ದಾವಣಗೆರೆ
ಜಿಲ್ಲೆಯಾದ್ಯಂತ ಜೂನ್ 03 ರಿಂದ 17ರ ವರೆಗೆ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಆಚರಿಸಲಾಗುತ್ತಿದ್ದು, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕೈ ಜೋಡಿಸಿ ಪಾಕ್ಷಿಕವನ್ನು ಯಶಸ್ವಿಗೊಳಿಸಬೇಕು ಎಂದು ಆರ್ಸಿಎಚ್ಓ ಡಾ. ಈ. ಶಿವುಕುಮಾರ್ ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ-2019 ರ ತ್ರೈಮಾಸಿಕ ಲಸಿಕಾ ಕಾರ್ಯಕ್ರಮದ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅತಿಸಾರ ಭೇದಿಯಿಂದ ಬಳಲುವ ಮಕ್ಕಳಿಗೆ ಓ.ಆರ್.ಎಸ್ ದ್ರಾವಣ ನೀಡುವುದರಿಂದ ಹಾಗೂ ಪೌಷ್ಠಿಕ ಆಹಾರದ ಜೊತೆಗೆ ಜಿಂಕ್ ಸಲ್ಫೇಟ್ ಮಾತ್ರೆ ನೀಡುವ ಮೂಲಕ ಪೋಷಕರು ಮಕ್ಕಳ ಆರೋಗ್ಯ ಕಾಪಾಡಬೇಕು, ಹಾಗೂ ಸಾಬೂನಿಂದ ಕೈ ತೊಳೆಯುವ ಮೂಲಕ ಈ ಸಾಂಕ್ರಮಿಕ ರೋಗದಿಂದ ಪಾರಗಬಹುದೆಂದರು.
ದೇಶದಲ್ಲಿ ಐದು ವರ್ಷ ಕೆಳಗಿನ ಮಕ್ಕಳ ಮರಣ ಕಾರಣಗಳಲ್ಲಿ ಅತಿಸಾರ ಭೇದಿಯು ಶೇ.10 ರಷ್ಟಿದ್ದು, ಪ್ರತಿ ವರ್ಷ ಸುಮಾರು 1 ಲಕ್ಷ ಮಕ್ಕಳು ಅತಿಸಾರ ಭೇದಿಯಿಂದ ಅಸುನೀಗುತ್ತಿದ್ದಾರೆ.
ಶಿಶು ಮರಣ ದರ ಕಡಿಮೆಗೊಳಿಸುವುದು ಭಾರತದ ರಾಷ್ಟ್ರೀಯ ಆರೋಗ್ಯದ ನೀತಿಯಾಗಿದೆ. ಅತಿಸಾರ ಭೇದಿಯಿಂದ ಉಂಟಾಗುವ ಸಾವುಗಳು ಸಾಮಾನ್ಯವಾಗಿ ಮಳೆಗಾಲ ಹಾಗೂ ಬೇಸಿಗೆಯಲ್ಲಿ ಸಂಭವಿಸುತ್ತವೆ. ಇಂತಹ ಬಹುತೇಕ ಪ್ರಕರಣಗಳು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತಿದ್ದು, ಮಕ್ಕಳು ಸಾವಿಗೀಡಾಗುತ್ತಿದ್ದಾರೆ ಎಂದರು.
ಅತಿಸಾರ ಭೇದಿಯಿಂದ ಮಕ್ಕಳ ದೇಹದಿಂದ ಹೆಚ್ಚಿನ ನೀರಿನ ಅಂಶ ಮತ್ತು ಲವಣಾಂಶಗಳ ಕೊರತೆಯುಂಟಾಗುತ್ತದೆ. ಇದರಿಂದ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಇಂತಹ ವೇಳೆಯಲ್ಲಿ ಆರೈಕೆ ಮಾಡದಿದ್ದಲ್ಲಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿದ್ದು, ಅತಿಸಾರ ಭೇದಿಯಿಂದ ಬಳಲುವ ಮಕ್ಕಳಿಗೆ ಓ.ಆರ್.ಎಸ್ ದ್ರಾವಣ ಹಾಗೂ ಜಿಂಕ್ ಸಲ್ಫೇಟ್ ನೀಡುವುದರಿಂದ ಅತಿಸಾರ ಭೇದಿಯನ್ನು ನಿಯಂತ್ರಿಸಬಹುದು ಹಾಗೂ ಸಾವಿನ ದವಡೆಯಿಂದ ದೂರ ಮಾಡಬಹುದು ಎಂದರು.
