ತುಮಕೂರು : ದೇವರಾಯನದುರ್ಗ ಅರಣ್ಯದಲ್ಲಿ ಹೊಸ ಸಸ್ಯ ಪ್ರಭೇದ ಪತ್ತೆ!!

ತುಮಕೂರು : 

      ತಾಲ್ಲೂಕಿನ ದೇವರಾಯನದುರ್ಗ ಸಂರಕ್ಷಿತ ಅರಣ್ಯದಲ್ಲಿ ಪ್ರಥಮ ಬಾರಿಗೆ ಬೆಟ್ಟಗಳ ಇಳಿಜಾರಿನ ಒಣ ನೆಲದಲ್ಲಿ ಬೆಳೆಯುವ ಹೊಸ ಪ್ರಭೇದ ಸಸ್ಯವೊಂದು ಪತ್ತೆಯಾಗಿದೆ. ಈ ಸಸ್ಯಕ್ಕೆ ತುಮಕೂರು ಜಿಲ್ಲೆಯ ಸ್ಮರಣಾರ್ಥವಾಗಿ ಬ್ರಾಕಿಸ್ಟೆಲ್ಮಾ ತುಮಕೂರೆನ್ಸ್ (Brachystelma tumakurense) ಎಂದು ನಾಮಕರಣ ಮಾಡಲಾಗಿದೆ ಎಂದು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ತಿಳಿಸಿದ್ದಾರೆ.

     ದೇವರಾಯನದುರ್ಗದ ಎಲೆ ಉದುರುವ ಕಾಡಿನಲ್ಲಿ ಕೆಲವೇ ಸಂಖ್ಯೆಯ ಸಸ್ಯಗಳನ್ನು 2017ರ ಜುಲೈ 30 ರಂದು ಕ್ಷೇತ್ರ ಅಧ್ಯಯನದ ಸಂದರ್ಭದಲ್ಲಿ ಪತ್ತೆ ಹಚ್ಚಲಾಯಿತು. ಈ ಸಸ್ಯವು ಬಾಧೆ ಹುಲ್ಲಿನ (ಸಿಂಬೋಪೊಗಾನ್) ಮಧ್ಯೆ ಬೆಳೆಯುವ ಹುಲ್ಲಿನ ಜಾತಿಯ ಸಣ್ಣ ಸಸ್ಯವಾಗಿದ್ದು, ಸುಮಾರು ಒಂದು ಮೀಟರ್ ಉದ್ದ ಬೆಳೆಯುತ್ತದೆ. ಕಾಂಡವು ದುಂಡಾಗಿದ್ದು ದುರ್ಬಲವಾಗಿರುತ್ತದೆ, ನೇರ ಬೆಳೆಯುವ ಈ ಸಸ್ಯವು ಕೆಲವೊಮ್ಮೆ ಕವಲೊಡೆಯುತ್ತದೆ, ಎಲೆಗಳು ಮೊನಚಾಗಿದ್ದು ಜೋತಾಡುತ್ತವೆ. ಮಾರ್ಪಾಡಾದ ಬೇರು ಗೆಡ್ಡೆಯ ರೂಪದಲ್ಲಿ ಭೂಮಿಯೊಳಗಿದ್ದು ಜೂನ್-ಜುಲೈ ತಿಂಗಳಿನಲ್ಲಿ ಮುಂಗಾರು ಮಳೆ ಬಿದ್ದಾಗ ಚಿಗುರೊಡೆದು ಹೂ ಬಿಡುತ್ತದೆ. ಹೂ ಮತ್ತು ಎಲೆಗಳ ಬಾರಕ್ಕೆ ಕಾಂಡ ಬಾಗುತ್ತದೆ. ಆಗಸ್ಟ್-ಸೆಪ್ಟೆಂಬರ್‍ನಲ್ಲಿ ಕಾಯಿ ಬಿಡುತ್ತದೆ, ಅದರ ಕಾಯಿಗಳು ಎತ್ತಿನ ಕೊಂಬಿನ ರೂಪದಲ್ಲಿರುತ್ತವೆ.

