ವಿಧಾನಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದ ರಮೇಶ ಕುಮಾರ್

ಬೆಳಗಾವಿ

       ಸಂಪೂರ್ಣ ಪಾನ ನಿಷೇಧ ಕುರಿತಾದ ಪ್ರಶ್ನೆಗೆ ಉತ್ತರ ನೀಡಬೇಡಿ. ಪ್ರಶ್ನೆ ಕೇಳಿದ ಶಾಸಕರು ಸಂಜೆ ಭೇಟಿಯಾಗಿ ಚರ್ಚೆ ಮಾಡಲಿ. ಆನಂತರ ನಿರ್ಧಾರ ಮಾಡೋಣ ಎಂದು ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ವಿಧಾನಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದರು.
ಬಿಜೆಪಿಯ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಪ್ರಶ್ನೆಗೆ ರಾಜ್ಯದಲ್ಲಿ ಪಾನ ನಿಷೇಧ ಜಾರಿಗೆ ತರುವ ಚಿಂತನೆ ಇದೆಯೇ ಎಂದು ಅಬಕಾರಿ ಇಲಾಖೆ ಜವಾಬ್ದಾರಿ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.

      ಆಗ ರಮೇಶ್‍ಕುಮಾರ್, ಮೊದಲ ಪ್ರಶ್ನೆಗೆ ಉತ್ತರ ನೀಡಿ, ಎರಡನೇ ಪ್ರಶ್ನೆ ಪಾನ ನಿಷೇಧದ ಬಗ್ಗೆ ಇದೆ. ಅದು ಶಾಸಕರು ಕೇಳಿರುವ ಲಿಖಿತ ಪ್ರಶ್ನೆಯಲ್ಲಿಲ್ಲ. ಅದಕ್ಕೆ ಉತ್ತರ ನೀಡಬೇಡಿ. ಶಾಸಕರು ಸಂಜೆ ಬರಲಿ ಚರ್ಚೆ ಮಾಡಿ ಆನಂತರ ನಿರ್ಧಾರ ಮಾಡೋಣ ಎಂದರು.
ಆಗ ಬಿಜೆಪಿ ಶಾಸಕ ಸಿ.ಟಿ.ರವಿ, ಸಂಜೆ ಚರ್ಚೆಯಾದರೆ ಪಾನ ನಿಷೇಧವಾಗುವುದಿಲ್ಲ ಎಂದು ಒಗ್ಗರಣೆ ಹಾಕಿದಾಗ ಸಂಜೆಯ ಚರ್ಚೆಗೆ ನೀವೂ ಬರಬಹುದು ಎಂದು ಸ್ಪೀಕರ್ ಆಹ್ವಾನ ನೀಡಿದರು.

        ಮುಖ್ಯಮಂತ್ರಿ ಕುಮಾರಸ್ವಾಮಿ ಪಾನ ನಿಷೇಧದ ಬಗ್ಗೆ ಪ್ರಶ್ನೆ ಮಾಡುವುದು ಅಪ್ಪಚ್ಚು ರಂಜನ್ ಅವರಿಗೆ ರಾಜಕೀಯವಾಗಿ ಹಾನಿ ಮಾಡುತ್ತದೆ. ಮಡಿಕೇರಿ ಜನ ಇದನ್ನು ಒಪ್ಪುವುದಿಲ್ಲ ಎಂದು ಹಾಸ್ಯ ಮಿಶ್ರಿತ ಧಾಟಿಯಲ್ಲೇ ಉತ್ತರಿಸಿದರು.

       ನಂತರ ವಿಷಯ ಗಂಭೀರತೆ ಪಡೆದುಕೊಂಡಿತು. ಕುಮಾರಸ್ವಾಮಿ ಅವರು ಪ್ರಶ್ನೆಗೆ ಉತ್ತರ ನೀಡಿ, ಅಬಕಾರಿ ಇಲಾಖೆಯಲ್ಲಿ 5445 ಹುದ್ದೆಗಳು ಮಂಜೂರಾಗಿದ್ದು, 2901 ಹುದ್ದೆಗಳು ಭರ್ತಿಯಾಗಿವೆ. 2584 ಹುದ್ದೆಗಳು ಖಾಲಿ ಇವೆ. ಈಗಾಗಲೇ ಖಾಲಿ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಲಾಗಿದೆ. 2011ರಲ್ಲಿ ಕೆಪಿಎಸ್‍ಸಿ ಗೆಜೆಟೆಡ್ ಪೆಬೇಷನರಿ ನೇಮಕಾತಿ ಪ್ರಕ್ರಿಯೆಯಲ್ಲಿ 6 ಅಬಕಾರಿ ಉಪಅಧೀಕ್ಷಕರ ನೇಮಕಾತಿಗೆ ಮುಂದಾಗಿತ್ತು.

         ಆದರೆ ಹೈಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿದೆ. 2007 ರಲ್ಲಿ 5 ಉಪ ಅಧೀಕ್ಷಕರ ನೇಮಕಾತಿಗೆ ಕೆಪಿಎಸ್‍ಸಿ ಪರೀಕ್ಷೆ ನಡೆಸಿದೆ. ವಾಹನ ಚಾಲಕರ ವೃಂದದಲ್ಲಿ ಖಾಲಿ ಇರುವ 183 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಬಿ.ಕೆ.ಪವಿತ್ರ ಪ್ರಕರಣದ ನಂತರ ಮುಂಬಡ್ತಿಗೂ ಕ್ರಮ ಕೈಗೊಳ್ಳಲಾಗುವುದು ಎಂದರು.

       ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಅಬಕಾರಿ ಇಲಾಖೆ ಸರ್ಕಾರಕ್ಕೆ ಆದಾಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ, ಅಲ್ಲಿ ಕೆಲಸ ಮಾಡುವವರಿಗೆ 25 ವರ್ಷಗಳಿಂದ ಬಡ್ತಿ ಸಿಕ್ಕಿಲ್ಲ ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap