ಘಟಪರ್ತಿ ಗ್ರಾಮದ ರಸ್ತೆಗಳಲ್ಲಿ ಸಂಚಾರ ನಡೆಸಿದ ಪ್ರೊಬೆಷನರಿ ಜಿಲ್ಲಾಧಿಕಾರಿ

0
35

ಚಳ್ಳಕೆರೆ

         ಉರಿಯುವ ಸುಡು ಬಿಸಿಲು, ಶಾಲೆ ದಾಖಲಿಸುವಂತೆ ಬ್ಯಾನರ್ ಹಿಡಿದು ಸಾಗಿದ ಮಕ್ಕಳು, ಗ್ರಾಮದ ರಸ್ತೆಗಳಲ್ಲಿ ತಮಟೆ ಬಾರಿಸುವ ಮೂಲಕ ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಮನವಿ ಮಾಡುತ್ತಾ ನಡೆದ ಪ್ರೊಬೆಷನರಿ ಜಿಲ್ಲಾಧಿಕಾರಿ ಡಾ.ಕೆ.ನಂದಿನಿದೇವಿ. ಜಿಲ್ಲಾಧಿಕಾರಿ ಹಾಗೂ ಇಲಾಖೆ ಅಧಿಕಾರಿಗಳು ರಸ್ತೆಯಲ್ಲಿ ಓಡಾಡುತ್ತಾ ಶಾಲೆ ಬಿಟ್ಟ ಮಕ್ಕಳನ್ನು ದಾಖಲಿಸುವಂತೆ ಮನವಿ ಮಾಡುತ್ತಿದ್ದು ಇಡೀ ಗ್ರಾಮದ ಜನತೆ ಮೂಕವಿಸ್ಮಿತರಾಗಿ ನೋಡಿದರು.

         ತಾಲ್ಲೂಕಿನ ತಳಕು ಹೋಬಳಿಯ ಘಟಪರ್ತಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದ ಶಾಲೆ ಬಿಟ್ಟ ಮಕ್ಕಳ ದಾಖಲಾತಿ ಅಂದೋಲನದ ನೇತೃತ್ವ ವಹಿಸಿದ್ದ ಜಿಲ್ಲಾಧಿಕಾರಿ ಡಾ.ನಂದಿನಿದೇವಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಎರಡೂ ಬದಿಯಲ್ಲಿ ಜನ ನಿಂತು ಜಿಲ್ಲಾಧಿಕಾರಿಗಳ ಶಿಕ್ಷಣದ ಬಗ್ಗೆ ಇರುವ ಕಾಳಜಿಯನ್ನು ವೀಕ್ಷಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ವಿವಿಧ ಇಲಾಖೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಜಾಗೃತಿ ಅಂದೋಲದಲ್ಲಿ ಭಾಗವಹಿಸಿದಲ್ಲದೆ ಗ್ರಾಮದ ವಿವಿಧ ಮನೆಗಳಿಗೆ ಭೇಟಿ ನೀಡಿ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವಂತೆ ಪೋಷಕರಿಗೆ ತಿಳಿ ಹೇಳಿದರು.

          ಈ ಸಂದರ್ಭದಲ್ಲಿ ಗ್ರಾಮದ ಸರಸ್ವತಮ್ಮ ಮತ್ತು ತಿಪ್ಪೇಸ್ವಾಮಿ ಎಂಬುವವರ ಪುತ್ರ ಅಭಿಷೇಕ 9ನೇ ತರಗತಿಯನ್ನು ಕಳೆದ ಏಪ್ರೀಲ್ ಮಾಹೆಯಲ್ಲಿ ಪಾಸಾಗಿದ್ದು, ಜೂನ್ ತಿಂಗಳಲ್ಲಿ 10ನೇ ತರಗತಿಗೆ ಹೋಗದೆ ಶಾಲೆಯನ್ನು ಅರ್ಥಕ್ಕೆ ಕೈಬಿಟ್ಟಿದ್ದ. ಈ ಸಂದರ್ಭದಲ್ಲಿ ಅವರ ಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ತಂಡ ನಿಮ್ಮ ಮನೆಯ ನಿಮ್ಮ ಮಕ್ಕಳು ಉತ್ತಮ ಬದುಕನ್ನು ನಡೆಸಬೇಕೆಂಬ ಹಂಬಲ ಹಾಗೂ ಅಭಿಲಾಷೆ ನಿಮಗೆ ಇಲ್ಲವೆ. ಅವನು ಓದಿ ಜ್ಞಾನವಂತನಾಗಿ ಸರ್ಕಾರದ ಮಟ್ಟದಲ್ಲೇ ಒಬ್ಬ ಅಧಿಕಾರಿಯಾಗಿ ಕಾರ್ಯನಿರ್ವಹಿಸುವಂತಾದರೆ ಅದು ನಿಮ್ಮ ಗ್ರಾಮಕ್ಕಲ್ಲ, ಇಡೀ ರಾಜ್ಯಕ್ಕೆ ಉತ್ತಮ ಸಂದೇಶ ನೀಡುತ್ತದೆ. ಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸಲು ಪೋಷಕರು ಯಾವ ಹಂತದಲ್ಲೂ ಪ್ರಯತ್ನಿಸಬಾರದು. ಬದಲಾಗಿ ನೀವೆ ಸ್ವಯಂ ಪ್ರೇರಿತರಾಗಿ ಮಕ್ಕಳ ಶಿಕ್ಷಣಕ್ಕೆ ಮುಂದಾಗಬೇಕು. ಇಂದು ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಮಗನ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಇಲ್ಲಿಗೆ ಆಗಮಿಸಿದ್ದು, ನೀವು ಇತರ ಪೋಷಕರಿಗೆ ತಿಳಿಸಿ ಮಕ್ಕಳ ಶಿಕ್ಷಣಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.

         ಜಿಲ್ಲಾಧಿಕಾರಿಗಳ ಮನವಿಯನ್ನು ಆಲಿಸಿದ ಸರಸ್ವತಮ್ಮ ಸಂತೋಷದಿಂದ ಒಪ್ಪಿಗೆ ನೀಡಿ ನಾಳೆಯಿಂದಲೇ ನನ್ನ ಮಗನನ್ನು ಶಾಲೆಗೆ ತಪ್ಪದೆ ಕಳುಹಿಸಿಕೊಡುತ್ತೇನೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಲಾಖೆ ಮನೆ ಬಾಗಿಲಿಗೆ ಬಂದಿರುವುದು ನಮಗೆ ಸಂತಸ ಮೂಡಿಸಿದೆ. ಮಕ್ಕಳ ಶಿಕ್ಷಣದ ಬಗ್ಗೆ ಇಲಾಖೆ ಹಾಗೂ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದು ಎಲ್ಲಾ ಪೋಷಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಮಕ್ಕಳ ಶಿಕ್ಷಣಕ್ಕೆ ಯಾವ ಪೋಷಕರು ಮುಂದಿನ ದಿನಗಳಲ್ಲಿ ಅಡ್ಡಿಯಾಗಬಾರದು ಎಂದರು.

ಬಿಇಒ ಸಿ.ಎಸ್.ವೆಂಕಟೇಶಪ್ಪ ಮಾತನಾಡಿ, ಪ್ರಸ್ತುತ ಘಟಪರ್ತಿ ಗ್ರಾಮದಲ್ಲಿ ಒಟ್ಟು 18 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯನ್ನು ಬಿಟ್ಟಿದ್ದು, ಅ ಪೈಕಿ ಮನೆ ಮನೆಗೆ ತೆರಳಿ ಪೋಷಕರ ಮನವಲಿಸುವ ಕಾರ್ಯ ಮುಂದುವರೆದಿದೆ. ಇದರ ಫಲವಾಗಿ ಜಿಲ್ಲಾಧಿಕಾರಿಗಳ ಮನವಿಯನ್ನು ಪುರಸ್ಕರಿಸಿದ ಪೋಷಕರು ಒಟ್ಟು 6 ಮಕ್ಕಳನ್ನು ಇಂದೇ ಶಾಲೆಗೆ ಕರೆತಂದಿರುತ್ತಾರೆ. ಮುಂದಿನ ದಿನಗಳಲ್ಲಿ ಶಾಲೆಯ ಶಿಕ್ಷಕರಿಗೆ ಭಾಗಿ ಉಳಿದ ಎಲ್ಲಾ ಮಕ್ಕಳನ್ನು ಶಾಲೆಗೆ ವಾಪಾಸ್ ಕರೆತರುವಂತೆ ಸೂಚನೆ ನೀಡಲಾಗಿದೆ ಎಂದರು. ತಾಲ್ಲೂಕಿನಲ್ಲಿ ಒಟ್ಟು 1320 ವಿದ್ಯಾರ್ಥಿಗಳು ಶಾಲೆಯಿಂದ ಹೊರ ಉಳಿದಿದ್ದಾರೆಂಬ ಅಂಕಿಅಂಶವಿದೆ. ಆದರೆ, ಅದರಲ್ಲಿ ಬಹುತೇಕರು ವರ್ಗಾವಣೆಯನ್ನು ಪಡೆದು ಹೋಗಿರುತ್ತಾರೆ. ಪ್ರಸ್ತುತ 190 ಮಕ್ಕಳು ಮಾತ್ರ ಶಾಲೆಯಿಂದ ಹೊರಗುಳಿದಿದ್ದು ಅವರೆಲ್ಲರನ್ನೂ ಪುನಃ ಶಾಲೆಗೆ ಕರೆತರುವ ಕಾರ್ಯಕ್ರಮ ಮುಂದುವರೆಯಲಿದೆ ಎಂದರು.

          ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮತಿಪ್ಪೇಸ್ವಾಮಿ, ಮುಖ್ಯೋಪಾಧ್ಯಾಯಿನಿ ಬಿ.ಆರ್.ಶಾಂತಮ್ಮ, ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ಬಿಆರ್‍ಸಿ ಮಂಜಪ್ಪ, ಸಿಆರ್‍ಪಿ ಪ್ರಕಾಶ್, ಗ್ರಾಮದ ಮುಖಂಡರು ಜಾಗೃತಿ ಜಾಥದಲ್ಲಿ ಅಧಿಕಾರಿಗಳೊಂದಿಗೆ ಗ್ರಾಮದ ರಸ್ತೆಗಳಲ್ಲಿ ಹೆಜ್ಜೆ ಹಾಕಿದರು. ಇಡೀ ಗ್ರಾಮವೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಂದ ತುಂಬಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here