ಬರಗೂರು
ಪಕ್ಕದ ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಮಾವ ಎನ್‍ಟಿಆರ್ ಕಟ್ಟಿದ ಪ್ರಾದೇಶಿಕ ಪಕ್ಷ ಮತ್ತು ತೆಲಂಗಾಣದಲ್ಲಿ ಚಂದ್ರಶೇಖರ ರಾವ್ ಹಾಗೂ ತಮಿಳು ನಾಡಿನ ಕರುಣಾನಿಧಿ ಕಟ್ಟಿದ ಪ್ರಾದೇಶಿಕ ಪಕ್ಷಗಳನ್ನು ಉಳಿಸಿಕೊಂಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್, ಬಿಜೆಪಿ ಯಾರೆ ಸರ್ಕಾರ ರಚನೆ ಮಾಡಬೇಕಾದರೆ ಅವರ ಬಳಿ ಹೋಗುತ್ತಾರೆ, ಹೀಗಾಗಿ ಆಯಾ ರಾಜ್ಯಗಳ ಹಕ್ಕುಗಳನ್ನು ಉಳಿಸಿಕೊಳ್ಳುತ್ತಿದ್ದಾರೆ.
ಜೆಡಿಎಸ್‍ಗೆ ಆ ಶಕ್ತಿ ಇಲ್ಲವಾಗಿದೆ. ಇಂದು ನೀವು ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮನವರನ್ನು ಗೆಲ್ಲಿಸುವ ಮೂಲಕ ಆ ಶಕ್ತಿಯನ್ನು ತುಂಬಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದರು.
ಅವರು ಸಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ಬರಗೂರು ಗ್ರಾಮಲ್ಲಿ ಗುರುವಾರ ಜೆಡಿಎಸ್ ಪಕ್ಷ ಆಯೋಜಿಸಿದ್ದ ಸಿರಾ ಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರ ಪರ ಮತಯಾಚನಾ ಸಭೆಯಲ್ಲಿ ಮಾತನಾಡಿದರು. ಯಡಿಯೂರಪ್ಪನವರೆ ಮುಖ್ಯಮಂತ್ರಿಯಾಗಿದ್ದರೂ ರಾಜ್ಯಕ್ಕೆ ಪ್ರಧಾನ ಮಂತ್ರಿಗಳು ಹಣ ನೀಡುವಾಗ ತೋರುವ ವರ್ತನೆಯನ್ನು ಇಂದು ನಮ್ಮ ಯುವಕರು ಅರ್ಥ ಮಾಡಿಕೊಳ್ಳಬೇಕು. ಸಿರಾ, ಪಾವಗಡ, ಮಧುಗಿರಿ ತಾಲ್ಲೂಕುಗಳು ಬರಗಾಲದಿಂದ ತತ್ತರಿಸುತ್ತಿವೆ.
ಇಲ್ಲಿ ನೆಲಗಡಲೆ, ರಾಗಿ ಬೆಳೆಯುತ್ತಾರೆ. ಎದುರಾಳಿಗಳು ಹೇಳುತ್ತಾರೆ ಸಾಮಾಜಿಕ ನ್ಯಾಯ ಅಂತ, ಈ ಸಾಮಾಜಿಕ ನ್ಯಾಯ ನೀಡಿದವರು ಹಿರಿಯ ಮುಖಂಡ ದೇವರಾಜ ಅರಸ್. ನಾನು ನಾಯಕ ಸಮಾಜಕ್ಕೆ 15 ವಿಧಾನಸಭಾ ಸೀಟು ಮತ್ತು 2 ಲೋಕ ಸಭಾ ಸೀಟು ನೀಡಿದ್ದೇನೆ. ಮುಸ್ಲಿಮರಿಗೆ ರಿಸರ್ವೇಷನ್ ಜಾರಿ ಮಾಡಿದೆ. ಯಾವ ರಾಜ್ಯದಲ್ಲೂ ಇವರಿಗೆ ರಿಸರ್ವೇಷನ್ ನೀಡಿಲ್ಲ. ಮಹಿಳೆಯರಿಗೂ ರಿಸರ್ವೇಷನ್ ನೀಡಿದ್ದೇನೆ. ನನ್ನ ಪ್ರಧಾನ ಮಂತ್ರಿ ಅವಧಿಯಲ್ಲಿ ಎಲ್ಲಾ ಕ್ಷೇತ್ರಕ್ಕೂ ರಿಸರ್ವೇಷನ್ ನೀಡಿದ್ದೇನೆ. ನನ್ನ ಅಧಿಕಾರದ ಅವಧಿಯಲ್ಲಿ ರೈತರಿಗೆ ಆಗಿರುವ ಅನುಕೂಲಗಳನ್ನು ಒಮ್ಮೆ ಅವಲೋಕನ ಮಾಡಿ. ಉತ್ತಮ ಕೆಲಸ ಮಾಡಲಾಗಿದೆ. ಕೇಂದ್ರ ಮತ್ತು ಕರ್ನಾಟಕದಲ್ಲಾಗಲಿ ನನ್ನ ಅಧಿಕಾರದ ಅವಧಿಯಲ್ಲಿ ಒಂದು ಲಂಚದ ಆರೋಪವೂ ಇಲ್ಲ ಎಂದರು.
ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ಅಭ್ಯರ್ಥಿ ಅಮ್ಮಾಜಮ್ಮ, ಸತ್ಯ ಪ್ರಕಾಶ್, ಶಾಸಕರುಗಳಾದ ಗೌರಿ ಶಂಕರ್, ವೀರಭದ್ರಯ್ಯ, ಮಾಜಿ ಶಾಸಕರುಗಳಾದ ಎಂ.ಟಿ.ಕೃಷ್ಣಪ್ಪ, ತಿಮ್ಮರಾಯಪ್ಪ, ಸುಧಾಕರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಂಜಿನಪ್ಪ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಉಗ್ರೇಶ್, ಸಿ.ಆರ್. ಉಮೇಶ್, ಜಿಪಂ ಸದಸ್ಯ ಎಸ್. ರಾಮಕೃಷ್ಣ, ಪರಮೇಶ್ ಗೌಡ, ಮುದ್ದು ಕೃಷ್ಣೇ ಗೌಡ, ಎಸ್‍ಟಿಡಿ ಕಾಂತರಾಜು, ಡಾ. ಚಂದ್ರಶೇಖರ್, ಕೃಷ್ಣೇ ಗೌಡ, ಮರಡಿರಂಗನಾಥ್, ತನುಜ್ ಗೌಡ, ಜಯಶ್ರೀ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