ಕನ್ನಡ ಭಾಷೆಯಲ್ಲ, ಅದು ಕನ್ನಡಿಗರ ಬದುಕು: ಕುಲಪತಿ

ಹೊಸಪೇಟೆ :

    ಕನ್ನಡ ಎಂದರೆ ಒಂದು ಭಾಷೆಯಲ್ಲ, ಹಲವು ಭಾಷೆಗಳ ಸಂಗಮ. ಇದರಲ್ಲಿ ಕನ್ನಡದ ಹಲವು ಪ್ರಭೇದಗಳುಂಟು. ಕನ್ನಡದ ಜೊತೆಗೆ ಉರ್ದು, ಹಿಂದಿ, ಕೊಂಕಣಿ, ತೆಲುಗು, ಮರಾಠಿ, ತುಳು, ಮಲೆಯಾಳ, ತಮಿಳು, ಇಂಗ್ಲಿಷ್ ಇತರೆ ಮುಂತಾದ ಭಾಷಿಕರನ್ನು ನಾವು ಕಾಣಬಹುದು. ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕದ ರಾಜ್ಯೋತ್ಸವವಾಗಿ ಆಚರಿಸಬೇಕು. ಆದರೆ ಬೇರೆ ಭಾಷೆಗಳನ್ನು ಮತ್ತು ಬೇರೆ ಭಾಷಿಕರನ್ನು ದ್ವೇಷಿಸಬಾರದು ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳ ಬೇಕಾಗಿದೆ. ಇದರಲ್ಲಿ ಕನ್ನಡಿಗರ ಅಂತರಂಗ ಮತ್ತು ಬಹಿರಂಗ ಎರಡೂ ಆಧರಿಸಿದೆ ಎಂದು ಕನ್ನಡ ವಿ.ವಿ.ಯ ಕುಲಪತಿ ಡಾ.ಸ.ಚಿ.ರಮೇಶ ತಿಳಿಸಿದರು.

    ಇಲ್ಲಿನ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕನ್ನಡ ಕರ್ನಾಟಕತ್ವ ಮರುಚಿಂತನೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

    ಕನ್ನಡದ ಶಕ್ತಿ ಕೇಂದ್ರ ಕರ್ನಾಟಕತ್ವ. ಕನ್ನಡ ಎನ್ನುವುದು ಕೇವಲ ಭಾಷೆಯಲ್ಲ, ಅದು ಕನ್ನಡಿಗರ ಬದುಕು, ಉಸಿರು ಹಾಗೂ ಕನ್ನಡ ಎನ್ನವುದು ಏಕಾಂಗಿ ಭಾಷೆಯಲ್ಲ. ಮಂಗಳೂರು ಕನ್ನಡ, ಧಾರವಾಡ ಕನ್ನಡ, ಬೆಂಗಳೂರು ಕನ್ನಡ, ಗುಲ್ಬರ್ಗಾ ಕನ್ನಡ ಹೀಗೆ ಹಲವು ಕನ್ನಡಗಳು ನಮ್ಮಲ್ಲಿವೆ. ಅನ್ಯ ಸಾಮಾನ್ಯರ ಚಿಂತನೆ, ಆಲೋಚನೆಗಳ ಆಧಾರದ ಮೇಲೆ ಕನ್ನಡ ಮತ್ತು ಕರ್ನಾಟಕ ಗ್ರಹಿಸುವುದು ತುಂಬಾ ಮುಖ್ಯವಾಗುತ್ತದೆ. ಇನ್ನೂ ಪ್ರಮುಖವಾಗಿ ಕನ್ನಡ ವಿಶ್ವವಿದ್ಯಾಲಯ ಮತ್ತು ಕರ್ನಾಟಕದ್ದು ಕರುಳ ಬಳ್ಳಿಯ ಸಂಬಂಧ.

   ಕನ್ನಡ ಭಾಷೆ ಮತ್ತು ಕರ್ನಾಟಕಕ್ಕೆ ಧಕ್ಕೆ ಬಂದಾಗಲೆಲ್ಲ ಅದನ್ನು ಸರಿಪಡಿಸುವ ಕೆಲಸವನ್ನು ವಿಶ್ವವಿದ್ಯಾಲಯವು ಮಾಡಿದೆ. ಇದರ ಜೊತೆಗೆ ಕನ್ನಡ ವಿಶ್ವವಿದ್ಯಾಲಯ ನಾಡಿನ ಎಲೆಮರೆ ಕಾಯಿಯಂತಿದ್ದ ಕಲಾವಿದರನ್ನು, ಸಾಹಿತಿಗಳನ್ನು, ವಿಜ್ಞಾನಿಗಳನ್ನು ಸೇರಿದಂತೆ ಜನ ಸಾಮಾನ್ಯರಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ನಾಡೋಜ ಗೌರವವನ್ನು ನೀಡಿ ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ಮಾಡುತ್ತಿದೆ ಎಂದರು.

     ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ರಹಮತ್ ತರೀಕೆರೆ ಮಾತನಾಡಿ, ಕರ್ನಾಟಕ ರಾಜ್ಯೋತ್ಸವವನ್ನು ನುಡಿ ಕೇಂದ್ರಿತವಾಗಲ್ಲದೇ, ನಾಡುಕೇಂದ್ರಿತವಾಗಿ, ಗತ ಕೇಂದ್ರಿತವಲ್ಲದೇ, ವಾಸ್ತವ ಕೇಂದ್ರಿತವಾಗಿ ಮತ್ತು ಪ್ರಭುತ್ವ ಕೇಂದ್ರಿತವಾಗಲ್ಲದೇ ಜನ ಕೇಂದ್ರಿತವಾಗಿ ಆಚರಿಸಬೇಕು. ಕರ್ನಾಟಕ ಮತ್ತು ಭಾರತದ ಸಂಬಂಧ ತಾಯಿ ಮಗಳ ಸಂಬಂಧ ದಂತಿರಬೇಕು ಎಂದು ಅಭಿಪ್ರಾಯಪಟ್ಟರು. ನಮ್ಮ ದಾರ್ಶನಿಕರು, ಕವಿಗಳು ಕನ್ನಡವನ್ನು ಎಂದು ಭಾಷಾ ಸೂಚಕವಾಗಿ ಬಳಸಲಿಲ್ಲ. ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ಕನ್ನಡಿಗರೆ.

     ದಾರ್ಶನಿಕರು, ಕವಿಗಳು, ಲೇಖಕರು ಭಾವನಾತ್ಮಕ ಬುನಾದಿಯ ಮೇಲೆ ತಮ್ಮ ಇಳಿ ವಯಸ್ಸಿನಲ್ಲೂ ಈ ನಾಡನ್ನು ಸುತ್ತಿ ಕರ್ನಾಟಕದಲ್ಲಿ ವಾಸಿಸುವ ಎಲ್ಲಾ ಭಾಷಿಗರು ಕನ್ನಡಿಗರೆ ಎಂಬ ಏಕೀಕರಣ ತತ್ವದಲ್ಲಿ ನಾಡನ್ನು ಕಟ್ಟಿದರು. ಕರ್ನಾಟಕ ರಾಜ್ಯೋತ್ಸವದ ಇಂತಹ ಸಂದರ್ಭದಲ್ಲಿ ನಾಡಿಗಾಗಿ ಸೇವೆಗೈದ ಕವಿಗಳು, ದಾರ್ಶನಿಕರು, ಹೋರಾಟಗಾರರು, ಮುತ್ಸದ್ಧಿ ರಾಜಕಾರಣಿಗಳು, ಕಲಾವಿದರು, ಕುಶಲಕರ್ಮಿಗಳ ತ್ಯಾಗ ಹಾಗೂ ಚರಿತ್ರೆ ನೆನಪಿಸಿಕೊಳ್ಳವುದು ಇಂದಿನ ಅಗತ್ಯ. ಇಂದು ನಾಡಹಬ್ಬ ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಜೊತೆಯಲ್ಲೇ ಸಂಕಟವು ಕೂಡ ಮನೆ ಮಾಡಿದೆ. ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಹಿಂದೆ ಎಂದೂ ಅನುಭವಿಸದ ಸಮಸ್ಯೆಗಳನ್ನು ಕರ್ನಾಟಕದ ಜನತೆ ಅನುಭವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

     ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಸ್ವಾಗತಿಸಿದರು. ಶೈಕ್ಷಣಿಕ ಕುಲಸಚಿವ ಡಾ.ಎಸ್.ವೈ ಸೋಮಶೇಖರ ಕಾರ್ಯಕ್ರಮವನ್ನು ನಿರೂಪಿಸಿದರು. ಉಪಕುಲಸಚಿವ ಡಾ.ಎ.ವೆಂಕಟೇಶ ಅವರು ವಂದರ್ನಾಪಣೆ ಮಾಡಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಪ್ರಾರ್ಥಿಸಿದರು. ವಿವಿಧ ನಿಕಾಯಗಳ ಡೀನರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap