ಬಿಜೆಪಿ ಸೋಲಿಸಲು ಸುರೇಶ್‍ಗೌಡರೇ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಿದ್ದರು : ರಾಮಕೃಷ್ಣ

ತುಮಕೂರು

     ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಸುರೇಶ್ ಗೌಡರು, ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ಅವರನ್ನು ಸೋಲಿಸಲು ಈ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡರನ್ನು ಬೆಂಬಲಿಸಿದರು, ಅವರ ಬೆಂಬಲಿಗರೂ ಸುರೇಶ್ ಗೌಡರನ್ನು ಅನುಸರಿಸಿದರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ರಾಮಕೃಷ್ಣ ಹೇಳಿದರು.

       ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಲು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಕಾರಣ ಹಾಗೂ ದೇವೇಗೌಡರನ್ನು ಸೋಲಿಸಲು ಇವರೇ ಮಾಸ್ಟರ್ ಪ್ಲಾನ್ ಮಾಡಿದ್ದರು ಎಂಬ ಸುರೇಶ್ ಗೌಡರ ಆಪಾದನೆಯನ್ನು ಖಂಡಿಸಿದ ರಾಮಕೃಷ್ಣ, ಬುದ್ದಿ ಭ್ರಮಣೆಗೊಂಡು ಸುರೇಶ್‍ಗೌಡರು ಈ ರಿತಿ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.

        ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಬಿಜೆಪಿ ಮುಖಂಡರಾಗಿ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದನ್ನು ಮುಚ್ಚಿಕೊಳ್ಳಲು, ಅಭ್ಯರ್ಥಿ ಜಿ ಎಸ್ ಬಸವರಾಜು ತಪ್ಪು ತಿಳಿಯಬಾರದು ಎಂದು ಸುರೇಶ್ ಗೌಡರು ಹೀಗೆ ಹೇಳಿದ್ದಾರೆ. ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿದರು ಎಂದಿರುವ ಅವರು, ದೇವೇಗೌಡರನ್ನು ಸೋಲಿಸಲು ಪ್ಲಾನ್ ಮಾಡಿದ್ದರು ಎನ್ನುವುದರಲ್ಲಿ ಅರ್ಥವಿದೆಯೇ, ತುಮಕೂರಿನಲ್ಲಿ ದೇವೇಗೌಡರು ಸ್ಪರ್ಧಿಸಲು ತೀರ್ಮಾನ ಮಾಡಿದ್ದು ಕಾಂಗ್ರೆಸ್ ಹೈಕಮಾಂಡ್ ಎಂದ ರಾಮಕೃಷ್ಣ, ಸುರೇಶ್ ಗೌಡರು ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

       ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಂಸದ ಮುದ್ದಹನುಮೇಗೌಡರು ಹಾಗೂ ಮಾಜಿ ಶಾಸಕ ಕೆ ಎನ್ ರಾಜಣ್ಣನವರು ಹಣ ಪಡೆದಿದ್ದರು ಎಂದು ಸುಳ್ಳು ಆಪಾದನೆ ಮಾಡಿದ್ದ ದರ್ಶನ್‍ನನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ, ಸೂಕ್ತ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್‍ನಿಂದ ಪೊಲೀಸರಿಗೆ ದೂರು ನೀಡಿದ್ದು ತನಿಖೆ ನಡೆದಿದೆ ಎಂದರು.

ಮೈತ್ರಿ ಇಲ್ಲ

       ಈ ತಿಂಗಳ 29ರಂದು ನಡೆಯುವ ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳದೆ ಪಕ್ಷದ ಅಭ್ಯರ್ಥಿಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಹೇಳಿದರು.
ತುಮಕೂರು ನಗರಪಾಲಿಕೆಯ 22ನೆ ವಾರ್ಡ್, ತಿಪಟೂರು ನಗರಸಭೆಯ 31 ಸ್ಥಾನ, ಕುಣಿಗಲ್, ಪಾವಗಡ ಪುರಸಭೆಯ ತಲಾ 23 ಹಾಗೂ ತುರುವೇಕೆರೆ ಪಟ್ಟಣ ಪಂಚಾಯ್ತಿಯ 14 ಸ್ಥಾನ ಸೇರಿ ಎಲ್ಲಾ 94 ಸ್ಥಾನಗಳಲ್ಲೂ ಕಾಂಗ್ರೆಸ್ ಸ್ಪರ್ಧೆ ಮಾಡಲಿದೆ. ಚುನಾವಣೆ ಗೆಲ್ಲುವ ಕುರಿತು ಸ್ಥಳಿಯ ಕಾಂಗ್ರೆಸ್ ಮುಖಂಡರ ಸಭೆ ನಡೆಸಿ ಚರ್ಚಿಸಲಾಗುತ್ತಿದೆ ಎಂದು ಹೇಳಿದರು

      ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿಎಸ್ ನಿರಂಜನ್, ಉಪಾಧ್ಯಕ್ಷ ಅಫ್ತಾಬ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೂಳೂರು ವಿಜಯಕುಮಾರ್, ಮುಖಂಡರಾದ ಪಿ ಶಿವಾಜಿ, ಸುಜಾತ, ರಘು, ಪುಟ್ಟರಾಜು ಮೊದಲಾದವರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