ತುರುವೇಕೆರೆ
ಸಮ್ಮೇಳನ ಕೇವಲ ಜಾತ್ರೆಯಾಗದೆ ಕನ್ನಡದ ಮನಸ್ಸುಗಳನ್ನು ಬೆಸೆಯುವ ಸಾಹಿತ್ಯ ಹಾಗೂ ನಾಡಹಬ್ಬವಾಗಬೇಕು. ಈ ನಮ್ಮೂರ ಕನ್ನಡ ಹಬ್ಬದಲ್ಲಿ ಚರ್ಚಿಸಿದ ನಿರ್ಣಯಗಳು ವೇದಿಕೆಗೆ ಸೀಮಿತವಾಗದೆ ಜಾರಿಗೆ ಬರುವಂತೆ ಜಾಗೃತಿ ವಹಿಸ ಬೇಕಾದುದು ಪ್ರತಿಯೊಬ್ಬ ಕನ್ನಡಿಗನ ಆಶಯವಾಗಬೇಕು ಎಂದು ಸಮ್ಮೇಳನಾಧ್ಯಕ್ಷ ಡಾ.ಹುಲಿಕಲ್‍ನಟರಾಜು ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾಲ್ಲೂಕು ಕಸಾಪ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ನಮ್ಮ ಕನ್ನಡಭವನ ಲೋಕಾರ್ಪಣೆ ಹಾಗೂ 4 ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿ ಸಮ್ಮೇಳನದ ನುಡಿಯನ್ನಾಡಿದರು.
ಸಾಹಿತ್ಯಾಸಕ್ತರ ಮನಸ್ಸು ಬದಲಾಗುತ್ತಿದೆ. ಸರ್ಕಾರ ಕನ್ನಡ ಸಾಹಿತ್ಯ ಸಮ್ಮೇಳನದ ಆಚರಣೆಗೆಂದು ವಿಶೇಷ ಪ್ರೋತ್ಸಾಹ ನೀಡುತ್ತಿವೆಯಾದರು ಕನ್ನಡ ಸಾಹಿತ್ಯ ಸಮ್ಮೇಳನಗಳು ನಾಡಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಮನದಾಳಕ್ಕೆ ಮುಟ್ಟಬೇಕು. ಆ ಮೂಲಕ ಪ್ರತಿಯೊಂದು ಮನೆ ಮನಕ್ಕೂ ಸಹ ಕನ್ನಡ ಸಾಹಿತ್ಯ ಸಮ್ಮೇಳನದ ಕಂಪು ಮೂಡುವಂತಾಗುತ್ತದೆ. ಇದೆಲ್ಲಾ ಅಸಾಧ್ಯ ಎನ್ನುವ ಮಾತೆ ಇಲ್ಲ. ನಮ್ಮ ಸಮಾಜ ವೈಜ್ಞಾನಿಕವಾಗಿ ಬದಲಾಗುವ ಅಗತ್ಯವಿದೆ. ಕನ್ನಡ ಭಾಷೆಯ ಅಭಿವೃದ್ಧಿ ಅಳಿವು ಉಳಿವುಗಳ ಬಗ್ಗೆ ಚರ್ಚೆಗಳ ಅಗತ್ಯವಿದೆ.
ಎಲ್ಲದಕ್ಕೂ ಮೊದಲು ಕನ್ನಡ ಭಾಷೆಯನ್ನು ಪ್ರತಿಯೊಬ್ಬ ಕನ್ನಡಿಗ ತನ್ನಲ್ಲಿ ಅಳವಡಿಸಿಕೊಂಡು ಅಗತ್ಯವಾಗಿ ಬಳಸುವ ಮತ್ತು ಬೆಳೆಸುವ ಇಚ್ಛಾಶಕ್ತಿಯನ್ನು ಹೊಂದಿರಬೇಕು. ಕನ್ನಡ ಭಾಷೆ ಕೇವಲ ಪುಢಾರಿಯ ಭಾಷೆಯಾಗದೆ ಪ್ರಜ್ಞಾವಂತಿಕೆಯ ಭಾಷೆಯಾಗಬೇಕು. ಭಾಷೆ ಘೋಷಣೆ ಭಾಷಣಗಳಿಗಿಂತ ಅನ್ನದ ಭಾಷೆಯಾಗಿ ನೆಲೆಗೊಂಡರೆ ಮಾತ್ರ ಭಾಷೆಯ ಅಸ್ತಿತ್ವ ಉಳಿಯುತ್ತದೆ. ಇಂದು ವೈಜ್ಞಾನಿಕ ಯುಗ ಸಂಪೂರ್ಣವಾಗಿ ಕನ್ನಡ ತಂತ್ರಾಂಶವಾದರೆ ಮಾತ್ರ ತಾತ್ವಿಕತೆಯ ನೆಲೆಗಟ್ಟಿನಲ್ಲಿ ಕನ್ನಡ ಭಾಷೆಯ ಅಸಡ್ಡೆ ನಿವಾರಣೆ ಸಾಧ್ಯ ಎಂದರು.
ಪ್ರಸ್ತುತ ಸಮಾಜದಲ್ಲಿ ರೈತರ ಸ್ಥಿತಿ ಅಧೋಗತಿಯತ್ತ ಸಾಗುತ್ತಿದೆ.
ಒಂದು ಕಡೆ ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣ ಹೋಮ, ಮತ್ತೊಂದು ಕಡೆ ಅನ್ನ ನೀಡುವ ಭೂಮಿಯನ್ನು ಮಾರಾಟ ಮಾಡುತ್ತಿರುವ ರೈತರು. ಒಂದು ಕಾಲದಲ್ಲಿ ಭೂಮಿಯ ಒಡೆಯನಾಗಿದ್ದ ರೈತ ಇಂದು ಅದೇ ಭೂಮಿಯನ್ನು ಮಾರಾಟ ಮಾಡಿ ಅದೇ ಸ್ಥಳದಲ್ಲಿ ಕೂಲಿಗಾಗಿ ದುಡಿಯುತ್ತಿದ್ದಾನೆ. ಆತ ಬೆಳೆಯುತ್ತಿದ್ದ ಕಾಲಕ್ಕೆ ಸ್ವಾಭಿಮಾನಿಯಾಗಿ ನಾಲ್ಕಾರು ಜನಕ್ಕೆ ಅನ್ನ ನೀಡುತ್ತಿದ್ದ, ಆದರೆ ಇದೀಗ ಆತನೇ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಯಾಂತ್ರಿಕ ಬದುಕಿಗೆ ದಾಸರಾದ ಮಹಿಳೆಯರು ಜಮೀನಿನಲ್ಲಿ ದುಡಿಯುವ ಬದಲು ಕಾರ್ಖಾನೆಗಳಲ್ಲಿ ದುಡಿಯುಂತಾಗಿದೆ. ನಿತ್ಯವೂ ನೀರಿಲ್ಲ ಎಂದು ಬಾಯಿ ಬಡಿದುಕೊಳ್ಳುತ್ತೇವೆ, ಆದರೆ ಸುತ್ತ ಮುತ್ತಲ ಪರಿಸರವನ್ನು ನಾಶಮಾಡುತ್ತಿದ್ದೇವೆ. ಈ ರೀತಿ ಮುಂದುವರಿದರೆ ಅಂತರ್ಜಲ ಮಟ್ಟ ಕುಸಿದು ನಮ್ಮ ಮೂತ್ರವನ್ನು ನಾವೇ ಕುಡಿಯುವ ಕಾಲ ಹಾಗೂ ಅನ್ನ ಸೇವಿಸುವ ಬದಲು ಹಸಿವನ್ನು ನೀಗಿಸುವ ಗುಳಿಗೆಗಳನ್ನು ಸೇವಿಸುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಮ್ಮ ಕಣ್ಣಿಗೆ ಕಾಣುವ ರಾಜಕೀಯ ರಾಜಕೀಯ ವಿಕೃತಿಗಿಂತ ಕಣ್ಣಿಗೆ ಕಾಣುವ ಸಂಸ್ಕತಿಬೇಕು. ನಮ್ಮ ಸಮಾಜ ವೈಜ್ಞಾನಿಕವಾಗಿ ಬದಲಾಗುವ ಅಗತ್ಯವಿದೆ. ಇಂದು ದೇಹದ ಮಡಿವಂತಿಕೆಗೆ ಹೆಚ್ಚು ಬೆಲೆ ಕೊಡುತ್ತಿದ್ದೇವೆ. ದೇಹದ ಮಡಿವಂತಿಕೆಯೊಂದಿಗೆ ಆಂತರಿಕ ಮಡಿವಂತಿಕೆಗೆ ಗೌರವ ಕೊಡಬೇಕಾಗುತ್ತದೆ. ವಿದ್ಯಾವಂತಿಕೆ ಬುದ್ಧಿವಂತಿಕೆಯೊಂದಿಗೆ ಪ್ರಜ್ಞಾವಂತಿಕೆ ಬೆಳೆಸಿಕೊಳ್ಳುವ ಶಿಕ್ಷಣವನ್ನು ನೀಡಬೇಕಾಗುತ್ತದೆ. ಪಂಚಾಂಗವನ್ನು ಬದಿಗಿಟ್ಟು ಪಂಚ ಅಂಗಗಳಿಗೆ ಮಾನ್ಯತೆ ನೀಡಬೇಕು. ಕನ್ನಡ ಮನೆ ಮನದ ಭಾಷೆ ಜೊತೆಗೆ ಉದ್ಯೋಗ ನೆಲೆ ಅನ್ನ ಸಂಸ್ಕಾರ ನೀಡುವ ಭಾಷೆಯಾಗಿ ಕನ್ನಡ ಹೊರ ಹೊಮ್ಮಬೇಕು.
ಕನ್ನಡ ಭಾಷೆ ಪುಢಾರಿಯ ಭಾಷೆಯಾಗದೆ ಪ್ರಜ್ಞಾವಂತಿಕೆಯ ಭಾಷೆಯಾಗಬೇಕು, ಸಂಪೂರ್ಣವಾಗಿ ಕನ್ನಡ ತಂತ್ರಾಂಶ ಬಳಕೆಯಾಗೇಕು, ಕನಿಷ್ಠ 1 ರಿಂದ 5 ನೇ ತರಗತಿವರೆಗೆ ಕನ್ನಡ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಬೇಕು, ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿರಬೇಕು. ಆದರೆ ಅದು ಬೇರೆಯವರಿಗೆ ಮಾರಕವಾಗಿರಬಾರದು. ಸರ್ಕಾರಗಳು ಕಾರ್ಪೋರೇಟ್ ಪರವಾಗಿರದೆ ಪ್ರಗತಿಪರವಾಗಿರಬೇಕು. ಸರ್ಕಾರದ ಉದ್ಯೋಗಿಗಳು ತಮ್ಮ ಮಕ್ಕಳಿಗೆ ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕೊಡಿಸಬೇಕು, ಕನ್ನಡ ಬೆಳೆಸಬೇಕು, ಉಳಿಸಬೇಕು ಎನ್ನುವ ಸಂಘಟನೆಗಳಿಗಿಂತ ಬಳಸಿ ಉಳಿಸುವ ಮನಸ್ಸಿನ ಸಂಘಟನೆಗಳು ನಮಗೆ ಬೇಕು. ಹಿಡಿ ಹೊಡಿ ಕೊಲ್ಲು ಸಂಸ್ಕತಿಗಿಂತ ಸಕಾರಾತ್ಮಕ ಚಿಂತನೆ ಹಾಗೂ ವಿಚಾರವಂತಿಕೆ ಲೇಖನಿಯ ಸಂಸ್ಕತಿ ಬೇಕು. ದೃಷ್ಟಿಗೆ ನಿಲುಕದ ಸರ್ಕಾರಗಳಿಗಿಂತ ದೃಷ್ಟಿಗೆ ನಿಲುಕುವ ಸರ್ಕಾರಗಳು ಬೇಕು ಎಂದರು.
