ಬಳ್ಳಾರಿ
2025ರೊಳಗಾಗಿ ಮಲೇರಿಯಾ ಮುಕ್ತ ಭಾರತ ಮಾಡಲು ಸೊಳ್ಳೆಗಳ ಸಂತಾನ ಅಭಿವೃದ್ದಿ ಮಾಡುವ ತಾಣಗಳನ್ನು ಗುರುತಿಸಿ ನಿರ್ಮೂಲನೆ ಮಾಡುವ ಜೊತೆಗೆ ಮಲೇರಿಯಾ ಮುಕ್ತ ಬಳ್ಳಾರಿ ಜಿಲ್ಲೆಯನ್ನು ಮಾಡಲು ಪ್ರತಿಯೊಬ್ಬ ಸಾರ್ವಜನಿಕರು ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಿವರಾಜ್ ಹೆಡೆ ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಘಟಕ ಇವರ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲೆಯಲ್ಲಿ 66 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಲೇರಿಯಾ ಪ್ರಕರಣಗಳು ಕಂಡುಬಂದಿವೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರಂತರವಾಗಿ ಮಲೇರಿಯಾ ನಿರ್ಮೂಲನಾ ಚಟುವಟಿಕೆಗಳನ್ನು ಹಮ್ಮಿಕೊಂಡು 2025ರೊಳಗಾಗಿ ಬಳ್ಳಾರಿ ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಗುರಿ ಹೊಂದಲಾಗಿದೆ ಎಂದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಅನಿಲ್ ಕುಮಾರ್ ಅವರು ಮಾತನಾಡಿ ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 5 ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದು ರೋಗಿಗಳು ಗುಣಮುಖರಾಗಿದ್ದಾರೆ. ಇನ್ನುಳಿದಂತೆ ಜಿಲ್ಲೆಯಿಂದ ವಲಸೆ ಹೋಗಿ ಬಂದವರನ್ನು ಮತ್ತು ಬೇರೆ ಸ್ಥಳಗಳಿಂದ ಜಿಲ್ಲೆಗೆ ವಲಸೆ ಬರುವವರ ಮೇಲೆ ನಿಗಾವಹಿಸಲಾಗುತ್ತಿದೆ ಎಂದು ಹೇಳಿದ ಅವರು ಯಾವುದೇ ಜ್ವರ ಪ್ರಕರಣದಲ್ಲಿ ತಕ್ಷಣ ರಕ್ತಲೇಪನ ಪರೀಕ್ಷೆಯನ್ನು ಕೈಗೊಳ್ಳಲು ಅಗತ್ಯ ಕ್ರಮವಹಿಸಲಾಗುತ್ತಿದ್ದುಇತರೆ ಇಲಾಖೆ ಸಹಕಾರದೊಂದಿಗೆ ಮಲೇರಿಯಾ ಹರಡುವ ಅನಾಫೀಲಿಸ್ ಸೊಳ್ಳೆಗಳು ಕಂಡು ಬರುವ ನೀರಿನ ತಾಣಗಳನ್ನು ಗುರ್ತಿಸಿ ಸೊಳ್ಳೆ ನಿರ್ಮೂಲನೆಗೆ ಕ್ರಮವಹಿಸಲಾಗುತ್ತಿದೆ ಎಂದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ, ಡಾ. ರಾಜಶೇಖರ ರೆಡ್ಡಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಆರ್ ಅನಿಲ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿಜಯಲಕ್ಷ್ಮಿ ಆರ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ರವೀಂದ್ರನಾಥ ಎಮ್.ಹೆಚ್ , ತಾಲ್ಲೂಕ ಆರೋಗ್ಯ ಅಧಿಕಾರಿ ಡಾ. ವೀರೇಂದ್ರ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಜಿಲ್ಲಾ ಕೀಟ ಶಾಸ್ತ್ರಜ್ಞ ನಂದಾ ಕಡಿ, ಜಿಲ್ಲಾ ಎನ್.ವಿ.ಬಿ.ಡಿ.ಸಿ.ಪಿ ಸಲಹೆಗಾರ ಪ್ರತಾಪ್ ಶ್ಯಾಮ್ ಸಿಂಗ್, ಮಲ್ಲಪ್ಪ ಸೇರಿದಂತೆ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.