವಣ್ಣನವರ ಅನುಭವ ಮಂಟಪದಲ್ಲಿ 770 ಸದಸ್ಯರಿದ್ದಂತೆ, ನುಡಿದಂತೆ ನಡೆದಿದ್ದರೆ ಮತ್ತೆ ಕಲ್ಯಾಣದ ಅಗತ್ಯ ಇತ್ತೇ ಎನ್ನುವ ಪ್ರಶ್ನೆಗೆ, ನೂರಷ್ಟು ಸತ್ಯ. ಆದರೆ ಆಗದೆ ಇದ್ದುದರಿಂದಾಗಿ ಮತ್ತೆ ಕಲ್ಯಾಣ ಕಾರ್ಯಕ್ರಮದತ್ತ ಹೋಗಬೇಕಿದೆ ಎಂದು ಹೇಳಿದರು.
ಅರಿವಿನ ಚಾವಡಿ ಹೊಳೆಯಪ್ಪ, ಚಿಂತಕರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಸಮಾಜ ಸೇವಕರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link