ಸವಿನೆನಪು:
ತಾಲ್ಲೂಕಿನ ದಿಗ್ಗಜರು ಸ್ವತಂತ್ರ ಹೋರಾಟಗಾರರು, ಕಲಾವಿದರು, ಸಾಹಿತಿಗಳು, ವೈದ್ಯರು, ಪ್ರಕೃತಿಯ ತಾಣ ಕೆರೆಗಳು, ಸಂಸ್ಥೆಗಳು, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳು, ಕಾರ್ಖಾನೆಗಳು, ರಾಜಕೀಯ ಮುತ್ಸದ್ದಿಗಳು ಮಾನ್ಯ ಶಾಸಕರುಗಳು ರಾಜಕೀಯ ಮುಖಂಡರುಗಳು ಧರ್ಮದರ್ಶಿಗಳು, ನೆಲ ಜಲ ಸಾಹಿತ್ಯ, ರೈತ, ಮಹಿಳೆ, ವೈದ್ಯರು, ಸಾಮಾಜಿಕ, ಶೈಕ್ಷಣಿಕ ಕ್ರೀಡಾ ಕ್ಷೇತ್ರಗಳಲ್ಲಿ ದುಡಿದ ನಮ್ಮ ಹಿರಿಯರೆಲ್ಲರಿಗೂ ಹೃದಯ ಸ್ಪರ್ಶಿ ನಮನಗಳನ್ನು ಸಲ್ಲಿಸಿದರು.
ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಸಂಸದ ಮುದ್ದಹನುಮೇಗೌಡ ಮಾತನಾಡಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಹಲವು ಮಹಾನೀಯರು ತಾಂತ್ರಿಕ ಪರಿಣತಿರಾಗಿ ಪ್ರಪಂಚಾದ್ಯಂತ ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಭಾಷೆಗೆ ಶೇ.75 ರಷ್ಟು ಆಂಗ್ಲ ಭಾಷೆಯನ್ನು ಸೇರಿಸಿ ಮಾತನಾಡುತ್ತಿದ್ದೇವೆ. ಇಂದಿನ ಜೀವನ ಶೈಲಿಯಲ್ಲಿ ನಾವು ಬೇರೆ ಭಾಷೆ ಮಾತನಾಡುವುದು ಅನಿವಾರ್ಯತೆಯಾಗಿದೆ ಎಂದು ತಿಳಿಸಿದರು.
ಶಾಸಕ ಮಸಾಲಜಯರಾಮ್ ಮಾತನಾಡಿ ಕನ್ನಡ ನಾಡು ನುಡಿಗಾಗಿ ಹಲವಾರು ಮಹಾನಿಯರು ಹೋರಾಟ ಮಾಡಿದ್ದಾರೆ. ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಬೆಂಗಳೂರಿನ ಶಿವಾಜಿನಗರದಲ್ಲಿಯೇ ಕನ್ನಡ ಭಾಷೆ ಮಾತನಾಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿದ್ದೇವೆ. ಇಂತಹ ಕಡೆಗಳಲ್ಲಿ ಕನ್ನಡ ಉಳಿವಿಗಾಗಿ ಹೋರಾಟ ಅಗತ್ಯವಿದೆ. ಉತ್ತಮ ಕನ್ನಡ ಭವನ ಉದ್ಘಾಟನೆಗೊಂಡಿದ್ದು ಕನ್ನಡಭಿಮಾನಿಗಳು ಕನ್ನಡ ಕಾರ್ಯಕ್ರಮಗಳನ್ನು ಮಾಡಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ ಕನ್ನಡ ನಾಡಿನಲ್ಲಿ ಎಲ್ಲರೂ ಹೇಳುವುದು ಕನ್ನಡ ಉಳಿಸಿ ಬೆಳೆಸಿ ಇದು ಅರ್ಥವಾಗದ ಪ್ರಶ್ನೆಯಾಗಿದೆ. ರಾಜ್ಯದ ಗಡಿ ನಾಡಿನ ಬೆಳಗಾಂ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕನ್ನಡ ಮಾತನಾಡುವರ ಪ್ರವೇಶವಿಲ್ಲ. ಕನ್ನಡ ಭಾಷೆಯನ್ನು ಉಳಿಸಬೇಕಿದ್ದ ರಾಜ್ಯ ಸರ್ಕಾರ ಆಂಗ್ಲ ಮಾಧ್ಯಮದ ಶಾಲೆ ತೆರೆಯಲು ಮುಂದಾಗಿರುವುದು ಶೋಚನೀಯ ಎಂದು ತಿಳಿಸಿದರು.
ಗ್ರಂಥಾಲಯ ಉದ್ಘಾಟನೆ ಕೆ.ಇ.ಆರ್.ಸಿ ಅಧ್ಯಕ್ಷ ಶಂಕರಲಿಂಗೇಗೌಡ ಮಾತನಾಡಿ 2000 ವರ್ಷ ಇತಿಹಾಸವಿರುವ ಕನ್ನಡ ಭಾಷೆಗೆ ಇಂದಿಗೂ ಇಂಟರ್‍ನೆಟ್‍ನಲ್ಲಿ ಕನ್ನಡ ಪುಸ್ತಕ ಸಿಗುತ್ತಿಲ್ಲ. ಆದ್ದರಿಂದ ಗ್ರಂಥಾಲಯದ ಅವಶ್ಯಕತೆ ಇದೆ. ಎಲ್ಲ ಪುಸ್ತಕಗಳ ದೊರೆಯುವಂತೆ ಗ್ರಂಥಾಲಯ ಇನ್ನು ಆಧುನೀಕರಣಗೊಳ್ಳಬೇಕು ಎಂದರು.
ಆಶಯ ನುಡಿಗಳನ್ನಾಡಿದ ಕಸಾಪ ಜಿಲ್ಲಾಧ್ಯಕ್ಷೆ ಬಾ.ಹ.ರಮಕುಮಾರಿ ಎಲ್ಲರ ಸಹಕಾರದಿಂದ ತುಮಕೂರಿನಲ್ಲಿ ಸುಮಾರು 13 ವರ್ಷ ನೆನೆಗುದಿಗೆ ಬಿದ್ದಿದ್ದ ಕನ್ನಡ ಭವನ ಲೋಕಾರ್ಪಣೆಗೊಂಡಿದೆ. ತಾಲ್ಲೂಕಿನ ಮಾಯಸಂದ್ರ ಹಾಗೂ ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣವಾಗಿದೆ. ತಾಲ್ಲೂಕಿನಲ್ಲಿ ಜಿಲ್ಲಾ ಸಮ್ಮೇಳನ ಮಾಡಲು ಬಹಳ ಆಸೆ ಇತ್ತು ಆದರೆ ಕಡೆ ಗಳಿಗೆಯಲ್ಲಿ ತಾಲ್ಲೂಕು ಸಮ್ಮೇಳನಕ್ಕೆ ಸೀಮಿತವಾಯಿತು. ಜಿಲ್ಲಾ ಸಮ್ಮೇಳನ ಮಾಡುವ ಅವಕಾಶ ವಂಚಿತವಾಗಿದೆ. ತುಂಬಾ ಬೇಸರ ಮೂಡಿಸುತ್ತಿದ್ದು ಇದು ಅತ್ಯಂತ ನೋವಿನ ಸಂಗತಿ ಎಂದು ತಿಳಿಸಿದರು.
ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಆಶೀರ್ವಚನ ನೀಡಿದರು. ಕಸಾಪ ತಾಲ್ಲೂಕು ಅಧ್ಯಕ್ಷ ನಂ.ರಾಜು ಪ್ರಾಸ್ತಾವಿಕ ನುಡಿಯನ್ನಾಡಿದರು. ಕೊಂಡಜ್ಜಿವಿಶ್ವನಾಥ್ ಸ್ವಾಗತಿಸಿ, ಸಾ.ಶಿ.ದೇವರಾಜು ನಿರೂಪಿಸಿದರು, ಚಂದ್ರಯ್ಯ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯೆ ರೇಣುಕಕೃಷ್ಣಮೂರ್ತಿ, ತುಮುಲ್ ಜಿಲ್ಲಾಧ್ಯಕ್ಷ ಸಿ.ವಿ.ಮಹಾಲಿಂಗಯ್ಯ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನಾಗರ್ತ, ಉಪಾಧ್ಯಕ್ಷ ನಂಜೇಗೌಡ, ಸದಸ್ಯರಾದ ಮಹಾಲಿಂಗಯ್ಯ, ಬೈರಪ್ಪ, ಹೇಮಾವತಿ ಶಿವಾನಂದ್, ತೀರ್ಥಕುಮಾರಿರವಿಕುಮಾರ್, ಸುವರ್ಣಶ್ರೀನಿವಾಸ್, ಕೆಂಪಮ್ಮ, ಡಿ.ಸಿ.ಕುಮಾರ್, ಮಂಜುನಾಥ್, ಸ್ವಾಮಿ, ಆರ್.ರವಿ, ಕೆಂಪಲಕ್ಷ್ಮಿಮ್ಮ, ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಲಚ್ಚಿಬಾಬು, ಉಪಾಧ್ಯಕ್ಷೆ ತಬಸುಮ್, ಸದಸ್ಯರಾದ ಯಜಮಾನ್ ಮಹೇಶ್, ಶಶಿಶೇಖರ್, ಶ್ರೀನಿವಾಸ್, ಟಿಎಪಿಎಂಎಸ್ ಅಧ್ಯಕ್ಷ ರಾಜು, ಮುಖಂಡರಾದ ಗಂಗಣ್ಣ, ವಿಶ್ವನಾಥ್, ಸಾ.ಶಿ.ದೇವರಾಜು, ವಿ.ಟಿ.ವೆಂಕಟರಾಮಯ್ಯ, ಸುಬ್ರಹ್ಮಣ್ಯ ಶ್ರೀಕಂಠೇಗೌಡ, ಬುಗಡನಹಳ್ಳಿಕೃಷ್ಣಮೂರ್ತಿ ಸೇರಿದಂತೆ ಸಾಹಿತ್ಯಾಭಿಮಾನಿಗಳು ಇದ್ದರು.
ರಾಷ್ಟ್ರೀಯ ಧ್ವಜಾರೋಹಣವನ್ನು ನಯೀಂ ಉನ್ನಿಸಾ, ನಾಡಧ್ವಜಾರೋಹಣ ಬಿಇಓ ಹನುಮನಾಯ್ಕ, ಪರಿಷತ್ತಿನ ಧ್ವಜಾರೋಹಣವನ್ನು ತಾಲ್ಲೂಕು ಕಸಾಪ ಅಧ್ಯಕ್ಷ ನಂ.ರಾಜು ನೆರವೇರಿಸಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ಸಮ್ಮೇಳನಾಧ್ಯಕ್ಷ ಸಾಹಿತಿ ಹುಲಿಕಲ್ ನಟರಾಜು ಹಾಗೂ ಪತ್ನಿ ಸೀಮಾರನ್ನು ಹಲವಾರು ಜಾನಪದ ಕಲಾವಿದರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಮತ್ತು ಮಹಿಳೆಯರಿಂದ ಕಳಸ ಹೊತ್ತು ತೆರದ ವಾಹನದಲ್ಲಿ ತಾಳಕೆರೆ ಸುಬ್ರಮಣ್ಯಂ ವೇದಿಕೆಯವರೆಗೆ ಭವ್ಯ ಮೆರವಣಿಗೆ ಮಾಡಲಾಯಿತು.