ಜೀವ ವಿರೋಧಿ ನಿಲುವು ಪ್ರಶ್ನಿಸುವುದೇ ಬಂಡಾಯ

ಚಿತ್ರದುರ್ಗ

      ಬಂಡಾಯ ಸಾಹಿತ್ಯ ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗದೇ ಸಾಂಸ್ಕತಿಕವಾಗಿ, ರಾಜಕೀಯವಾಗಿ ಭಿನ್ನ ಆಯೋಚನೆಗಳೊಂದಿಗೆ ದಾರಿಮಾಡಿಕೊಟ್ಟಿದೆ ಎಂದು ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಅಭಿಪ್ರಾಯಪಟ್ಟಿದ್ದಾರೆ.

        ನಗರದ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಲ್ಯಾಣಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ವಿಮರ್ಶಾ ಕಮ್ಮಟದ ಬಂಡಾಯ ಸಾಹಿತ್ಯ ತಾತ್ವಿಕ ನೆಲೆಗಳ ಕುರಿತು ವಿಶೇಷ ಉಪನ್ಯಾಸ ಮತ್ತು ಚರ್ಚೆಯಲ್ಲಿ ಮಾತನಾಡಿದರು.

         ಸಾಮಾಜಿಕ ಪ್ರಜ್ಞೆಯುಳ್ಳ ಯಾರಿಗಾದರೂ ಈ ಬಂಡಾಯ ಮನೋಧರ್ಮ ಅನಿವಾರ್ಯವಾಗಬಹುದು. ಪುರೋಹಿತ, ಬಂಡವಾಳಶಾಯಿ ಹಾಗು ನಿಸರ್ಗವಿರೋಧಿ, ಜೀವವಿರೋಧಿ, ಮಾನವ ವಿರೋಧಿ ನಿಲುವುಗಳನ್ನು ಪ್ರಶ್ನೆಸುವುದು ಬಂಡಾಯ ಸಾಹಿತ್ಯ ಉದ್ದೇಶವಾಗಿದೆ. ಈ ಬಂಡಾಯ ಸಾಹಿತ್ಯದಲ್ಲಿ ತೊಡಗಿಕೊಂಡವರು ಎಲ್ಲ ಜಾತಿಯ ಪ್ರಗತಿಪರ ಚಿಂತಕರು, ತಳಸಮುದಾಯದವರು, ಮಹಿಳೆಯರು, ಮುಸ್ಲಿಂ ಸಮುದಾಯದವರು, ಅಲ್ಪಸಂಖ್ಯಾತರು, ಸೇರಿದ್ದರಿಂದ ಈ ಎಲ್ಲ ಸಮುದಾಯಗಳ ಸಾಂಸ್ಕತಿಕ ಒಂಟಿತನವನ್ನು ಸಂಘಟನೆ ನೀಗಿಸಿದೆ ಎಂದು ಅಭಿಪ್ರಾಯಪಟ್ಟರು.

         ಸೈದ್ಧಾಂತಿಕ ವಿಚಾರಗಳೇ ಬಂಡಾಯ ಸಾಹಿತ್ಯ ಅಡಿಪಾಯವಾಗಿದೆ ಕಳೆದ ನಾಲ್ಕು ದಶಕಗಳಿಂದ ಹುಟ್ಟಿಕೊಂಡ ಬಂಡಾಯ ಸಂಘಟನೆ. ಹಲವು ವೈಚಾರಿಕ ಅರಿವುಗಳ ಸಮೂಹ ಪ್ರಯತ್ನದ ಮೇಲೆ ಚಿಗುರೊಡೆದಿದೆ. ಬಂಡಾಯ ಸಾಹಿತ್ಯ ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗದೇ ಸಾಂಸ್ಕತಿಕವಾಗಿ, ರಾಜಕೀಯವಾಗಿ ಭಿನ್ನ ಆಯೋಚನೆಗಳೊಂದಿಗೆ ದಾರಿಮಾಡಿಕೊಟ್ಟಿದೆ ಎಂದರು.

