ವಿಜ್ಞಾನ-ತಂತ್ರಜ್ಞಾನದಲ್ಲಿ ಕನ್ನಡ ಬಳಕೆ ಹೆಚ್ಚಾಗಲಿ..!

ದಾವಣಗೆರೆ:

    ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಸೇರಿದಂತೆ ಇತರ ಮಾತೃ ಭಾಷೆಗಳ ಬಳಕೆ ಹೆಚ್ಚಾಗಲಿ ಎಂದು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಇಂದ್ರೇಶ್ ಕೆ.ಎಂ ಆಶಯ ವ್ಯಕ್ತಪಡಿಸಿದರು.

     ಸಮೀಪದ ತೊಳಹುಣಸೆ ಬಳಿಯ ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿ ಆವರಣದಲ್ಲಿರುವ ಎಂಬಿಎ ವಿಭಾಗದ ಸೆಂಟ್ರಲ್ ಆಡಿಟೋರಿಯಮ್‍ನಲ್ಲಿ ಭಾನುವಾರ ಸ್ವದೇಶಿ ವಿಜ್ಞಾನ ಆಂದೋಳನ-ಬೆಂಗಳೂರು ಹಾಗೂ ದಾವಣಗೆರೆ ವಿವಿ ಸಂಯುಕ್ತಾಶ್ರಯದಲ್ಲಿ ಭಾರತ ರತ್ನ ಡಾ. ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನೋತ್ಸವದ ಪ್ರಯುಕ್ತ ಏರ್ಪಡಿಸಿದ್ದ 15ನೇ ಕನ್ನಡ ವಿಜ್ಞಾನ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಸೇರಿದಂತೆ ಇತರ ಮಾತೃ ಭಾಷೆಗಳನ್ನು ಹೆಚ್ಚಾಗಿ ಬಳಸುವುದರಿಂದ ಶುದ್ಧ ವಿಜ್ಞಾನ, ಬಾಹ್ಯಾಕಾಶ, ಪರಮಾಣು, ರಕ್ಷಣಾ ಸಂಶೋಧನೆ ಸೇರಿದಂತೆ ಹಲವಾರು ವಲಯಗಳಲ್ಲಿ ಹೆಚ್ಚಿನ ಸಾಧನೆ ಕೈಗೊಳ್ಳಲು ಸಹಕಾರಿಯಾಗಲಿದೆ

    ಕೃಷಿ ಹಾಗೂ ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪ್ರಾದೇಶಿಕ ಭಾಷೆ ಬಳಕೆಗೆ ಅವಕಾಶಗಳಿವೆ. ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯವನ್ನು ಬೋಧಿಸಲು ಒತ್ತು ನೀಡಬೇಕಾಗಿದೆ. ಪ್ರಾಥಮಿಕ ಹಂತದಿಂದ ಪಿ.ಯು.ಸಿ.ಯ ವರೆಗೆ ಕನ್ನಡದಲ್ಲಿ ವಿಜ್ಞಾನ ಕಲಿಕೆ ಸಾದ್ಯವಾಗಲು ವ್ಯವಸ್ಥೆ ಮಾಡಲಾಗಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸೇರಿದಂತೆ ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ನಾಡಿನ ಜನಸಾಮಾನ್ಯರಿಗೆ ತಿಳಿಸಲು ಕನ್ನಡವೇ ಸೂಕ್ತವಾದ ಭಾಷೆಯಾಗಿದೆ ಎಂದು ಹೇಳಿದರು.

