ಕನ್ನಡ ಸಂಘಗಳಿಂದ ಕನ್ನಡದ ಮಾನ ಹರಾಜು

ದಾವಣಗೆರೆ:

     ಇತ್ತೀಚಿನ ದಿನಗಳಲ್ಲಿ ರಸ್ತೆಗೊಂದು, ಗಲ್ಲಿಗೊಂದು ಕನ್ನಡ ಸಂಘಟನೆಗಳು ಹುಟ್ಟಿಕೊಂಡು, ಕನ್ನಡದ ಮಾನ ಮರ್ಯಾದೆ ಹರಾಜು ಹಾಕುತ್ತಿವೆ ಎಂದು ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಹಾಗೂ ಹಿರಿಯ ಕನ್ನಡ ಚಳುವಳಿ ನಾಯಕ ಸಾ.ರಾ. ಗೋವಿಂದು ಬೇಸರ ವ್ಯಕ್ತಪಡಿಸಿದರು.

       ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಕರ್ನಾಟಕ ಚೂಡಾಮಣಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕನ್ನಡದ ಹೆಸರು ಹೇಳಿಕೊಂಡು ಸಂಘ ಕಟ್ಟುವವರು ಕನ್ನಡ ಕೊಲ್ಲುವ ಕೆಲಸ ಮಾಡಬಾರದು. ಕನ್ನಡದ ಹೆಸರು ಹೇಳಿಕೊಂಡು ಜೀವನ ಹೊರೆಯಬಾರದು.

      ಇಂತಹ ಕೆಲಸಮಾಡುವವರಿಂದಾಗಿ ಕನ್ನಡದ ಪರ ಹೋರಾಟ ಮಾಡುವ ನಮಗೆ ಗೌರವ ಇಲ್ಲದಂತಾಗಿದೆ ಎಂದು ಮಾರ್ಮಿಕವಾಗಿ ನುಡಿದರು.ಕೆಲವರು ಕನ್ನಡ ಸಂಘಟನೆಯ ರಾಜ್ಯಾಧ್ಯಕ್ಷ ಎಂಬುದಾಗಿ ದೊಡ್ಡ ಬೋರ್ಡ್ ಹಾಕಿಕೊಂಡಿರುತ್ತಾರೆ. ಆದರೆ, ಇವರು ಸತ್ತರೆ ಹೆಣ ಹೊರಲು ನಾಲ್ಕು ಜನರು ಬರುವುದಿಲ್ಲ. ಇಂತಹ ದುಸ್ಥಿತಿ ಇಂದೊದಗಿ ಬಂದಿದೆ. ಕನ್ನಡದ ದುರ್ಬಳಕೆ ಆಗುತ್ತಿರುವ ಕಾರಣಕ್ಕಾಗಿಯೇ ಕನ್ನಡ ಸಂಘಟನೆಗಳಿಗೆ ಈಗ ಯಾರೂ ಹೆದರುತ್ತಿಲ್ಲ ಎಂದರು.

     ನಾನು ಕಳೆದ 30 ವರ್ಷಗಳಿಂದ ಕನ್ನಡ ಪರ ಹೋರಾಟದ ನೇರ ಹಾದಿಯಲ್ಲಿ ನಡೆಯುತ್ತಿದ್ದೇನೆ. ಹೋರಾಟವನ್ನು ಎಂದೂ ಪ್ರಶಸ್ತಿಗೆ ಮಾರಿಕೊಂಡಿಲ್ಲ. ಕನ್ನಡ ಚಳುವಳಿಯನ್ನು ರಾಜಕೀಯಕ್ಕೆ ಬಳಸಿಲ್ಲ, ಅಡಮಾನ ಇಟ್ಟಿಲ್ಲ. ಅದೇ ನನಗೆ ನೆಮ್ಮದಿ ನೀಡಿದೆ ಎಂದ ಅವರು, ರಾಜಕೀಯ ಲಾಭಕ್ಕೆ ಸಂಘಟನೆ ಬಳಸಬಾರದು ಎಂಬ ಆದರ್ಶನವನ್ನು ಡಾ.ರಾಜಕುಮಾರ್ ನಮಗೆ ಬಿಟ್ಟು ಹೋಗಿದ್ದಾರೆ ಎಂದು ಸ್ಮರಿಸಿದರು.

    ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ, ನಮ್ಮ ಬೆಳವಣಿಗೆಗೆ ಬೇರೆ ಭಾಷೆಗಳನ್ನು ಕಲಿಯಬೇಕು. ಆದರೆ, ಕನ್ನಡವನ್ನೇ ನಾವೆಲ್ಲರೂ ಮೊದಲ ಭಾಷೆಯಾಗಿ ಕಲಿಯಲು ಆದ್ಯತೆ ನೀಡಬೇಕು. ನೆಲ, ಜಲ ಹಾಗೂ ಭಾಷೆಯ ವಿಷಯ ಬಂದಾಗ ರಾಜ್ಯದ ಎಲ್ಲ ಸಂಸದರೂ ಒಂದಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ರಾಜ್ಯಕ್ಕಾಗಿ ಹೋರಾಟಗಳನ್ನು ಮಾಡಿದ್ದೇವೆ. ಆದರೆ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

     ಆಶಯ ನುಡಿಗಳನ್ನಾಡಿದ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ, ನಮ್ಮ ಸಂಸ್ಥೆಯು 2007ರಿಂದ ಕರ್ನಾಟಕ ಚೂಡಾಮಣಿ ಪ್ರಶಸ್ತಿ ನೀಡುತ್ತಾ ಬಂದಿದೆ. ಬೆಂಗಳೂರಿನ ರೈಲಿನ ಅಚ್ಚು ಗಾಲಿ ಕಾರ್ಖಾನೆಯಲ್ಲಿ ಕನ್ನಡಿಗರಿಗಾಗಿ ನಡೆಸಿದ ಹೋರಾಟ, ಗೋಕಾಕ್ ವರದಿ ಜಾರಿ ಹೋರಾಟ, ಬೆಳಗಾವಿಯಲ್ಲಿ ಕನ್ನಡಕ್ಕಾಗಿ ನಡೆಸಿದ ಹೋರಾಟ ಸೇರಿದಂತೆ ಸಾ.ರಾ. ಗೋವಿಂದು ಅವರ ಸುದೀರ್ಘ ಹೋರಾಟವನ್ನು ಗುರುತ್ತಿ ಈ ಪ್ರಶಸ್ತಿ ನೀಡಲಾಗಿದೆ ಎಂದರು.

      ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ ಕುರ್ಕಿ ಅಭಿನಂದನಾ ನುಡಿಗಳನ್ನಾಡಿದರು.
ಕಮ್ಮತ್ತಹಳ್ಳಿ – ಪಾಂಡೋಮಟ್ಟಿಯ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಕೆ.ಜಿ. ಶಿವಕುಮಾರ್, ಕೆ.ಎಸ್.ಆರ್.ಟಿ.ಸಿ. ವಿಭಾಗೀಯನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್. ಹೆಬ್ಬಾಳ್ ಮತ್ತಿತರರು ಉಪಸ್ಥಿತರಿದ್ದರು.ಕೆ.ಎಸ್. ಪ್ರಭುಸ್ವಾಮಿ ಸ್ವಾಗತಿಸಿದರು. ಕೆ.ಎಸ್.ಎಂ. ಹುಸೇನ್ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link