ಶುದ್ಧ ಕುಡಿಯುವ ನೀರು ಬಳಕೆ, ಶುಭ್ರ ನೀರಿನಿಂದ ಕೈ ತೊಳೆಯುವುದು, ಲಸಿಕೆ ನೀಡುವುದು, ಎದೆ ಹಾಲು ಹಾಗೂ ಸೂಕ್ತವಾದ ಆಹಾರ ಬಳಕೆಯಿಂದ ಸಹ ಈ ಸಾಂಕ್ರಮಿಕ ರೋಗದಿಂದ ಪಾರಗಬಹುದು. ಅತಿಸಾರ ಭೇದಿಯಿಂದ ಉಂಟಾಗುವ ಮರಣ ಪ್ರಮಾಣವನ್ನು ತಗ್ಗಿಸಲು ಸರ್ಕಾರವು ಜೂನ್ 03 ರಿಂದ ಜೂನ್ 17 ವರಗೆ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಆಚರಿಸುವ ಮೂಲಕ ಜನರಲ್ಲಿ ಅರಿವು ಮೂಡಿಸುವುದು, ಇಂತಹ ಪ್ರಕರಣಗಳ ನಿರ್ವಹಣೆಗೆ ಅಗತ್ಯವಾದ ಚಿಕಿತ್ಸಾ ಸೇವೆಯನ್ನು ಹೆಚ್ಚಿಸುವುದು, ಓ.ಆರ್.ಎಸ್.-ಜಿಂಕ್ ಸ್ಥಳಗಳ ಸ್ಥಾಪನೆ, 5 ವರ್ಷದೊಳಗಿನ ಮಕ್ಕಳಿರುವ ಕುಟುಂಬಗಳಿಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಅರಿವು ಮೂಡಿಸಿಲಾಗುವುದು ಮತ್ತು ವೈಯಕ್ತಿಕ ಸ್ವಚ್ಛತೆ ಹಾಗೂ ಪರಿಸರ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಮೂಲಕ ಅತಿಸಾರವನ್ನು ನಿಯಂತ್ರಣಕ್ಕೆ ತರಲು ಶ್ರಮಿಸಲಾಗುತ್ತಿದೆ.
ಜಿಲ್ಲೆಯಲ್ಲಿ 1,56,692 ರಷ್ಟು 5 ವರ್ಷದೊಳಗಿ ಮಕ್ಕಳನ್ನು ಗುರುತಿಸಲಾಗಿದ್ದು, ಈ ಸಾಂಕ್ರಮಿಕ ರೋಗದ ಬಗ್ಗೆ ತಾಲೂಕು ಮಟ್ಟದ ಸಭೆಯಲ್ಲಿ ಹಾಗೂ ಹೋಬಳಿ, ಗ್ರಾಮ ಮಟ್ಟದ ಶಾಲೆಗಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುವುದು. ಇದಕ್ಕಾಗಿ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ, ಖಾಸಾಗಿ ಆಸ್ಪತ್ರೆಗಳ ಸಂಘ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಕಾರವು ಅಗತ್ಯವಾಗಿದೆ ಎಂದರು.
ಓ.ಆರ್.ಎಸ್ ತಯಾರಿಸುವ ವಿಧಾನ: ಪಾತ್ರೆಯಲ್ಲಿ ಒಂದು ಲೀಟರ್ ಶುದ್ಧ ಕುಡಿಯುವ ನೀರನ್ನು ಹಾಕಿ ಅದೇ ಪಾತ್ರೆಗೆ ಒಂದು ಪ್ಯಾಕೇಟ್ ಓ.ಆರ್.ಎಸ್ ಮಿಶ್ರಣ ಹಾಕಿ, ಶುಚಿಯಾದ ಚಮಚದಿಂದ ಮಿಶ್ರಣವನ್ನು ನೀರಿನೊಂದಿಗೆ ಚೆನ್ನಾಗಿ ಕಲಕಿಸಿದ ನಂತರ ಅತಿಸಾರ ಭೇದಿಯಿಂದ ಬಳಲುವ ಮಗುವಿಗೆ ತಯಾರಿಸಿದ 24 ಗಂಟೆಯೊಳಗೆ ಕುಡಿಸಭೇಕು.
2 ತಿಂಗಳಿನಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ಅತಿಸಾರ ಭೇದಿಯಾದಗ 5 ಚಮಚ ಈ.ಆರ್.ಎಸ್. ದ್ರಾಮವಣವನ್ನು ಕಡಿಸಭೇಕು. 2 ತಿಂಗಳಿಂದ 2 ವರ್ಷದ ಮಕ್ಕಳಿಗೆ ಪ್ರತಿಬಾರಿ ಕಾಲು ಲೋಟದಿಂದ ಅರ್ಧ ಲೋಟದ ವರೆಗೆ ಕುಡಿಸಭೇಕು. 2 ರಿಮದ 5 ವರ್ಷದ ಮಕ್ಕಳಿಗೆ ಅರ್ಧ ಲೋಟದಿಂದ ಒಂದು ಲೋಟದ ವರೆಗೆ ದ್ರಾಮವಣವನ್ನು ಕುಡಿಸಭೇಕು. ಒಂದು ವೇಳೆ ವಾಂತಿಯಾದಲ್ಲಿ 10 ನಿಮಿಷ ಬಿಟ್ಟು ಓ.ಆರ್.ಎಸ್.. ದ್ರಾವಣವನ್ನು ಕುಡಿಸಬೇಕು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ತ್ರಿಪುಲಾಂಭ, ಚಿಗಟೇರಿ ಜಿಲ್ಲಾಸ್ಪತ್ರೆಯ ಅಧೀಕ್ಷಕಿ ಡಾ. ನೀಲಾಂಬಿಕೆ ಸೇರಿದಂತೆ ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.