ಕಂದಾಯ ನಡಿಗೆ ರೈತರ ಮನೆ ಮನೆಗೆ

ಕುಣಿಗಲ್
    ತಾಲ್ಲೂಕು ಕಚೇರಿಗೆ ರೈತರು ಸೇರಿದಂತೆ ಸಾರ್ವಜನಿಕರು ಪದೆ ಪದೆ ಅಲೆದಾಡುವುದನ್ನು ತಪ್ಪಿಸಲು ಕಂದಾಯ ಇಲಾಖೆ ಕಂದಾಯ ನಡಿಗೆ ರೈತರ ಮನೆ ಮನೆಗೆ ಎಂಬ ವಿನೂತನ ಯೋಜನೆಯನ್ನು ತಂದಿದ್ದು ತಹಸೀಲ್ದಾರ್‍ರೊಂದಿಗೆ ಶಾಸಕ ರಂಗನಾಥ್ ಕೈಜೋಡಿಸುವ ಮೂಲಕ ಕಳೆದೆರಡು ದಿನಗಳಿಂದ ಈ ಯೋಜನೆಯಡಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 
     ತಾಲ್ಲೂಕಿನ ಕಸಬಾ ಹೋಬಳಿ ಹೇರೂರು ಮತ್ತು ಕೊತ್ತಗೆರೆ ಹೋಬಳಿಯಲ್ಲಿ ಎರಡು ದಿನದಿಂದ ಕಂದಾಯ ಇಲಾಖೆಯ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ. ಹೇರೂರು ಗ್ರಾಮ ಚಿಕ್ಕಮಾವತ್ತೂರು, ನಿಡಸಾಲೆ ಮತ್ತು ಸುತ್ತಮುತ್ತಲಿನ ಸುಮಾರು 1500 ಅರ್ಜಿಗಳು ಬಂದಿದ್ದು ಅದರಲ್ಲಿ ಮುಖ್ಯವಾಗಿ ಸಾಮಾಜಿಕ ಭದ್ರತಾ ಯೋಜನೆಯಡಿ ಇನ್ನೂ ಮಾಸಾಶನಗಳು ಬರದ ವೃದ್ಧರು, ಪತಿ ಮೃತರಾಗಿದ್ದು ಅದರಲ್ಲಿ ಹಲವರು ವಿದವಾ ವೇತನಕ್ಕೆ ಹಾಗೂ ಪೌತಿಖಾತೆ ಮಾಡಿಕೊಡಿ ಎಂದು ನೂರಾರು ಜನ ಮನವಿ ಮಾಡಿದರು.  
 
    ಅಲ್ಲದೆ ಇವನ್ನು ಮಾಡಿಸಿಕೊಳ್ಳಲು ತಾಲ್ಲೂಕು ಕಚೇರಿಗೆ ಹೋದರೆ ಹಲವು ಬಾರಿ ಇಲ್ಲ ಸಲ್ಲದ ದಾಖಲೆಗಳನ್ನು ಕೇಳುತ್ತ ಬರೀ ಸಬೂಬು ಉತ್ತರ ನೀಡಿ ವಾಪಸ್ ಕಳಿಸಿದ್ದಾರೆ ಮತ್ತು ಹಣವನ್ನು ಕೇಳುತ್ತಾರೆ. ಇನ್ನೂ ಹಲವು ಮಧ್ಯವರ್ತಿಗಳು ನಮಗೆ ಮೋಸಾ ಮಾಡಿದ್ದಾರೆ ಎಂದೆಲ್ಲಾ ದೂರಿದರು. 
    ಸಮಸ್ಯೆ ಆಲಿಸಿದ ಶಾಸಕ ರಂಗನಾಥ್ ಈಗಿನ ತಹಸೀಲ್ದಾರ್ ಅವರು ಇಂತಹದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಸರ್ಕಾರದಿಂದ ಮಾಡಿಕೊಡುವ ಕೆಲಸ ಹಣರಹಿತವಾಗಿದ್ದು, ನಿಮ್ಮ ಕೆಲಸ ಪುಕ್ಕಟ್ಟೆ ಮಾಡಿಕೊಡುತ್ತಾರೆ ಎಂದರು. ತಹಸೀಲ್ದಾರ್ ಮಾತನಾಡಿ, ಖಾತೆ ಬದಲಾವಣೆಗೆ ಸರ್ಕಾರ 35ರೂ. ನಿಗದಿಪಡಿಸಿದ್ದು, ಹಣಪವತಿಸಿ ಖಾತೆ ಪಡೆದುಕೊಳ್ಳಿ ಎಂದ ಅವರು ಮಧ್ಯವರ್ತಿಗಳ ವಂಚನೆಗೆ ಒಳಗಾಗದೆ ನೇರವಾಗಿ ಕಚೇರಿಗೆ ಬಂದರೆ ತಮ್ಮ ಕೆಲಸವನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು. 
   ಶಾಸಕರು ಮಾತನಾಡಿ, ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಅಧಿಕಾರಿಗಳನ್ನು ನಿಮ್ಮ ಮನೆ ಬಾಗಿಲಿಗೆ ಕರೆದುಕೊಂಡು ಬಂದಿದ್ದು, ಸೋಮವಾರದಿಂದ ಐದು ದಿನ ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಈ ಆಂದೋಲನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮನೆಗಳಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ ಎಂದ ಅವರು, ಪ್ರತಿಯೊಬ್ಬ ರೈತರ ಸಮಸ್ಯೆಗೆ ಸದಾ ಸ್ಪಂದಿಸುತ್ತೇನೆ. ನೀವು ಯಾವಾಗ ಬೇಕಾದರೂ ಭೇಟಿಯಾಗಿ ಎಂದರು. 
    ಮಂಗಳವಾರ ನಡೆದ ಕೊತ್ತಗೆರೆ ಗ್ರಾಮ ಸೇರಿದಂತೆ ನಾಗನಹಳ್ಳಿ, ರಾಮೇನಹಳ್ಳಿ ವಡ್ಡರಕುಪ್ಪೆ ಹಾಗೂ ಆಜುಬಾಜಿನ ಗ್ರಾಮಗಳಿಂದ ಸೇರಿದಂತೆ ತಾಲ್ಲೂಕಿನಾದ್ಯಂತ 620 ಅರ್ಜಿಗಳು ಬಂದಿದ್ದವು. ಇಂದು ಸಹ ಈ ಭಾಗದಲ್ಲಿಯೂ ಬಹುತೇಕ ಸಾಮಾಜಿಕ ಭದ್ರತೆಗೆ ಸಂಬಂಧಪಟ್ಟಂತೆ ಹೆಚ್ಚಿನ ಅರ್ಜಿಗಳು ಹಾಗೂ ಸಮಸ್ಯೆಗಳು ಬಂದಿದ್ದು ವಿಶೇಷವಾಗಿತ್ತು. 
     ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಹರೀಶ್‍ನಾಯ್ಕ, ಹೇರೂರು ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ್, ಪಿಡಿಒ ಚಂದ್ರಹಾಸ, ಮಾಜಿ ಸದಸ್ಯ ನಂಜಪ್ಪ, ಲಕ್ಷ್ಮಮ್ಮ, ಶ್ರೀಧರ್, ಆರ್.ಐ.ಗಳಾದ ಮಲ್ಲಿಕಾರ್ಜುನಯ್ಯ, ನಾಗೇಶ್, ಕೃಷ್ಣಪ್ಪ ಸೇರಿದಂತೆ ಹಲವರು ಇದ್ದರು. 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap