ಕನ್ನಡ ಅನ್ನ ನೀಡುವ ಭಾಷೆಯಾಗಲಿ

ದಾವಣಗೆರೆ:

        ಈ ನೆಲದ ಮೂಲ ಭಾಷೆಯಾಗಿರುವ ಕನ್ನಡವನ್ನು ಬಲ ಪಡಿಸುವ ಮೂಲಕ ಅನ್ನ ನೀಡುವ ಭಾಷೆಯನ್ನಾಗಿ ರೂಪಿಸೋಣ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ (ವಾಸು) ಕರೆ ನೀಡಿದರು.

       ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ 63ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವದ ಸಂದೇಶ ನೀಡಿದ ಅವರು, ರಾಷ್ಟ್ರಕವಿ ಕುವೆಂಪು ಅವರ ಕವಿವಾಣಿಯಂತೆ ಸತ್ತಂತಿಹರನ್ನು ಬಡಿದೆಚ್ಚರಿಸಿ, ಕಚ್ಚಾಡುವವರನ್ನು ಕೂಡಿಸಿ ಒಲಿಸಿ, ಒಟ್ಟಿಗೆ ಬಾಳುವ ಹಾದಿಯಲ್ಲಿ ಕನ್ನಡದ ಮನಸ್ಸುಗಳನ್ನು ಕಟ್ಟುತ್ತಾ, ಕನ್ನಡ ಡಿಂಡಿಮವನ್ನು ಸಾರ್ಥಕ ಹಾದಿಯಲ್ಲಿ ಬಾರಿಸುವ ಮೂಲಕ ಕನ್ನಡವನ್ನು ನಮ್ಮ ವರ್ತಮಾನದ ಅಗತ್ಯವನ್ನಾಗಿಸುವ ಮೂಲಕ ಅನ್ನ ಕೊಡುವ ಭಾಷೆಯನ್ನಾಗಿಸಲು ಶಕ್ತಿ ಮೀರಿ ಶ್ರಮಿಸೋಣ ಎಂದು ಕಿವಿಮಾತು ಹೇಳಿದರು.

        ಕನ್ನಡ ಭಾಷೆಯಲ್ಲಿಯೇ ಉದ್ಯೋಗಾವಕಾಶ ಸೃಷ್ಟಿಯಾದರೆ, ಭಾಷೆ ತಾನಾಗಿಯೇ ಬೆಳೆಯಲಿದ್ದು, ಅನ್ಯ ಭಾಷಿಕರು ಸಹ ಕನ್ನಡ ಬಳಸುವ ವಾತಾವರಣವನ್ನು ಸೃಷ್ಟಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ರಾಜ್ಯದ ಆಡಳಿತದ ಎಲ್ಲಾ ಹಂತದಲ್ಲೂ ಕನ್ನಡವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಸರ್ಕಾರದ ಎಲ್ಲಾ ಎಲ್ಲಾ ಕಡತಗಳಲ್ಲೂ ಕನ್ನಡದಲ್ಲಿ ಟಿಪ್ಪಣಿ ಬರೆಯುವಂತೆ ಉನ್ನತ ಮಟ್ಟದ ಅಧಿಕಾರಿಗಳಿಗೂ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ ಎಂದರು.

       ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 1ನೇ ತರಗತಿಯಿಂದ 10ನೇ ತರಗತಿಯ ವರೆಗೂ ಮಕ್ಕಳು ಕನ್ನಡವನ್ನು ಕಡ್ಡಾಯವಾಗಿ ಕಲಿಯುವಂತೆ ಸರ್ಕಾರ ವಿಧೇಯಕವನ್ನು ಜಾರಿಗೊಳಿಸಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಮಕ್ಕಳ ಕಲಿಕೆಗೆ ಮಾತೃ ಭಾಷೆಯೇ ಅತ್ಯುತ್ತಮ ಮಾಧ್ಯಮವಾಗಿದ್ದು, ಇದನ್ನು ಆಡಳಿತಗಾರರು ಮನವರಿಕೆ ಮಾಡಿಕೊಳ್ಳದ ಕಾರಣ ರಾಜ್ಯದ ಕನ್ನಡ ಶಾಲೆಗಳು ಸೊರಗುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದರು.

       ಕನ್ನಡ ಶಾಲೆಗಳನ್ನು ಬಲಪಡಿಸಿದರೆ, ಅಲ್ಲಿನ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಲಿದೆ. ಇದರಿಂದ ಸಹಜವಾಗಿಯೇ ಸಮಾಜದ ಪ್ರಗತಿ ಸಾಧ್ಯವಾಗಲಿದೆ. ಆದ್ದರಿಂದ ಕನ್ನಡ ಶಾಲೆಗಳನ್ನು ಬಲಪಡಿಸಲು ರಾಜ್ಯ ಸರ್ಕಾರ ಕಠಿಣ ನಿಲುವು ಕೈಗೊಂಡಿದೆ. ಅಲ್ಲದೆ, ಸರ್ಕಾರಿ ಶಾಲೆಗಳ ಕನ್ನಡ ಮಾಧ್ಯಮ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ ಆಂಗ್ಲ ಭಾಷೆಯನ್ನು ಒಂದು ಭಾಷೆಯಾಗಿ ಪರಿಣಾಮಕಾರಿಯಾಗಿ ಕಲಿಸಲಾಗುತ್ತಿದೆ ಎಂದ ಅವರು, ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿಯೇ ಓದಿಸಬೇಕೆಂಬ ಪೋಷಕರ ಪ್ರತಿಷ್ಟೆಯೊಂದಿಗೆ ತಮ್ಮ ಮಕ್ಕಳು ಇಂಗ್ಲಿಷ್ ಕಲಿತು ಸ್ವರ್ಗವೇ ಧರೆಗಿಳಿದಂತೆ ಪೋಷಕರು ಭಾವಿಸಿರುವುದು ಅತ್ಯಂತ ವಿಪರ್ಯಾಸದ ಸಂಗತಿಯಾಗಿದೆ ಎಂದರು.

         ಒಂದು ಭಾಷೆಯಾಗಿ ಇಂಗ್ಲಿಷ್ ಬೇಕು. ಆದರೆ, ಮಾಧ್ಯಮವಾಗಿ ಏಕೆ ಬೇಕು? ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ಮುಂದುವರೆದಿರುವ ಫ್ರಾನ್ಸ್, ಜರ್ಮನಿ ಹಾಗೂ ಜಪಾನ್ ದೇಶದ ಜನರಿಗೆ ಇಂಗ್ಲಿಷ್ ಬರುವುದಿಲ್ಲ. ಆದರೆ, ಇಂಗ್ಲಿಷ್ ಭಾಷೆಯ ತಂತ್ರಜ್ಞಾನ ಸಂಬಂಧಿ ಪಾರಿಭಾಷಿಕತೆಯನ್ನು ತಮ್ಮ ಭಾಷೆಗೆ ಒಗ್ಗಿಸಿಕೊಂಡು ವಿಶ್ವವೇ ಬೆರಗಾಗುವಷ್ಟು ಸಾಧಿಸಿ ತೋರಿಸಿದ್ದಾರೆ. ಸಾಧನೆಯ ಹಾದಿಯಲ್ಲಿ ಆ ದೇಶಗಳಿಗೆ ಬೇಕಾಗದ ಇಂಗ್ಲಿಷ್ ಮಾಧ್ಯಮ ನಮಗೇಕೆ ಬೇಕು? ಎಂದು ಪ್ರಶ್ನಿಸಿದರು.

        ಜಾಗತೀಕ ಮತ್ತು ಮುಕ್ತ ಮಾರುಕಟ್ಟೆಯ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ ಸಮೃದ್ಧಿಯನ್ನು ಹೆಚ್ಚಿಸುವುದಕ್ಕಿಂತ ವ್ಯವಹಾರಿಕವಾಗಿ ಕನ್ನಡ ಬಳಕೆಯನ್ನು ಎಲ್ಲಾ ಆಧುನಿಕ ಮಾಧ್ಯಮದಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಾರ್ಯ ಹಿಂದೆಂದಿಗಿಂತಲೂ ಇಂದು ಜರೂರಾಗಿ ನಡೆಯಬೇಕಿದೆ. ಅದರಲ್ಲೂ ಗಣಕಯಂತ್ರ ನಮ್ಮ ದೈನಂದಿನ ಬದುಕಿನ ಕಾರ್ಯಶೈಲಿಗೆ ಅನಿವಾರ್ಯವಾಗಿರುವ ಈ ಹೊತ್ತಿನಲ್ಲಿ ಕನ್ನಡ ತಂತ್ರಾಂಶಗಳು ಹೆಚ್ಚಾಗದೇ ಹೋದರೆ ಹಾಗೂ ಅಂತರ್ಜಾಲ ಸಂವಹನ ಕನ್ನಡದಲ್ಲಿ ಸಾಧ್ಯವಾಗದೇ ಹೊದರೆ, ಮುಂದಿನ ಯುವ ಪೀಳಿಗೆಗೆ ಕನ್ನಡ ಕಲಿಕೆ ಹಾಗೂ ಅಧ್ಯಯನ ಕಠಿಣವಾಗುವ ಸಾಧ್ಯತೆಯನ್ನು ಮನಗಾಣಬೇಕೆಂದು ಕಿವಿಮಾತು ಹೇಳಿದರು.

        ಕನ್ನಡ ರಾಜ್ಯ ಉದಯವಾಗಿ ಆರು ದಶಕಗಳು ಸಂದಿವೆ. ಈ ಸುದೀರ್ಘ ಅವಧಿಯಲ್ಲಿ ಕರ್ನಾಟಕ ರಾಷ್ಟ್ರೀಯಮ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ನಮ್ಮ ನಾಡಿನ ಕೆಲ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ ಹಾಗೂ ಕನ್ನಡದ ಸಾಂಸ್ಕøತಿಕ ಪರಂಪರೆ ಉಜ್ವಲವಾದುದು. ಎಂಟು ಜ್ಞಾನಪೀಠ ಪಡೆದ ಭಾರತೀಯ ಭಾಷೆಗಳಲ್ಲಿ ಕನ್ನಡ ಅಗ್ರ ಪಂಕ್ತಿಯಲ್ಲಿರುವುದು ನಮ್ಮ ಹೆಗ್ಗಳಿಕೆಯಾಗಿದೆ ಎಂದರು.

        ಸ್ವಾತಂತ್ರ್ಯ ಚಳವಳಿಯ ಜೊತೆ, ಜೊತೆಯಲ್ಲಿಯೇ ಕರ್ನಾಟಕ ಏಕೀಕರಣ ಚಳವಳಿಯೂ ಆರಂಭವಾಯಿತು. ಮದ್ರಾಸ್ ಪ್ರೆಸಿಡೆನ್ಸಿ, ಮೈಸೂರು ಸಂಸ್ಥಾನ, ಬಾಂಬೆ ಪ್ರೆಸಿಡೆನ್ಸಿ, ನಿಜಾಮರ ಸಂಸ್ಥಾನ ಹೀಗೆ ಹತ್ತು ಹಲವು ಪ್ರಾಂತ್ಯಗಳಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸುವುದು ಅನಿವಾರ್ಯವಾಯಿತು. ಹೀಗಾಗಿ ಆಲೂರು ವೆಂಕಟರಾವ್, ಬೆನಗಲ್ ರಾಮರಾವ್, ಡೆಪ್ಯೂಟಿ ಚನ್ನಬಸಪ್ಪ ಸೇರಿದಂತೆ ಹಲವು ಧೀಮಂತ ನಾಯಕರ ತ್ಯಾಗ, ಬಲಿದಾನಗಳ ಕಾರಣದಿಂದಾಗಿ ಏಕೀಕರಣ ಸಾಕಾರಗೊಂಡಿತು ಎನ್ನುವುದನ್ನು ಮರೆಯುವಂತಿಲ್ಲ ಎಂದು ಸ್ಮರಿಸಿದರು.

        ಶಾಸಕ ಎಸ್.ಎ.ರವೀಂದ್ರನಾಥ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿ.ಪಂ ಅಧ್ಯಕ್ಷೆ ಕೆ.ಆರ್.ಜಯಶೀಲಾ, ಉಪಾಧ್ಯಕ್ಷೆ ರಶ್ಮಿ ರಾಜಪ್ಪ, ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ, ಸದಸ್ಯ ಆವರಗೆರೆ ಉಮೇಶ್, ಕಾರ್ಮಿಕ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಜಿ ಪಂ ಸಿಇಓ ಎಸ್.ಅಶ್ವತಿ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link