          ಇಂತಹ ಚಳುವಳಿ ಸಂಘಟನೆ ಹುಟ್ಟಲು 70ರ ದಶಕದ ಅನೇಕ ಪ್ರಗತಿಪರ ಚಳುವಳಿಗೂ ಕಾರಣವಾಗಿದೆ. ಜಾತಿ ವಿನಾಶ ಸಮ್ಮೇಳನ, ಬಸವಲಿಂಗಪ್ಪನವರ ಬೂಸಾ ಪ್ರಕರಣ, ದಲಿತ ಸಂಘರ್ಷ ಸಮಿತಿಯ ಹುಟ್ಟು ಮತ್ತು ಮರಾಠಿ ಸಾಹಿತ್ಯದ ದಲಿತ ಪ್ಯಾಂಥರ್ಸ್, ತೆಲುಗಿನ ದಿಗಂಬರ ಸಾಹಿತ್ಯ ಈ ಎಲ್ಲ ಪ್ರೇರಣೆ ಹಾಗು ಪ್ರಭಾವಗಳಿಂದ ಇಲ್ಲಿನ ಸಮಾಜವಾದಿ ಹಾಗು ಎಲ್ಲ ಎಡಪಂಥೀಯ ಚಿಂತಕರು ಒಗ್ಗೂಡಿದ ಫಲ ಬಂಡಾಯ ಸಾಹಿತ್ಯ ಸಂಘಟನೆಯಾಗಿದೆ ಎಂದರು.

          ಗುಲ್ಬರ್ಗ ವಿಶ್ವವಿದ್ಯಾಲನಿಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಎಚ್.ಟಿ.ಪೋತೆ ದಲಿತ ಸಾಹಿತ್ಯ ವಿಮರ್ಶೆ ಮತ್ತು ಸಾಮಾಜಿಕ ಪ್ರಜ್ಞೆಯ ಸ್ವರೂಪದ ಕುರಿತು ಮಾತನಾಡಿ, ಸಾಮಾಜಿಕ ಚಳವಳಿಯ ಭಾಗವಾಗಿ ದಲಿತ ಸಾಹಿತ್ಯ ಹುಟ್ಟಿಕೊಂಡಿದೆ. ದಲಿತ ವಿಮರ್ಶೆ ಬಂದಾಗ ಸಾಮಾಜಿಕ, ರಾಜಕೀಯ ದೃಷ್ಠಿ ಕೋನಗಳನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ. ಸಾಮಾಜಿಕ ಪರಿವರ್ತನೆ ಇದರ ಮೂಲ ಆಶಯವಾಗಿದೆ. ಇಲ್ಲಿ ಪ್ರಧಾನವಾಗಿ ಅಂಬೇಡ್ಕರ್‍ವಾದ, ಲೋಹಿಯವಾದ, ಮಾಕ್ಸ್ ವಾದಗಳು ದಲಿತ ವಿಮರ್ಶೆಯನ್ನು ರೂಪಿಸಿದ ಪ್ರಧಾನ ಸಿದ್ದಾಂತ ಕಾರ್ಯಗಳಾಗಿವೆ ಎಂದರು.

           ದಲಿತ ವಿಮರ್ಶೆಗೆ ಇಂತಹದ್ದೆ ಮಾನದಂಡ ಎಂದು ಹೇಳುವುದು ಕಷ್ಟ. ಸಾಹಿತ್ಯ ವಿಶ್ಲೇಷಣೆ ಕ್ರಮಗಳು ಒಬ್ಬರಿಂದ ಮತ್ತೊಬ್ಬರಿಗೆ ವಿಭಿನ್ನವಾಗಿ ಬದಲಾಗಿರುವುದು ಕಾಣಬಹುದಾಗಿದೆ. ದಲಿತ ಸಾಹಿತ್ಯದಲ್ಲಿ ಪಠ್ಯ ಕೇಂದ್ರವಾಗಿ ಓದಲು ಸಾಧ್ಯವಿಲ್ಲ, ದಲಿತ ಸಾಹಿತ್ಯದ ವಿಮರ್ಶೆಗೆ ತಾತ್ವಿಕ ಚೌಕಟ್ಟಿನ ಬಗ್ಗೆ ವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಎಸ್.ಕರಿಯಪ್ಪ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಂ.ಗುರುನಾಥ್, ದಂಡಪ್ಪ, ಕಮ್ಮಟದ ನಿರ್ದೇಶಕ ಡಾ.ಎಸ್.ಮಾರುತಿ, ಡಾ.ಎಸ್.ಎಂ.ಮುತ್ತಯ್ಯ, ಡಾ.ಸುರೇಶ್ ನಾಗಲಮಡಿಕೆ, ಆಯೋಜಕರಾದ ರವಿ, ಯಶೋಧರ್‍ಗುಳ್ಯಾ, ವಸಂತ್, ಪ್ರೊ.ಪುಸ್ಪಲತಾ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap