ಶಿರಾ
ಬ್ರಿಟೀಷರು ಭಾರತಕ್ಕೆ ಆಡಳಿತ ನೀಡುವುದರ ಜೊತೆಗೆ ಚರಿತ್ರೆ ಬರೆದರು, ಶಾಸನಗಳನ್ನು ಸಂಗ್ರಹಿಸಿ, ಅವುಗಳನ್ನು ಪ್ರಕಟಿಸಿದರು, ನಿಘಂಟುಗಳನ್ನು ರಚಿಸಿ ಕನ್ನಡ ಭಾಷೆಯನ್ನು ಉಳಿಸಲು ಶ್ರಮಿಸಿದರು ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ಕೆ. ಹನುಮತರಾಯಪ್ಪ ತಿಳಿಸಿದರು.
ಸಿರಾ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಭವನದಲ್ಲಿ ಕಸಾಪ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ರಾಜ್ಯದಲ್ಲಿ 6 ಕೋಟಿಗೂ ಮಿಗಿಲಾದ ಜನಸಂಖ್ಯೆ ಇದ್ದಾಗ್ಯೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ಮೂರು ಲಕ್ಷ ಮೀರಿಲ್ಲದಿರುವುದು ವಿಷಾದನೀಯ ಎಂದು ಹೇಳಿ, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವನ್ನು ಪಡೆಯಬೇಕೆಂದು ತಿಳಿಸಿದರು.
ಪ್ರಾಧ್ಯಾಪಕ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ಹಾದಿಯ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡುತ್ತಾ, ಹರಿದು ಹಂಚಿ ಹೋದ ಕನ್ನಡಿಗರನ್ನು ಒಂದು ಗೂಡಿಸುವ ಸಲುವಾಗಿ 1915 ಮೇ 5 ರಂದು ಪರಿಷತ್ ಪ್ರಾರಂಭವಾದಾಗ ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಎಂದು ಇತ್ತು.
ಕರ್ನಾಟಕ-ಕರ್ಣಾಟಕ ಶಬ್ದದಲ್ಲಿ ನ-ಣ ಗೊಂದಲದಿಂದಾಗಿ, ಈ ಹೆಸರನ್ನು 1938 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಎಂದು ಬಳ್ಳಾರಿ ಸಮ್ಮೇಳನದಲ್ಲಿ ಬದಲಾಯಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿಗೆ ನಾನು ವಿದ್ಯಾರ್ಥಿಯಾಗಿರುವಾಗಲೇ ಸದಸ್ಯತ್ವ ಶುಲ್ಕ 50 ರೂ.ಗಳನ್ನು ವಿವಿಧ ಕಂತುಗಳಲ್ಲಿ ಕಟ್ಟಿ ಸದಸ್ಯತ್ವವನ್ನು ಅಭಿಮಾನದಿಂದ ಪಡೆದುಕೊಂಡೆನು. ಬೆಂಗಳೂರಿನಲ್ಲಿ ಅನ್ಯ ಭಾಷಿಕರ ಸಂಖ್ಯೆ ಹೆಚ್ಚುತ್ತಿದ್ದು, ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ನಗರವನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂಬ ಉನ್ನಾರ ನಡೆಯುತ್ತಿದೆ ಎಂದು ಹೇಳಿದರು.
ಆಧ್ಯಾತ್ಮ ಚಿಂತಕರಾದ ಪಿ.ಹೆಚ್. ಮಹೇಂದ್ರಪ್ಪನವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯ ಜೊತೆಗೆ ಕನ್ನಡಿಗರ ಜನ ಜೀವನವನ್ನು ಒಂದು ಗೂಡಿಸುವ ಕೆಲಸವನ್ನು ಪರಿಷತ್ತು ಮಾಡುತ್ತಿದೆ. ಸರ್. ಎಂ. ವಿಶ್ವೇಶ್ವರಯ್ಯನವರು, ನಾಲ್ವಡಿ ಕೃಷ್ಣರಾಜ ಒಡೆಯರ್‍ರ ಉತ್ತೇಜನದಿಂದ ಈ ಪರಿಷತ್ತು ಸ್ಥಾಪನೆಯಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜನಪರ ಹೋರಾಟಗಾರ ಕಸವನಹಳ್ಳಿ ರಮೇಶ್ ಮಾತನಾಡುತ್ತಾ ನಾನು ವಿಜ್ಞಾನ ಪದವೀಧರನಾದರೂ, ಕನ್ನಡ ಸಾಹಿತ್ಯ ಓದುವುದರಿಂದ ಸಿಗುವ ಸಂತೋಷ ಮತ್ತೆ ಯಾವುದರಿಂದಲೂ ನನಗೆ ಸಿಗುವುದಿಲ್ಲ. ಪ್ರತಿ ದಿನ ಓದದೆ ನನಗೆ ಮಲಗಲು ಸಾಧ್ಯವಾಗುವುದಿಲ್ಲ. ನಾನೊಬ್ಬನೇ ಓದಿ ಜ್ಞಾನಿಯಾದರೆ ಸಾಲದು, ನನ್ನ ಜನರು ಓದಲಿ ಎಂಬ ಉದ್ದೇಶದಿಂದ ನನ್ನ ಮನೆಯ ಗ್ರಂಥಾಲಯವನ್ನು, ನಮ್ಮೂರ ಗ್ರಂಥಾಲಯ ಎಂಬ ಹೆಸರಿಟ್ಟು ಪ್ರಾರಂಭಿಸಿದ್ದೇನೆ. ಇದಕ್ಕೆ ವಿದ್ಯಾರ್ಥಿಗಳಿಂದ, ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಜನರು ಪ್ರೀತಿಯಿಂದ ಬಂದು ಓದುತ್ತಿರುವುದು ನೋಡಿ ಸಂತೋಷವಾಗುತ್ತಿದೆ ಎಂದು ಹೇಳಿದರು.
