ಹುಳಿಯಾರು:
ರಾಜ್ಯ ಕುರುಬರ ಒಗ್ಗಟ್ಟಿನ ಹೋರಾಟದ ಫಲವಾಗಿ ಕಳೆದ ಒಂದು ವಾರದಿಂದ ಹುಳಿಯಾರಿನಲ್ಲಿ ಸೃಷ್ಠಿಯಾಗಿದ್ದ ನಾಮಫಲಕ ವಿವಾದ ಕೊನೆಗೂ ಅಂತ್ಯವಾಗಿದ್ದು ಮೊದಲಿದ್ದ ಸ್ಥಳದಲ್ಲೇ ಕನಕ ವೃತ್ತ ನಾಮಫಲಕವನ್ನು ಪುನರ್ ಪ್ರತಿಷ್ಠಾಪಿಸುವ ಮೂಲಕ ಗುರುವಾರ ಸುಖಾಂತ್ಯ ಕಂಡಿದೆ.
ಹುಳಿಯಾರಿನ ಪೆಟ್ರೋಲ್ ಬಂಕ್ ಬಳಿಯ ಸರ್ಕಲ್‍ನಲ್ಲಿ ಕನಕದಾಸ ಸರ್ಕಲ್ ಎಂಬ ನಾಮಫಲಕ ಹಾಕಿ ಕಳೆದ 15 ವರ್ಷಗಳಿಂದ ಕನಕಜಯಂತಿ ಮಾಡಲಾಗುತ್ತಿತ್ತು. ಹೈವೆ ರಸ್ತೆಯ ಕಾಮಗಾರಿಯ ಸಲುವಾಗಿ ನಾಮಫಲಕ ತೆರವುಗೊಳಿಸಲಾಗಿತ್ತು. ಕಾಮಗಾರಿ ಪೂರ್ಣವಾದ ಸಲುವಾಗಿ ಈ ಹಿಂದೆ ತೆರವುಗೊಳಿಸಿದ್ದ ನಾಮಫಲಕವನ್ನು ಪುನಃ ಪ್ರತಿಷ್ಟಾಪಿಸಲಾಯಿತು.
ಈ ನಾಮಫಲಕವನ್ನು ಪಪಂ ಮುಖ್ಯಾಧಿಕಾರಿ ಏಕಾಏಕಿ ತೆರವಿಗೆ ಮುಂದಾದಾಗ ಪ್ರಕರಣ ವಿವಾದಕ್ಕೆ ತಿರುಗಿತು. ಈ ಸಂದರ್ಭದಲ್ಲಿ ಕನಕ ಯುವ ಸೇನೆಯ ಹುಡುಗರಿಗೂ, ಪಪಂ ಮುಖ್ಯಾಧಿಕಾರಿಗೂ ವಾಕ್ಸಮರ ನಡೆದು ತಹಸೀಲ್ದಾರ್ ಮತ್ತು ಪೊಲೀಸರು ಮಧ್ಯ ಪ್ರವೇಶಿಸುವಂತ್ತಾಯಿತು. ರಾತ್ರಿ ಇನ್ನೊಂದು ಗುಂಪು ಇದೇ ಸರ್ಕಲ್‍ಗೆ ಡಾ.ಶಿವಕುಮಾರಸ್ವಾಮೀಜಿ ಸರ್ಕಲ್ ಎಂಬ ನಾಮಫಲಕ ಹಾಕುವುದರ ಮೂಲಕ ಜಾತಿ ಸಂಘರ್ಷಕ್ಕೆ ಕಾರಣವಾಯಿತು.
ಹುಳಿಯಾರು ಇತಿಹಾಸದಲ್ಲಿ ಹಿಂದೆಂದೂ ಕಂಡುಕೇಳರಿಯದ 3 ದಿನಗಳ ನಿಷೇಧಾಜ್ಞೆ ಜಾರಿಗೊಳಿಸಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಯಿತು. ಸೋಷಿಯಲ್ ಮೀಡಿಯದಲ್ಲಿ ಜಾತಿ ಸಂಘರ್ಷಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಯಿತು. ಜಿಲ್ಲೆಯಾಧ್ಯಂತ ಕುರುಬ ಸಂಘಟನೆಗಳು ಬೀದಿಗಿಳಿದವು. ಕೊನೆಗೆ ಸಚಿವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಸಲಾಯಿತಾದರೂ ಗೊಂದಲದ ಗೂಡಾಗಿ ರಾಜ್ಯಾಧ್ಯಂತ ಅಶಾಂತಿಗೆ ಕಾರಣವಾಯಿತು.
