ಕಂಪ್ಲಿ
ನಿರುದ್ಯೋಗಿ ಶಿಕ್ಷಕರಿಗೆ ಉದ್ಯೋಗ ಸೃಷ್ಠಿಸಿ ಉದ್ಯೋಗ ನೀಡುವಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರವಹಿಸಿವೆ ಎಂದು ಪಿ.ನಾಗೇಶ್ವರರಾವ್ ಅಭಿಪ್ರಾಯ ಪಟ್ಟರು. ಅವರು ಇಲ್ಲಿನ ಐತಿಹಾಸಿಕ ಸೋಮಪ್ಪ ದೇವಸ್ಥಾನದ ಆವರಣದಲ್ಲಿ ಜರುಗಿದ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಸಭೆಯಲ್ಲಿ ಕಂಪ್ಲಿ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳ ಸಾಧಕ ಬಾಧಕಗಳ ಮತ್ತು ಅನೇಕ ಸವಾಲುಗಳ ಕುರಿತು ಚರ್ಚಿಸಲಾಯಿತು. ಅಧ್ಯಕ್ಷ ಯು.ಶಿವರಾಜ್ ಮಾತನಾಡಿ ಕಂಪ್ಲಿಯಲ್ಲಿ ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆರಂಭಿಸಬೇಕು. ಅರ್ಧ ಗಂಟೆಯ ಸಭೆಗಾಗಿ 30ಕಿ.ಮೀ.ದೂರದ ಹೊಸಪೇಟೆಯ ಬಿಇಓ ಕಛೇರಿಗೆ ತೆರಳಬೇಕಾಗುತ್ತದೆ.
ಇದರಿಂದ ಇಡೀ ದಿನ ವ್ಯಯವಾಗುವುಲ್ಲದೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವಲ್ಲಿ ತೊಂದರೆಯಾಗುತ್ತದೆ. ಪ್ರತಿ ಸಾರಿನೂ ಪಠ್ಯ ಪುಸ್ತಕಗಳಿಗಾಗಿ ಹೊಸಪೇಟೆಗೆ ತೆರಳಬೇಕಾಗಿದ್ದು ಎಲ್ಲಾ ವಿಷಯಗಳ ಪಠ್ಯ ಪುಸ್ತಕಗಳನ್ನು ತರಲು ಹತ್ತಾರು ಬಾರಿ ತೆರಳಬೇಕಾಗಿದೆ.
ಖಾಸಗಿ ಶಿಕ್ಷಣ ಮಂಡಳಿಗಳು ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವು ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ದಿಢೀರ್ ಮಾಹಿತಿ, ಏಕಾಏಕಿ ತಿಂಗಳ ವರದಿಯನ್ನು ಅರ್ಧ ಗಂಟೆಗಳಲ್ಲಿ ಕೂಡಲೇ ಒದಗಿಸುವಂತೆ ಮಾನಸಿಕ ಒತ್ತಡ ಹೇರುತ್ತಾರೆ. ಆನ್‍ಲೈನ್ ವ್ಯವಸ್ಥೆಗೆ ಹೊಂದಿಕೊಳ್ಳಬೇಕಾಗಿದ್ದು ವಿದ್ಯುತ್, ಅಂತರ್ಜಾಲ, ಸರ್ವರ್ ಸಮಸ್ಯೆಗಳಿದ್ದು ಅಧಿಕಾರಿಗಳ ಒತ್ತಡದೊಂದಿಗೆ ದೈಹಿಕ, ಮಾನಸಿಕ ತೊಂದರೆ ಅನುಭವಿಸಬೇಕಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ನೂತನ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಕಂಪ್ಲಿ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟವನ್ನು ರಚಿಸಲಾಯಿತು. ಒಕ್ಕೂಟದ ಗೌರವಾಧ್ಯಕ್ಷರನ್ನಾಗಿ ಪಿ.ನಾಗೇಶ್ವರರಾವ್, ಅಧ್ಯಕ್ಷರನ್ನಾಗಿ ಉಗಾದಿ ಶಿವರಾಜ್, ಉಪಾಧ್ಯಕ್ಷರನ್ನಾಗಿ ಸಿ.ವೆಂಕಟೇಶ್, ವಿ.ನೀಲಕಂಠ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಮಹೇಶ್, ಜಂಟಿ ಕಾರ್ಯದರ್ಶಿಗಳನ್ನಾಗಿ ರಮೇಶ್ ಶಿವಪೂರ, ರಾಮಕೃಷ್ಣ, ಖಜಾಂಚಿಯಾಗಿ ಪವನಕುಮಾರ ರೆಡ್ಡಿ, ನಿರ್ದೇಶಕರನ್ನಾಗಿ ಸ್ವಪ್ನ, ಚಾಂದ್‍ಭಾಷ, ಉಮಾದೇವಿ, ಜಯಲಕ್ಷ್ಮಿ, ಜಿಲಾನ್, ರಾಘವೇಂದ್ರ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