ಮುಂದುವರೆದು ಮಾತನಾಡುತ್ತಾ ಭದ್ರಾ ಮೇಲ್ದಂಡೆ ಯೋಜನೆಯ ಬಗ್ಗೆ ಸವಿವರವಾಗಿ ತಿಳಿಸುತ್ತಾ, ಇದರಲ್ಲಿ ಸಿರಾ ತಾಲ್ಲೂಕಿನ 41 ಕೆರೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಯೋಜನೆಯಲ್ಲಿ ತುಮಕೂರು ಜಿಲ್ಲೆಗೆ 3 ಟಿ.ಎಂ.ಸಿ. ನೀರು ಮಂಜೂರಾಗಿರುವುದು ಅಭಿನಂದನಾರ್ಹ. ಆದರೆ ಇಲ್ಲಿ ನೀರಾವರಿ ಹೋರಾಟಗಾರರ ಕೊರತೆ ಇರುವುದು ವಿಷಾದನೀಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕಸಾಪ ಅಧ್ಯಕ್ಷ ಡಾ.ಎನ್. ನಂದೀಶ್ವರ, ಕನ್ನಡ ಭಾಷೆ ಶ್ರೀಮಂತವಾಗಿದೆ. ಇಂದಿನ ಎಲ್ಲಾ ಕನ್ನಡ ಸಂಸ್ಥೆಗಳ ರಚನೆಗೆ ಪರಿಷತ್ತು ಒಂದಿಲ್ಲೊಂದು ಕಾರಣವಾಗಿ ಮಾತೃಸ್ಥಾನದಲ್ಲಿದೆ. 105 ವರ್ಷ ಕಂಡಿರುವ ಪರಿಷತ್ತನ್ನು ಕನ್ನಡಿಗರೆಲ್ಲಾ ಸದಸ್ಯತ್ವ ಪಡೆದು ಹೆಮ್ಮರವಾಗಿ ಬೆಳಸಬೇಕು. ಪರಿಷತ್ತಿನ ಅಧ್ಯಕ್ಷ ಸ್ಥಾನ 3 ವರ್ಷ ಸಾಕಾಗಿತ್ತು. 5 ವರ್ಷ ಮಾಡಿರುವುದನ್ನು ನಾನು ಇಷ್ಟಪಡುವುದಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಸಾಹಿತಿ ಡಿ.ಎಸ್. ಕೃಷ್ಣಮೂರ್ತಿ, ನಿಕಟ ಪೂರ್ವ ಅಧ್ಯಕ್ಷ ವೈ. ನರೇಶ್ ಬಾಬು, ಸಿರಾ ವೆಂಕಟೇಶ್, ಬಡೇನಹಳ್ಳಿ ಗೋವಿಂದಯ್ಯ ಮಾತನಾಡಿದರು.ಹುಣಸೇಹಳ್ಳಿ ರಾಜಣ್ಣನವರು ಪ್ರಾರ್ಥಿಸಿದರು. ಪರಿಷತ್ತಿನ ಕಾರ್ಯದರ್ಶಿ ದ್ವಾರನಕುಂಟೆ ಲಕ್ಷ್ಮಣ್ ಸ್ವಾಗತಿಸಿದರು. ಸಾಹಿತಿ ಮದ್ದಕ್ಕನಹಳ್ಳಿ ಈರಪ್ಪ ವಂದಿಸಿದರು. ಪರಿಷತ್ತಿನ ಮತ್ತೊಬ್ಬ ಕಾರ್ಯದರ್ಶಿ ಕೆ.ಎಸ್. ಚಿದಾನಂದ ಕಾರ್ಯಕ್ರಮ ನಿರೂಪಿಸಿದರು.