ಕುರುಬ ಸಮುದಾಯದ ಸ್ವಾಮೀಜಿಗಳಿಗೆ ಸಚಿವರು ಅಗೌರವವಾಗಿ ಖಂಡರಲ್ಲದೆ ಕನಕ ವೃತ್ತವೇ ಇರಲಿಲ್ಲ ಎನ್ನುವ ಮೊಂಡು ವಾದ ಮಂಡಿಸಿದ್ದು ರಾಜ್ಯಾಧ್ಯಂತ ಕುರುಬರಲ್ಲಿ ಹೋರಾಟದ ಕಿಚ್ಚು ಹಚ್ಚಿಸಿತು. ಅಲ್ಲದೆ ರಾಜ್ಯ ಕುರುಬರ ಸಂಘದ ಅಧ್ಯಕ್ಷರೊಮದಿಗೆ ದೂರವಾಣಿ ಮೂಲಕ ಸಚಿವಾರು ಮಾತನಾಡುವಾಗ ನಾನು ಜಾತಿ ನಾಯಕ ಎಂದು ಹೇಳಿಕೊಂಡಿದ್ದು ವ್ಯಾಪಕ ಟೀಕೆಗೆ ಗುರಿಯಾಯಿತು. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸಚಿವರ ಹೇಳಿಕೆಯನ್ನು ಖಂಡಿಸಿದರು.
ಪರಿಣಾಮ ಹುಳಿಯಾರು ಕನಕ ವೃತ್ತ ಪ್ರಕರಣ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿದ್ದೆ ಗೆಡಿಸಿತು. ಮಾಧುಸ್ವಾಮಿ ಅವರಿಗೆ ಕ್ಷಮೆ ಕೇಳುವಂತೆ ಸೂಚಿಸಿದರೂ ಸಹ ಸಚಿವರು ಕ್ಷಮೆ ಕೇಳದಿದಕ್ಕೆ ಮುಖ್ಯಮಂತ್ರಿಗಳೇ ಸಚಿವರ ಪರವಾಗಿ ಕ್ಷಮೆ ಕೇಳಿದರು. ಅಲ್ಲದೆ ಮಾಧುಸ್ವಾಮಿ ಅವರ ಕೆ.ಆರ್.ಪೇಟೆ ಚುನಾವಣಾ ಉಸ್ತುವಾರಿಯಿಂದ ಕೈ ಬಿಟ್ಟರು. ಚುನಾವಣೆ ಬಳಿಕ ಸರ್ಕಾರವೇ ಕನಕ ವೃತ್ತ ಮಾಡಿ ನಾಮಫಲಕ ಅನಾವರಣ ಮಾಡುವುದಾಗಿ ಘೋಷಿಸಿತು.
ಆದರೂ ಸರ್ಕಲ್‍ಗೆ ಕನಕದಾಸ ವೃತ್ತ ಎಂದೇ ಮರು ನಾಮಕರಣ ಮಾಡುವಂತೆಯೂ ಹಾಗೂ ಸಚಿವ ಜೆ.ಸಿ.ಮಾಧುಸ್ವಾಮಿ ಯವರ ನಡವಳಿಕೆ ಮತ್ತು ಧೋರಣೆ ಖಂಡಿಸಿ ಕುರುಬರು ಹುಳಿಯಾರ್ ಬಂದ್ ಗೆ ಕರೆ ನೀಡಿದ್ದರು. ಹುಳಿಯಾರು ಬಂದ್ ಬಹುತೇಕ ಶಾಂತಿಯುತವಾಗಿ ನಡೆಯುವ ಜೊತೆಗೆ ಹಳ್ಳಿಹಳ್ಳಿಗಳಿಂದ ಜಾತಿ, ಪಕ್ಷದ ತಾರತಮ್ಯ ಇಲ್ಲದೆ ಜನಸಾಗರವೇ ಪ್ರತಿಭಟನೆಗೆ ಹರಿದು ಬಂದಿತ್ತು.
ಇಂದೇ ನಾಮಫಲಕ ಪ್ರತಿಷ್ಟಾಪಿಸದ ವಿನಃ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಬಿಗಿ ಪಟ್ಟು ಹಿಡಿಯಿತು. ಕುರುಬರ ಈ ಹೋರಾಟಕ್ಕೆ ಸರ್ಕಾರ ಮಣಿದು ಈ ಹಿಂದೆಯಿದ್ದ ಸರ್ಕಲ್‍ನಲ್ಲೇ ಕನಕದಾಸ ಸರ್ಕಲ್ ಎಂಬ ನಾಮಫಲಕ ಪ್ರತಿಷ್ಟಾಪಿಸಲು ಅನುಮತಿ ಕೊಟ್ಟಿತು. ಕರುಬರೂ ಸಹ ಸಂಭ್ರಮ ಮತ್ತು ಸಡಗರದಿಂದ ಜೈ ಕನಕ ಜೈಜೈ ಕನಕ ಎಂದು ನಾಮಫಲಕ ಪ್ರತಿಷ್ಟಾಪಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