      ಕನ್ನಡ ಶ್ರೀಮಂತ ಭಾಷೆಯಾಗಿದ್ದು, ಪ್ರಾದೇಶಿಕ ಭಾಷೆಗಳಲ್ಲಿ ಕನ್ನಡಕ್ಕೆ ಅತ್ಯುನ್ನತ ಸ್ಥಾನವಿದೆ. ಸಾಕಷ್ಟು ಗ್ರಂಥಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಶತಮಾನಗಳ ಹಿಂದಿನ ಗ್ರಂಥಗಳನ್ನು ಈಗಲೂ ಬಳಸುತ್ತಿದ್ದೇವೆ. ಅಲ್ಲದೇ, ಸರ್ಕಾರವು ಕಚೇರಿಗಳಲ್ಲಿ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಿದೆ. ಪತ್ರ ವ್ಯವಹಾರಗಳನ್ನೂ ಸಹ

       ಕನ್ನಡದ ಮೂಲಕ ನಡೆಸಬೇಕೆಂದು ನಿರ್ದೇಶನ ನೀಡಿದೆ. ಅದೇ ರೀತಿ, ವಿಜ್ಞಾನದಲ್ಲೂ ಕನ್ನಡದ ಬಳಕೆ ಹೆಚ್ಚಾಗಲು ಈ ಸಮ್ಮೇಳನವು ಉತ್ತೇಜನ ನೀಡಲಿ ಎಂದು ಆಶಯ ವ್ಯಕ್ತಪಡಿಸಿದರು.ಕನ್ನಡಿಗರು ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಪರಾವಲಂಬಿ ಆಗದೇ ಅಗತ್ಯ ತಂತ್ರಜ್ಞಾನ ಪೂರೈಸುವ ಸಾಮಥ್ರ್ಯ ಹೊಂದಿದ್ದೇವೆ ಎಂದ ಅವರು, ವಿಶ್ವವಿದ್ಯಾಲಯಗಳು ಬೋಧನೆ, ಸಂಶೋಧನೆ ಹಾಗೂ ಪ್ರಸರಣ ವಿಭಾಗಗಳಲ್ಲಿ ಕನ್ನಡದ ಬಳಕೆ ಹೆಚ್ಚಿಸುವುದರಿಂದ ಜನಸಾಮಾನ್ಯರನ್ನು ಹೆಚ್ಚು ತಲುಪಲು ಸಾದ್ಯವಾಗುತ್ತದೆ ಎಂದರು.

     ಪ್ರಾದೇಶಿಕ ಭಾಷೆಗಳ ಬಳಕೆಯಿಂದ ಮಾತ್ರ ಕೃಷಿ ಕ್ರಾಂತಿ ಹಾಗೂ ಕ್ಷೀರ ಕ್ರಾಂತಿ ಸಾಧ್ಯವಾಯಿತು. ಇಂಗ್ಲಿಷ್ ಮೂಲಕ ರೈತರನ್ನು ತಲುಪಲು ಸಾಧ್ಯವಾಗದು. ಕನ್ನಡದಲ್ಲಿ ತಿಳಿಸಿದಾಗ ಮಾತ್ರ ಹೆಚ್ಚು ಪರಿಣಾಮವಾಗುತ್ತದೆ ಇದಕ್ಕೆ ನಮ್ಮ ವಿವಿ ಪ್ರಾಯೋಗಿಕವಾಗಿ ಚಾಲನೆ ನೀಡಿದೆ ಎಂದರು.

      ಮಾಜಿ ಶಾಸಕ, ಸ್ವದೇಶಿ ವಿಜ್ಞಾನ ಆಂದೋಳನದ ಕಾರ್ಯಾಧ್ಯಕ್ಷ ಗಣೇಶ್ ಕಾರ್ಣಿಕ್ ಮಾತನಾಡಿ, ಗೆಲಿಲಿಯೋ ಬಂದು ಟೆಲಿಸ್ಕೋಪ್ ಹಿಡಿದ ಮೇಲೆ ಭಾರತದ ದೇವಸ್ಥಾನಗಳಲ್ಲಿ ನವಗ್ರಹ ಮಂಡಲ ಕಟ್ಟಲಿಲ್ಲ. ಅದಕ್ಕೂ ಮುಂಚೆಯೇ ಭಾರತೀಯರಿಗೆ ಗೊತ್ತಿರುವ ಕಾರಣ ಅವುಗಳನ್ನು ದೇಗುಲಗಳಲ್ಲಿ ನಿರ್ಮಿಸಿದ್ದರು. ನಾಟಿ ವೈದ್ಯರು ಹಲವು ಕಾಯಿಲೆಗಳನ್ನು ಗುಣಪಡಿಸುತ್ತಿದ್ದರು. ಹೀಗೆ ಪರಂಪರಗತವಾಗಿ ದೇಶದಲ್ಲಿ ಬೆಳೆದು ಬಂದಿರುವ ವೈಜ್ಞಾನಿಕ ಆಚರಣೆಗಳನ್ನು ಅರ್ಥ ಮಾಡಿಕೊಳ್ಳದ ಕೆಲವರು ಅವುಗಳಲ್ಲಿ ವಿಜ್ಞಾನ ಇಲ್ಲ, ಮೂಢನಂಬಿಕೆಯಿಂದ ಕೂಡಿವೆ ಎಂಬ ತಪ್ಪು ಭ್ರಮೆಯನ್ನು ಸೃಷ್ಟಿಸಿರುವ ಕಾರಣಕ್ಕೆ ಅವುಗಳನ್ನು ಈಗ ಯಾರೂ ಪರಿಗಣಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

        ನಮ್ಮ ಹಿರಿಯರ ಹೆಜ್ಜೆ ಗುರುತು ಹುಡುಕಿ, ಅದರ ಜಾಡಿನಲ್ಲಿ ನಮ್ಮ ಬದುಕಿನ ಕಲೆಯನ್ನು ಕಲಿಸಿ ಕೊಡುವ ಉದ್ದೇಶದಿಂದ ಸ್ವದೇಶಿ ವಿಜ್ಞಾನ ಆಂದೋಳನ ಕಾರ್ಯನಿರ್ವಹಿಸುತ್ತಿದೆ ಎಂದ ಅವರು, ವಿಶ್ವೇಶ್ವರಯ್ಯನವರು ಕರ್ನಾಟಕದವರು ಎಂಬುದನ್ನು ಹೇಳಿಕೊಳ್ಳಲು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಆದರೆ, ನಮ್ಮ ವಿವಿಗಳಿಂದ ಇನ್ನೊಬ್ಬ ವಿಶ್ವೇಶ್ವರಯ್ಯ ಏಕೆ ಹುಟ್ಟಿ ಬರಲಿಲ್ಲ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯ ಕತೆ ಇದೆ ಎಂದು ಹೇಳಿದರು.

       ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೊಡಬಲ್ಲ ಜ್ಞಾನ ಭಂಡಾರ ನಮ್ಮಲ್ಲಿದ್ದು, ಅದರ ಕೀಲಿ ಕೈ ಸಂಸ್ಕøತ ಭಾಷೆಯಾಗಿದೆ. ಆ ಭಾಷೆಯನ್ನು ಕಲಿಸಬೇಕೆನ್ನುವವರಿಗೆ ಕೋಮುವಾದಿ ಪಟ್ಟ ಕಟ್ಟುವಷ್ಟು ಪರಿಸ್ಥಿತಿ ಹದಗೆಟ್ಟು ಹೋಗಿದೆ. ಹುಟ್ಟಿದ ಮಗುವಿನಲ್ಲಿರುವ ಪ್ರಶ್ನಿಸುವ ಹಾಗೂ ಕ್ರಿಯಾಶೀಲ ಮನೋಭಾವವನ್ನು ಆ ಮಗು 10ನೇ ತರಗತಿಗೆ ತಲುಪುವಷ್ಟರಲ್ಲಿ ಶಿಕ್ಷಣ ನೀತಿಗಳು ಸಾಯಿಸಿ ಬಿಡುತ್ತವೆ ಎಂದು ವಿಷಾದಿಸಿದರು.

      ಸಹಜ ಸಂಶೋಧಕ ಪ್ರವೃತ್ತಿಯನ್ನು ವಿದ್ಯಾರ್ಥಿಗಳಲ್ಲಿ ವಿಶ್ವವಿದ್ಯಾಲಯಗಳು ಬೆಳೆಸಿದರೆ, ಅದ್ಭುತವಾದ ಸಾಧನೆ ಮಾಡಲು ಸಾದ್ಯವಾಗಲಿದೆ. ಜನಸಾಮಾನ್ಯರಿಗೆ ಆವಿಷ್ಕಾರ, ಸಂಶೋಧನೆ ಸುಲಭವಾಗಿ ಮುಟ್ಟ ಬೇಕಾದರೆ, ಅವೆಲ್ಲವೂ ಸ್ಥಳೀಯ ಭಾಷೆಯಲ್ಲಿ ನಡೆಯಬೇಕೆಂದು ಹೇಳಿದರು.

      ಪ್ರಾಸ್ತಾವಿಕ ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಕುಲಪತಿ, ಸ್ವದೇಶಿ ವಿಜ್ಞಾನ ಆಂದೋಳನ- ಕರ್ನಾಟಕದ ಅಧ್ಯಕ್ಷ ಈ.ಟಿ. ಪುಟ್ಟಯ್ಯ, ಕನ್ನಡ ಸಮೃದ್ಧ ಹಾಗೂ ಸಂಪದ್ಭರಿತ ಭಾಷೆಯಾಗಿದೆ. ಮನೆಯೆ ಮೊದಲ ಪಾಠ ಶಾಲಿ, ಜನನಿ ತಾನೆ ಮೊದಲ ಗುರು ಎಂಬ ಮಾತಿನಂತೆ ಮಾತೃಭಾಷೆಯಿಂದ ಕಲಿಕೆ ಮೊದಲಾಗಬೇಕಿದೆ ಎಂದರು.

      ಹರಿಹರ ಪುಷ್ಪರಗಳೆಯಲ್ಲಿ 80ಕ್ಕೂ ಹೆಚ್ಚು ಪುಷ್ಪಗಳ ವಿವರಗಳಿವೆ. ಇದು ಟ್ಯಾಕ್ಸಾನಮಿಗೆ ಉತ್ತಮ ಉದಾಹರಣೆಯಾಗಿದೆ. ಕನ್ನಡದಲ್ಲಿ ವಿಜ್ಞಾನದ ಎಲ್ಲ ವಿಷಯಗಳನ್ನು ಸಮೃದ್ಧವಾಗಿ ಬರೆಯಲು ಸಾಧ್ಯ. ಮಾತೃಭಾಷೆಯಿಂದ ಕಲಿತರೆ, ಕಲಿತದ್ದನ್ನು ಬೇರೆಯವರಿಗೆ ತಿಳಿಸಲೂ ಸುಲಭವಾಗುತ್ತದೆ. ಕನ್ನಡದಲ್ಲಿ ವೈಜ್ಞಾನಿಕ ವಿಚಾರಗಳನ್ನು ತರ್ಕ ಹಾಗೂ ವಿಷದವಾಗಿ ಬರೆಯಲು ಸಾಧ್ಯ. ವಿಜ್ಞಾನದಿಂದ ಪ್ರಗತಿ ಸಾಧಿಸಬೇಕಾದರೆ ಮಾತೃಭಾಷೆಯೇ ಸೂಕ್ತ ಎಂದರು.

        ದಾವಣಗೆರೆ ವಿವಿಯ ಕುಲಪತಿ ಡಾ.ಶರಣಪ್ಪ ವಿ. ಹಲಸೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಪ್ರೊ.ಕೆ.ವಿ.ವಾಸು, ರಮೇಶ್ ಉಪಸ್ಥಿತರಿದ್ದರು. ದಾವಣಗೆರೆ ವಿವಿ ಕುಲ ಸಚಿವ ಬಸವರಾಜ ಬಣಕಾರ್ ಸ್ವಾಗತಿಸಿದರು. ರಾಜಕುಮಾರ್ ನಿರೂಪಿಸಿದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap