ಬೆಂಗಳೂರು:
ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಬಂಧನವಾಗಿದ್ದ ಆರ್‌ಸಿಬಿಯ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ, ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್‌ನ ನಿರ್ದೇಶಕ ಸುನೀಲ್ ಮ್ಯಾಥ್ಯೂ, ಡಿಎನ್‌ಎನ ಮ್ಯಾನೇಜರ್ ಕಿರಣ್ ಕುಮಾರ್ ಮತ್ತು ಶಮಂತ್ ಮಾವಿನಕೆರೆ ಅವರಿಗೆ ಹೈಕೋರ್ಟ್ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದೆ.
ತಮ್ಮ ಬಂಧನ ಅಕ್ರಮವಾಗಿರುವುದರಿಂದ ತಕ್ಷಣ ಬಿಡುಗಡೆ ಮಾಡುವ ಮೂಲಕ ಮಧ್ಯಂತರ ಪರಿಹಾರ ನೀಡಬೇಕು ಎಂಬುದರ ಸಂಬಂಧ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠವು ಇಂದು ಆದೇಶ ಪ್ರಕಟಿಸಿದೆ.
ಅರ್ಜಿದಾರರು ನೇರ ಅಥವಾ ಪರೋಕ್ಷವಾಗಿ ಸಾಕ್ಷಿಗಳಿಗೆ ಬೆದರಿಕೆ ಅಥವಾ ಸಾಕ್ಷಿಗಳನ್ನು ತಿರುಚಬಾರದು. ಮ್ಯಾಜಿಸ್ಟ್ರಿಯಲ್ ಅಥವಾ ನ್ಯಾಯಾಂಗ ವಿಚಾರಣಾ ಆಯೋಗ ನಡೆಸುವ ತನಿಖೆಗೆ ಅರ್ಜಿದಾರರು ಸಹಕರಿಸಬೇಕು. ತಲಾ 1 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತೆಯನ್ನು ಅರ್ಜಿದಾರರು ಒದಗಿಸಬೇಕು. ಬಿಡುಗಡೆಯಾದ ಎರಡು ವಾರಗಳಲ್ಲಿ ವಿಚಾರಣಾಧೀನ ನ್ಯಾಯಾಲಯದ ವಶಕ್ಕೆ ಅರ್ಜಿದಾರರು ಪಾಸ್‌ಪೋರ್ಟ್ ಒದಗಿಸಬೇಕು. ನ್ಯಾಯಾಲಯದ ಅನುಮತಿ ಇಲ್ಲದೇ ಅರ್ಜಿದಾರರು ಹೊರ ಹೋಗುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿ ಆದೇಶಿಸಿದೆ.
ಜೂನ್ 4ರಂದು ನಡೆದಿದ್ದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದಕ್ಕೆ ಆರ್‌ಸಿಬಿ ಮತ್ತು ಡಿಎನ್‌ಎ ಸೂಕ್ತ ರೀತಿಯಲ್ಲಿ ಜನ ಸಂದಣಿ ನಿರ್ವಹಣೆ ಮಾಡದಿರುವುದೇ ಕಾರಣ ಎಂದು ಜೂನ್ 6ರಂದು ನಿಖಿಲ್, ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ಶಮಂತ್ ಅವರನ್ನು ಪೊಲೀಸರು ಬಂಧಿಸಿದ್ದರು. ಅಂದೇ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಈ ನಡುವೆ, ಪೊಲೀಸ್ ಕಸ್ಟಡಿಗೆ ಪಡೆಯಲು ಸಿಸಿಬಿ ಪ್ರಯತ್ನಿಸಿದ್ದರೂ ಅದು ಫಲಿಸಿರಲಿಲ್ಲ.
