ಕೊಟ್ಟೂರು
ಕೊಟ್ಟೂರು ಸಮೀಪದ ಉಜ್ಜಯಿನಿ ಸದ್ದರ್ಮ ಪೀಠದ ಆರಾಧ್ಯ ದೈವ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿಯ ಮಹಾ ರಥೋತ್ಸವದ ದಿನವಾದ ಗುರುವಾರದಂದು ಬೆಳಿಗ್ಗೆ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಉಜ್ಜಯಿನಿ ಗ್ರಾಮದಲ್ಲಿನ ವಿವಿಧ ದೇವಸ್ಥಾನಗಳು ಮತ್ತು ಮುಸ್ಲಿಂ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ಮೂಲಕ ಸರ್ವ ಧರ್ಮ ಸಹಿಷ್ಣುತೆಯ ಸಂದೇಶವನ್ನು ಜನತೆಯಲ್ಲಿ ಸಾರಿದರು.
ಕಳೆದ ಮೂರು ವರ್ಷದಿಂದ ಜಗದ್ಗುರುಗಳು ರಥೋತ್ಸವದ ದಿನದಂದು ಭೇಟಿ ನೀಡುವುದನ್ನು ಪ್ರಾರಂಭಿಸಿದ್ದು ಈ ವರ್ಷವೂ ಮುಂದುವರೆಸಿದರು. ಉಜ್ಜಯಿನಿ ಗ್ರಾಮದಲ್ಲಿನ ವನಿತಾದೇವಿ ದೇವಸ್ಥಾನ, ಹರಿಜನ ಕೇರಿಯ ಮರುಳಸಿದ್ದೇಶ್ವರ ದೇವಸ್ಥಾನ, ಜಂಟಿಲಿಂಗೇಶ್ವರ, ಕುರುಬರಗೇರಿ ಬೀರಲಿಂಗೇಶ್ವರ, ಕೊರವರ ಉಚ್ಚಂಗಮ್ಮ, ನೇಕಾರ ಕಾಲೋನಿಯ ಕಾಳೇಶ್ವರ ಸಿದ್ದೇಶ್ವರ ಬಡಾವಣೆಯ ಆಂಜನೇಯ ದೇವಸ್ಥಾನ, ವಿಶ್ವಕರ್ಮ ಸಮಾಜಬಾಂಧವರ ಕಾಳಿಕಾದೇವಿ ದೇವಸ್ಥಾನಗಳಿಗೆ ತೆರಳಿದ ಜಗದ್ಗುರುಗಳು ಅಲ್ಲಿನ ದೇವರುಗಳ ಮೂರ್ತಿಗೆ ಪುಷ್ಪವಿರಿಸಿ ಅಕ್ಷತೆಗಳನ್ನು ಹಾಕಿದರು. ನಂತರ ನಿಂಬಳಗೇರೆ ರಸ್ತೆಯಲ್ಲಿನ ಮುಸ್ಲಿಂ ದರ್ಗಾಕ್ಕೂ ಭೇಟಿ ನೀಡಿ ಅಲ್ಲಿರುವ ಧಾರ್ಮಿಕ ಮುಖಂಡ ಮೌಲ್ವಿಯೊಂದಿಗೆ ಸಮಾಲೋಚನೆ ನಡೆಸಿದರು.
ಜಗದ್ಗುರುಗಳ ಈ ನಡೆ ಇಲ್ಲಿನ ಜನರಲ್ಲಿ ಸಂತೋಷ ತಂದಿದ್ದು, ಪ್ರತಿಯೊಬ್ಬರು ವಿಶ್ವಾಸದಿಂದ ಒಬ್ಬರನ್ನೊಬ್ಬರು ಅರಿತುಕೊಂಡು ಜೀವನ ಸಾಗಿಸಬೇಕು ಎಂಬ ಸಂದೇಶದಲ್ಲಿ ಮುಂದುವರೆಯುವ ನಿರ್ಧಾರ ತೆಗೆದುಕೊಂಡರು ಮರುಳಸಿದ್ದೇಶ್ವರ ಸ್ವಾಮಿಯ ರಥೋತ್ಸವ ಕೇವಲ ವೀರಶೈವ ಜನಾಂಗಕ್ಕೆ ಸೀಮಿತವಾಗಿರದೆ ಸರ್ವಧರ್ಮದವರ ರಥೋತ್ಸವ ಎಂದೆ ನಾವು ಭಾವಿಸಿ ಪಾಲ್ಗೊಳ್ಳುತ್ತಿದ್ದೇವೆ ಎಂದು ಈ ಕುರಿತು ಗ್ರಾಮದ ಕೆಲವರು ಹೇಳಿದರು.ಉಜ್ಜಯಿನಿ ಗ್ರಾಮದ ಚನ್ನಬಸಯ್ಯ, ಮತ್ತಿಹಳ್ಳಿ ರಾಚೋಟಪ್ಪ, ಮರುಳಸಿದ್ದಪ್ಪ.ಎ, ಮತ್ತಿತರರು ಅವರೊಂದಿಗೆ ಇದ್ದರು.