ಶಿರಾ
ರಾಜ್ಯದಲ್ಲಿ ಜೆಡಿಎಸ್, ಕಾಂಗ್ರ್ರೆಸ್ ಮೈತ್ರಿಯ ಸರ್ಕಾರ ರೂಪುಗೊಂಡಿರುವ ಹಾಗೂ ಪ್ರಸ್ತುತ ಸಂಸತ್ ಚುನಾವಣೆಯಲ್ಲಿ ಎರಡೂ ಜಾತ್ಯತೀತ ಪಕ್ಷಗಳ ಹೊಂದಾಣಿಕೆಯ ಚುನಾವಣೆಯ ಹಿಂದೆ ದೇವೆಗೌಡರ ಅಂತರಾಳದಲ್ಲಿ ಮಹತ್ವದ ಚಿಂತನೆಯೇ ಅಡಗಿದ್ದು, ಇಂತಹ ಮೈತ್ರಿಯ ಭಾವನೆಗಳ ಹಿಂದೆ ದೇಶದ ಅಭಿವೃದ್ಧಿಯ ತಂತ್ರಗಾರಿಕೆಯೂ ಇದೆ ಎಂದು ಶಾಸಕ ಹಾಗೂ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ್ ತಿಳಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೊಂದಿಗೆ ಇದೇ ಕ್ಷೇತ್ರದಲ್ಲಿ ಸೆಣಸಾಟ ನಡೆಸಿದ್ದೆವು. ಆದರೆ ಈಗ ಕುಮಾರಣ್ಣ ಹಾಗೂ ದೇವೆಗೌಡರ ಕೈ ಬಲಪಡಿಸಲು ಹಾಗೂ ಜಾತ್ಯತೀತ ಪಕ್ಷಗಳನ್ನು ಒಗ್ಗೂಡಿಸಿ ದೇಶದ ಅಭಿವೃದ್ಧಿಯತ್ತ ಕೈಜೋಡಿಸಲು ಚಿತ್ರದುರ್ಗ ಲೋಕಸಭಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಚಂದ್ರಪ್ಪನವರಿಗೆ ಎಲ್ಲರೂ ಪ್ರಾಮಾಣಿಕವಾಗಿ ಮತ ಯಾಚನೆ ಮಾಡಬೇಕಿದೆ ಎಂದರು.
ಸ್ಪರ್ಧೆಯಲ್ಲಿರುವ ಅಭ್ಯರ್ಥಿಯ ಚಿಹ್ನೆ ಹಸ್ತದ ಗುರುತಾದರೂ, ವರಿಷ್ಠರ ಆದೇಶದಂತೆ ನಾವು ಆ ಚಿಹ್ನೆಯನ್ನು ಹೊರೆ ಹೊತ್ತ ಮಹಿಳೆಯ ಚಿಹ್ನೆ ಎಂಬ ಭಾವನೆಯಿಂದಲೇ ಮತ ಚಲಾಯಿಸಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ಶಿರಾ ಭಾಗದಲ್ಲಿ ಬಿಜೆಪಿ ಪಕ್ಷಕ್ಕೆ ನೆಲೆ ಇಲ್ಲ. ಇದು ಈವರೆಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ನಮ್ಮ ಈ ಎರಡೂ ಪಕ್ಷಗಳ ಕಾರ್ಯಕರ್ತರು ಪಕ್ಷಭೇದ ಮರೆತು ಚಂದ್ರಪ್ಪನವರ ಆಯ್ಕೆಗೆ ಕೈ ಜೋಡಿಸಬೇಕು ಎಂದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ, ಈ ಹಿಂದೆ ಸಿದ್ಧರಾಮಯ್ಯ ಅವರ ಸರ್ಕಾರವಿದ್ದಾಗ ಅನುಷ್ಠಾನಗೊಂಡ ಯೋಜನೆಗಳೊಟ್ಟಿಗೆ ಇನ್ನೂ ಹಲವು ಯೋಜನೆಗಳನ್ನು ಹೆಚ್.ಡಿ.ಕುಮಾರಸ್ವಾಮಿ ಅನುಷ್ಠಾನಗೊಳಿಸಿ, ಸಮ್ಮಿಶ್ರ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಕಾರಣರಾಗಿದ್ದಾರೆ. ಮೈತ್ರಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಬಿ.ಜೆ.ಪಿ. ವರಿಷ್ಠರಿಗೆ ಸಹಿಸಲಾಗುತ್ತಿಲ್ಲ ಎಂದರು.
ರಾಜ್ಯದಲ್ಲಿನ 28 ಕ್ಷೇತ್ರಗಳಲ್ಲೂ ಮೈತ್ರಿ ಪಕ್ಷದ ಅಭ್ಯರ್ಥಿಗಳು ಆಯ್ಕೆಗೊಳ್ಳುವುದು ಖಚಿತವಾಗಿದೆ. ದೇವೆಗೌಡರ ಮೈತ್ರಿಕೂಟದ ಹೊಂದಾಣಿಕೆಯ ಹಿಂದೆ ಮಹತ್ವದ ಚಿಂತನೆಯೇ ಇದೆ. ದೇವೆಗೌಡರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದು ಅವರ ಆಯ್ಕೆ ಖಚಿತವಾಗಿದೆ. ಚಿತ್ರದುರ್ಗ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ ಖಂಡಿತ ಅವರನ್ನು ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿಯಾನ್ನಾಗಿ ಮಾಡದೆ ನಾವು ಬಿಡುತ್ತಲೂ ಇರಲಿಲ್ಲ ಎಂದರು.
ಪ್ರಸಕ್ತ ಸಂಸತ್ ಚುನಾವಣೆ ಮೈತ್ರಿ ಪಕ್ಷಗಳೊಟ್ಟಿಗಿನ ಚುನಾವಣೆಯಾಗಿದ್ದು, ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಚಂದ್ರಪ್ಪ ಸರಳ, ಸಜ್ಜನಿಕೆಯ ವ್ಯಕ್ತಿ. ಜನತೆಯ ಕೈಗೆ ಸದಾ ಲಭ್ಯವಾಗುತ್ತಲೇ ಇದ್ದ ಈ ಸಂಸದರನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕಿದೆ. ಜೆ.ಡಿ.ಎಸ್.-ಕಾಂಗ್ರೆಸ್ ಪಕ್ಷದ ಕೆಲ ಕಾರ್ಯಕರ್ತರಲ್ಲಿ ಎಂತಹುದ್ದೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಬದಿಗೊತ್ತಿ ಚಂದ್ರಪ್ಪನವರನ್ನು ಗೆಲ್ಲಿಸುವ ಗುರಿಯನ್ನು ಎಲ್ಲರೂ ಹೊಂದಬೇಕು ಎಂದು ಆಂಜನೇಯ ತಿಳಿಸಿದರು.
ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಹಾಗೂ ಸಂಸದ ಚಂದ್ರಪ್ಪ ಮಾತನಾಡಿ, ಕೇಂದ್ರ ಸರ್ಕಾರದಿಂದ ಮಂಜೂರಾದ ಯೋಜನೆಗಳ ಅನುದಾನವನ್ನು ಕಳೆದ 5 ವರ್ಷಗಳಲ್ಲಿ ಈ ಕ್ಷೇತ್ರದ ಜನತೆಗೆ ಪ್ರಾಮಾಣಿಕವಾಗಿ ತಲುಪಿಸಿದ್ದೇನೆ. ಸಂವಿಧಾನ ರಕ್ಷಣೆ, ಕೋಮುವಾದಿಗಳ ಹಿಡಿತದಿಂದ ದೇಶವನ್ನು ರಕ್ಷಿಸಲು ಜಾತ್ಯತೀತ ಪಕ್ಷಗಳು ಒಂದಾಗಿದ್ದು ಪಕ್ಷಭೇದ ಮರೆತು ಮತ ಚಲಾಯಿಸುವಂತೆ ಮನವಿ ಮಾಡಿದರು.
ಚೆಳ್ಳಕೆರೆ ಶಾಸಕ ರಘುಮೂರ್ತಿ, ಚಿತ್ರದುರ್ಗ ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಯಶೋಧರ, ತಾ. ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್, ಕೆ.ಎಲ್.ಮಹದೇವಪ್ಪ, ಕಲ್ಕೆರೆ ರವಿಕುಮಾರ್, ಸಿ.ಆರ್.ಉಮೇಶ್, ರಾಮಕೃಷ್ಣ, ಶ್ರೀರಂಗ ಯಾದವ್, ಹೊನ್ನೇನಹಳ್ಳಿ ನಾಗರಾಜು, ಚಂಗಾವರ ಮಾರಣ್ಣ, ಟಿ.ಡಿ.ಮಲ್ಲೇಶ್, ಹೆಚ್.ಎಸ್.ಮೂಡಲಗಿರಿಯಪ್ಪ, ವಿನಯ್ ತ್ಯಾಗರಾಜು, ಹಂಸವೇಣಿ, ಬಂಡೆ ರಾಮಕೃಷ್ಣ, ಅರೆಹಳ್ಳಿ ಬಾಬು, ಮುದಿಮಡು ರಂಗಸ್ವಾಮಯ್ಯ, ಉದಯಶಂಕರ್, ಬಿ.ಬೊಪ್ಪಣ್ಣ, ಬರಗೂರು ಶಿವಕುಮಾರ್, ಎಸ್.ಎಲ್.ಗೋವಿಂದರಾಜು, ನರಸಿಂಹೆಗೌಡ, ರವಿಶಂಕರ್, ಡಾ.ಶಂಕರ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.