ಕನಕದುರ್ಗಮ್ಮ ದೇವಸ್ಥಾನದ ಆಡಳಿತ ವಿರುದ್ಧ ಮೇ 11 ರಂದು ಪ್ರತಿಭಟನೆ-ಕೆ.ಎರ್ರಿಸ್ವಾಮಿ

ಬಳ್ಳಾರಿ

     ಕನಕದುರ್ಗಮ್ಮ ದೇವಸ್ಥಾನದಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಕಾಯ್ದೆ 1997 ಮತ್ತು 2002ರ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದರಿಂದ ದೇವಸ್ಥಾನದ ಆದಾಯ ಮತ್ತು ಭಕ್ತರ ಭಾವನೆಗೆ ಧಕ್ಕೆ ಬಂದಿದೆ ಎಂದು ಕರ್ನಾಟಕ ಜನಸೈನ್ಯದ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಎರ್ರಿಸ್ವಾಮಿ ಆರೋಪಿಸಿದ್ದು ಇದರ ವಿರುದ್ಧ ಮೇ 11 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

      ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕದುರ್ಗಮ್ಮ ದೇವಸ್ಥಾನದ ಆಡಳಿತ ಮಂಡಳಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ದೇವಸ್ಥಾನದ ಅಧಿಕಾರಿಗಳು ಹುಂಡಿ ಅಳವಡಿಸಿದ್ದು ಅಭಿವೃದ್ಧಿಗಾಗಿ. ಆದರೆ, ಇಲ್ಲಿ ಅರ್ಚಕರ ಸ್ವಂತಕ್ಕಾಗಿ ಹುಂಡಿಗಳನ್ನಿಡಲು ಅವಕಾಶ ನೀಡಿದ್ದಾರೆ.

      ಪ್ರತಿ ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಎಣಿಕೆ ಮಾಡುವ ಮುನ್ನ ಸಾರ್ವಜನಿಕ ಪ್ರಕಟಣೆ ನೀಡಬೇಕು. ಅಧಿಕಾರಿಗಳು ಇದನ್ನು ಮಾಡದೇ ಇರುವುದರಿಂದ ಅನುಮಾನ ಮೂಡಿದೆ. ಕಾಣಿಕೆಯ ರೂಪದಲ್ಲಿ ಬರುವ ಸೀರೆಗಳಿಗೆ ರಸೀದಿ ನೀಡುತ್ತಿಲ್ಲ. ಇವುಗಳ ವಿಕ್ರಯದ ಮಾಹಿತಿ ನೀಡುತ್ತಿಲ್ಲ. ಹರಕೆ ಹೊತ್ತ ಭಕ್ತರು ನೀಡುವ ಬೆಳ್ಳಿ, ಬಂಗಾರ ಇತರೆ ಕಾಣಿಕೆಗಳನ್ನು ರಸೀದಿಯಲ್ಲಿ ಹಾಕಿ ಪೂಜೆ ಮಾಡಲು ಇಚ್ಛಿಸಿ ಅರ್ಚಕರಿಗೆ ನೀಡಿದರೆ ಮಾಡದೇ ಭಾವನೆಗಳನ್ನು ಧಿಕ್ಕರಿಸುತ್ತಿದ್ದಾರೆ.

       ಭಕ್ತರಿಂದ ನೇರವಾಗಿ ಹಣ ಪಡೆದು ಅರ್ಚನೆ, ಅಭಿಷೇಕ, ಎಲೆ ಪೂಜೆ, ಕುಂಬ ಪೂಜೆ, ಗಂಡಾ ದೀಪಗಳುಳ್ಳ ಸೇವೆಗಳನ್ನು ಮಾಡಿ ದೇವಾಲಯದ ಹಣ ದೋಚುತ್ತಾರೆ. ಕೆಲ ಅನರ್ಹ ವ್ಯಕ್ತಿಗಳು ಪೂಜಾ ಕಾರ್ಯದಲ್ಲಿ ಅರ್ಚಕರೆಂದು ಪೂಜೆ ಮಾಡುತ್ತಿರುವುದು ಕಂಡು ಬಂದಿದೆ. ದೇವಸ್ಥಾನದಲ್ಲಿ ಹುಂಡಿ, ಸೇವಾ ದರಗಳು, ಪ್ರಾಣಿ ಬಲಿ, ದಾಸೋಹ ಹಾಗೂ ಇತರೆ ಸೇವೆಗಳ ಕುರಿತು ನಾಮಫಲಕ ಅಳವಡಿಸಿರುವುದಿಲ್ಲ ಎಂದು ಆರೋಪಿಸಿದರು.

      ಸರ್ಕಾರದ ಅಧೀನದಲ್ಲಿರುವ ದೇವಸ್ಥಾನವನ್ನು ಅರ್ಚಕರ ಸ್ವಂತ ದೇವಸ್ಥಾನವೆಂದು ಭಕ್ತರಲ್ಲಿ ಮೂಡಿಸಲು ಯತ್ನಿಸುತ್ತಿದ್ದಾರೆ. ಹಣ್ಣು, ಕಾಯಿ ಮಾರಾಟ ಮಾಡುವವರು ಅರ್ಚಕರ ಸಂಬಂಧಿಕರಾಗಿದ್ದಾರೆ. ಕೆಲ ಅರ್ಚಕರು ದೇವಸ್ಥಾನದ ಜಾಗೆಯನ್ನು ಅಂಗಡಿಗಳಿಗೆ ಬಾಡಿಗೆ ನೀಡಿದ್ದಾರೆ. ನಿತ್ಯ ಜರುಗುವ ಪೂಜಾ ಕಾರ್ಯಗಳು ಮತ್ತು ಸೇವೆಗಳು ಸಮಯಕ್ಕೆ ಸರಿಯಾಗಿ ಜರುಗುವುದಿಲ್ಲ. ಸೇವೆ ಮಾಡಿಸುವ ಮತ್ತು ದರ್ಶನ ಮಾಡುವ ಭಕ್ತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲ. ಪ್ರತಿ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಭಕ್ತರು ಮಾಲಾರ್ಪಣೆ ಮಾಡಲು ಖಾಯಂ ವ್ಯವಸ್ಥೆಯೂ ಇಲ್ಲ. ಇದರಿಂದ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ. ಈ ಕಾರಣಕ್ಕಾಗಿ ಭಕ್ತರ ಬೆಂಬಲದೊಂದಿಗೆ ಅಂದು ಹೋರಾಟ ಹಮ್ಮಿಕೊಂಡಿರುವುದಾಗಿ ಹೇಳಿದರು.ಜಿಲ್ಲಾಧ್ಯಕ್ಷ ಕೆಎಸ್ ಅಶೋಕ್ ಕುಮಾರ್, ರಾಜ್ಯ ಉಪಾಧ್ಯಕ್ಷ ಕೆ.ಹೊನ್ನೂರಪ್ಪ ಇನ್ನಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link