      ಇಂತಹ ಲಕ್ಷಣಗಳುಳ್ಳ ಸಸ್ಯವನ್ನು ಸಸ್ಯ ಶಾಸ್ತ್ರಜ್ಞರಾದ ಡಾ.ವಿ.ಭಾಸ್ಕರ್ ಅವರ ಗಮನಕ್ಕೆ ತಂದಾಗ ಇದು ಹೊಸ ಪ್ರಭೇದವಾಗಿ ಕಂಡು ಬರುತ್ತಿರುವುದರಿಂದ ಸೂಕ್ಷ್ಮ ಅಧ್ಯನಕ್ಕಾಗಿ ಹೂಗಳ ಅಂಡಾಶಯ, ಅಂಡಕಗಳ ವಿಚ್ಚೇದನ ರಚನೆಗಳನ್ನು ಅಧ್ಯಯನ ಮಾಡಿ ಬಾಟ್ನಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆಗೆ ಲೇಖನ ಕಳಿಸಲಾಯಿತು. ಈ ಸಂಸ್ಥೆಯವರು ಅಂಡಾಶಯದ ರಚನೆ ಮರು ಅಧ್ಯಯನಕ್ಕೆ ಸಂಶೋಧನಾ ಪ್ರಬಂಧವನ್ನು ಹೆಚ್ಚಿನ ಮಾಹಿತಿಗಾಗಿ ವಾಪಸ್ಸು ಕಳಿಸಿದ್ದು, ಅಷ್ಟರಲ್ಲಿ ಡಾ.ವಿ.ಭಾಸ್ಕರ್‍ರವರು ಕಾರಣಾಂತರಗಳಿಂದ ಅಸುನೀಗಿದರು. ನಂತರ ಅವರ ಸ್ನೇಹಿತರು ಮತ್ತು ಜಿ.ಕೆ.ವಿ.ಕೆ ಯಲ್ಲಿ ಸಸ್ಯ ಶಾಸ್ತ್ರಜ್ಞರಾಗಿದ್ದ ಎ.ಎನ್.ಶೃಂಗೇಶ್‍ರವರ ನೆರವು ಪಡೆದು ಭಾರತದಲ್ಲಿ ಸಿಗುವ 33 ಬ್ರಾಕಿಸ್ಟೆಲ್ಮಾ ಪ್ರಬೇಧಗಳ ಪೈಕಿ ಕರ್ನಾಟಕದಲ್ಲಿ 7 ಪ್ರಬೇಧಗಳ ವಿಸ್ತರಣೆ ಹಾಗೂ ಅವುಗಳಲ್ಲಿರುವ ಲಕ್ಷಣಗಳನ್ನು ಅಧ್ಯಯನ ಮಾಡಲಾಯಿತು. ಈ ಎಲ್ಲಾ ಪ್ರಬೇಧಗಳಿಗಿಂತ ವಿಶೇಷ ಲಕ್ಷಣಗಳು ಬ್ರಾಕಿಸ್ಟೆಲ್ಮಾ ತುಮಕೂರೆನ್ಸ್ ಪ್ರಬೇಧಲ್ಲಿರುವುದನ್ನು ಎ.ಎನ್.ಶೃಂಗೇಶ್, ಸಹನಾ ಶೃಂಗೇಶ್ ಮತ್ತು ಪಿ.ವೇಣುರವರು ಪತ್ತೆಹಚ್ಚಿ ಪ್ರಬಂಧವನ್ನು ಪುನರ್ ರಚಸಿ ಡಾ.ಎಂ.ಸಂಜಪ್ಪ ನವರ ಮಾರ್ಗದಲ್ಲಿ ಬಾಟ್ನಿಕಲ್ ಸರ್ವೆ ಆಫ್ ಇಂಡಿಯಾಗೆ ಸಲ್ಲಿಸಲಾಗಿ ಇದು ಇಡೀ ಭಾರತದಲ್ಲೆ ಹೊಸ ಪ್ರಬೇಧದ ಸಸ್ಯವೆಂಬುದಾಗಿ 2021 ರ ಜೂನ್ 30 ರಂದು ಘೋಷಿಸಲಾಗಿದೆ.

      ಈ ಸಸ್ಯದಿಂದ ಪ್ರಯೊಜನ ಇದೆಯಾ ಎಂದು ಈಗಾಗಲೆ ಮನಸ್ಸಿನಲ್ಲಿ ಪ್ರಶ್ನೆಗಳು ಮೂಡಿರಬಹುದು ಇದು ಮಾನವನ ಪ್ರಯೋಜನಕ್ಕಾಗಿ ವಿಕಾಸ ಹೊಂದಿಲ್ಲ. ಇದರ ಎಲೆ, ಕಾಂಡ ತಿನ್ನುವ ಮೊಲ, ಬೆರನ್ನು ತಿನ್ನುವ ಮುಂಗಸಿ, ಇಲಿ, ಹಂದಿಗಳು, ಹೂ ಬಿಟ್ಟಾಗ ಬರುವ ಚಿಟ್ಟ್ಟೆಗಳು, ಜೇಡ, ಇರುವೆಗಳ ನಡುವೆ ಅವಿನಾಭಾವ ಸಂಬಂಧವಿದೆ. ಆಹಾರಜಾಲದಲ್ಲಿ ಈ ಸಸ್ಯಕ್ಕೆ ತನ್ನದೇ ಆದ ಪಾತ್ರವಿದೆ.

      ಇಂತಹ ಅಪರೂಪದ ಸಸ್ಯ ನಮ್ಮ ತುಮಕೂರು ಜಿಲ್ಲೆಯಲ್ಲಿ ಸಾವಿರಾರು ವರ್ಷಗಳಿಂದ ಬದುಕುಳಿದಿದೆ. ಇಂತಹ ಸಾವಿರಾರು ಪ್ರಬೇಧದ ಸಸ್ಯಗಳು ಜಿಲ್ಲೆಯ ಬೇರೆ ಬೇರೆ ಕಾಡುಗಳಲ್ಲಿ ಕಂಡು ಬರುತ್ತಿವೆ. ಇವುಗಳ ಸಂರಕ್ಷಣೆಯಾಗಬೇಕಾದರೆ ಬೆಟ್ಟ-ಗುಡ್ಡಗಳಿಗೆ ಬೆಂಕಿ ಇಡುವುದನ್ನು ತಪ್ಪಿಸಬೇಕು, ಬೆಟ್ಟಗಳಲ್ಲಿ ಕಲ್ಲುಗಣಿಗಾರಿಕೆ ನಿಯಂತ್ರಿಸಬೇಕಾಗಿದೆ. ಹಾಗೂ ಮೋಜಿಗಾಗಿ ಅರಣ್ಯದೊಳಗೆ ಅನಧಿಕೃತ ಪ್ರವೇಶ ನಿರ್ಬಂಧಿಸಲು ಅರಣ್ಯ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಒತ್ತಾಯಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅವರ ಮೊಬೈಲ್ ಸಂಖ್ಯೆ 94486 17529 ಅನ್ನು ಸಂಪರ್ಕಿಸಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap