ಬೆಂಗಳೂರು
ತೀವ್ರ ಕುತೂಹಲ ಕೆರಳಿಸಿದ್ದ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಕೊನೆಗೂ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ಮೇಲ್ಮನೆ ಸದಸ್ಯ ಬಿಇಎಂಎಲ್ ಕಾಂತರಾಜು ಅವರ ಹೆಸರನ್ನು ಅಖೈರುಗೊಳಿಸಿದೆ. ಪಕ್ಷಕ್ಕೆ ದ್ರೋಹ ವೆಸಗಿ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿರುವ ಅನರ್ಹ ಶಾಸಕ ಗೋಪಾಲಯ್ಯ ಅವರನ್ನು ಉಪಚುನಾವಣೆಯಲ್ಲಿ ಸದೆಬಡಿಯಲು ಜೆಡಿಎಸ್ ವರಿಷ್ಠರು ರಣತಂತ್ರ ರೂಪಿಸಿದೆ. ಗೋಪಾಲಯ್ಯ ವಿರುದ್ಧ ಸರಿದೂಗಬಲ್ಲ ಅಭ್ಯರ್ಥಿಗಾಗಿ ಅಳೆದು ತೂಗಿ ಹುಡುಕಾಟ ನಡೆಸಿದ್ದರು. ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಡಾ.ಗಿರೀಶ್ ನಾಶಿ ಅವರನ್ನು ಈ ಮೊದಲು ಅಭ್ಯರ್ಥಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿತ್ತಾದರೂ ಇನ್ನೋರ್ವ ಆಕಾಂಕ್ಷಿಯಾಗಿದ್ದ ಮಾಜಿ ಮೇಯರ್ ಭದ್ರೇಗೌಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಇಬ್ಬರನ್ನೂ ಮನವೊಲಿಸುವ ಪ್ರಯತ್ನ ನಡೆಸಲಾಗಿತ್ತಾದರೂ ಅದು ಸಫಲವಾಗಲಿಲ್ಲ. ಅಲ್ಲದೇ ಗಿರೀಶ್ ನಾಶಿ ಕ್ಷೇತ್ರದ ಜನರಿಗೆ ಅಷ್ಟಾಗಿ ಪರಿಚಯವೂ ಇಲ್ಲ. ಕೊನೆಕ್ಷಣದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದು, ಕೊನೆಯ ಹಂತದಲ್ಲಿ ಮತಗಳಿಕೆ ಸಾಧ್ಯವಿಲ್ಲ ಎಂಬ ಲೆಕ್ಕಾಚಾರವನ್ನು ಶುಕ್ರವಾರ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಚರ್ಚಿಸಲಾಯಿತು. ಮತ್ತೊಂದು ಕಡೆ ಬಿಜೆಪಿಯ ಗೋಪಾಲಯ್ಯ ಸಾಕಷ್ಟು ಬಲಶಾಲಿಯಾಗಿದ್ದು ಗೋಪಾಲಯ್ಯಗೆ ಎದಿರೇಟು ನೀಡಬಲ್ಲ ಅಭ್ಯರ್ಥಿಯನ್ನೇ ಕಣಕ್ಕಿಳಿಸುವುದು ಮುಖ್ಯ. ಕ್ಷೇತ್ರವನ್ನು ಮತ್ತೊಮ್ಮೆ ವಶಕ್ಕೆ ಪಡೆಯಲು ಮೇಲ್ಮನೆ ಸದಸ್ಯ ಕಾಂತರಾಜು ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.
ಮತ್ತೊಂದು ಕಡೆ ಅನರ್ಹ ಶಾಸಕರ ನಾಯಕ ರಮೇಶ್ ಜಾರಕಿಹೊಳಿ ಪ್ರತಿನಿಧಿಸುತ್ತಿರುವ ಗೋಕಾಕ್ ಕ್ಷೇತ್ರವನ್ನು ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಚುನಾವಣಾ ಉಸ್ತುವಾರಿ ಹೊತ್ತಿದ್ದರಾದರೂ ಜಿಲ್ಲೆಯಲ್ಲಿ ಜೆಡಿಎಸ್ ಗೆ ಹೇಳಿಕೊಳ್ಳುವಂತಹ ಬಲ ಇಲ್ಲ. ನೆರೆ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರಿಂದ ಒಂದಿಷ್ಟು ಜನರ ಒಲವು ಜೆಡಿಎಸ್ ನತ್ತ ಇದೆ. ಆದರೆ ಅವು ಚುನಾವಣೆ ಗೆಲುವಿಗೆ ಅಷ್ಟೊಂದು ಕೊಡುಗೆ ನೀಡುವ ಸ್ಥಿತಿಯಲ್ಲಿಲ್ಲ.
ಹೀಗಾಗಿ ಗೋಕಾಕ್ ನಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ನೆರವಿನಿಂದ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ ಬೆಂಬಲ ನೀಡಲು ಜೆಡಿಎಸ್ ಮುಂದಾಗಿದೆ. ಕಾಗವಾಡ, ಅಥಣಿ ಕ್ಷೇತ್ರಗಳಲ್ಲಿ ಸಮರ್ಥರು ಇರದ ಕಾರಣ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ತಟಸ್ಥರಾಗಬಹುದು ಎಂಬ ಮಾತುಗಳು ಜೆಡಿಎಸ್ ಮೂಲಗಳಿಂದ ಕೇಳಿ ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








