ಕಲಾವಿದರ ನೆರವಿಗೆ ಬಾರದಿದ್ದರೆ ಹೋರಾಟ

ದಾವಣಗೆರೆ:

     ಸಂಕಷ್ಟದಲ್ಲಿರುವ ಜಾನಪದ ಕಲಾವಿದರ ನೆರವಿಗೆ ಸರ್ಕಾರ ಧಾವಿಸದಿದ್ದರೆ, ಸ್ವಾತಂತ್ರೃ ಉದ್ಯಾನದಲ್ಲಿ ಅಹೋರಾತ್ರಿ ಜಾನಪದ ಕಲೆಗಳ ಪ್ರದರ್ಶನ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಗುವುದು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಎಚ್ಚರಿಸಿದರು.

     ಇಲ್ಲಿನ ಎಸ್.ನಿಜಲಿಂಗಪ್ಪ ಬಡಾವಣೆಯ ಆರ್.ವಿ. ಪಬ್ಲಿಕ್ ಶಾಲೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್‍ನ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಜಾನಪದ ಕಲಾವಿದರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದು, ಸರ್ಕಾರ ಕಲಾವಿದರಿಗೆ ಸೌಲಭ್ಯ ಕಲ್ಪಿಸುವುದರ ಜೊತೆಗೆ ಮಾಸಾಶನದ ವಯೋಮಿತಿಯನ್ನು 45 ವರ್ಷಕ್ಕೆ ಇಳಿಸಿ, 1500 ರೂ. ಮಾಸಾಶನ ನೀಡಿ, ಜಾನಪದ ಕಲಾವಿದರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದರು.

     ಜಾನಪದ ಕಲೆ ಹಾಗೂ ಇದನ್ನು ಪೋಷಿಸುತ್ತಿರುವ ಕಲಾವಿದರು ಉಳಿಯ ಬೇಕಾದರೆ, ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತರುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿ, ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕು. ಕಲಾವಿದರ ಸಮೀಕ್ಷಾ ವರದಿ ಆಧರಿಸಿ ತಕ್ಷಣವೇ ಅವರಿಗೆ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.

      ಕೃಷಿ ಪರಂಪರೆಯಿಂದ ಬಂದಿರುವ ಜಾನಪದ ತಳ ಸಮುದಾಯಗಳ ಕಲೆಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಜಾನಪದ ಕಲೆಯು ಅಳವಿನಂಚಿನಲ್ಲಿದೆ. ಆದ್ದರಿಂದ ಈ ಕಲೆಯನ್ನು ಪುನರುಜ್ಜೀವನ ಗೊಳಿಸಬೇಕೆಂಬ ಸದುದ್ದೇಶದಿಂದ ಪರಿಷತ್ ರಾಜ್ಯಮಟ್ಟದಲ್ಲಿ ಜಾನಪದ ಸಂಗೀತ ಮತ್ತು ಕ್ರೀಡಾ ಸ್ಪರ್ಧೆ, ಶಾಲೆಯಿಂದ ಶಾಲೆಗೆ, ಮಠದಿಂದ ಮಠಕ್ಕೆ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾನಪದ ಕಲೆ ಅರಿವು ಮೂಡಿಸಲು ಕೆಲಸ ಮಾಡುತ್ತಿದೆ ಎಂದು ಅವರು ವಿವರಿಸಿದರು.

    ಪರಿಷತ್‍ನ ಜಿಲ್ಲಾ ಘಟಕದ ಅಧ್ಯಕ್ಷ ವಿದ್ವಾನ್ ಎಂ.ದ್ವಾರಕೀಶ್ ಮಾತನಾಡಿ, ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕೆಂಬ ಉದ್ದೇಶದಿಂದ ಈ ಪರಿಷತ್ ಅನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಕಲೆಯ ಕಲಾವಿದರು ಪರಂಪರೆಯ ರಾಯಭಾರಿಗಳಾಗಿದ್ದು, ಅವರ ಏಳಿಗೆಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

     ಈ ಸಂದರ್ಭದಲ್ಲಿ ಕಲಾವಿದರಾದ ತಿಪ್ಪೇಸ್ವಾಮಿ, ಕೆ.ನೀಲಮ್ಮ, ಸಿದ್ದಲಿಂಗಪ್ಪ ಕೊಳೆನೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಂಸ್ಕತಿಕ ಚಿಂತಕ ಡಾ.ಬಸವರಾಜ್ ನೆಲ್ಲಿಸರ, ಪ್ರಾಧ್ಯಾಪಕ ಡಾ.ಮಂಜಣ್ಣ, ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಯಣ್ಣ, ಸಾಹಿತಿ ಡಾ.ಸುಲೋಚನಾ, ಆರ್.ವಿ. ಪಬ್ಲಿಕ್ ಶಾಲೆ ಪ್ರಾಚಾರ್ಯ ಚಿದಾನಂದಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link