ದಾವಣಗೆರೆ:
ಕಡಲ ತೀರದ ಭಾರ್ಗವ ಡಾ.ಶಿವರಾಮ ಕಾರಂತರು ರಚಿಸಿರುವ ಯಕ್ಷಗಾನ ಮತ್ತು ಶಿಶು ಸಾಹಿತ್ಯವು ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಮಕ್ಕಳ ಲೋಕದ ಸಂಸ್ಥಾಪಕ ಕೆ.ಎನ್.ಸ್ವಾಮಿ ಅಭಿಪ್ರಾಯಪಟ್ಟರು.
ನಗರದ ರಶ್ಮಿ ವಸತಿ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಅವರು, ಆಡು ಮುಟ್ಟದ ಸೊಪ್ಪಿಲ್ಲ ಕಾರಂತರು ಮಾಡದ ಕೆಲಸವಿಲ್ಲ. ಸಾಹಿತ್ಯ ಕೃತಿಗಳನ್ನು, ಜೀವನ ವೈಶಾಲ್ಯತೆಯನ್ನು ಬಹುಮುಖ ಪ್ರತಿಭೆಯನ್ನು ಕಾರಂತರು ತಮ್ಮದೇ ಆದ ಶೈಲಿಯಲ್ಲಿ ಅನಾವರಣಗೊಳಿಸಿದ್ದಾರೆ. ಅದರಲ್ಲಿಯೂ ಅವರು ರಚಿಸಿರುವ ಯಕ್ಷಗಾನ ಮತ್ತು ಶಿಶು ಸಾಹಿತ್ಯ ಜನ ಮನ್ನಣೆ ಪಡೆದಿದೆ ಎಂದರು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ದಿಗ್ಗಜರು ತಮ್ಮದೇಯಾದ ಕೊಡುಗೆ ನೀಡುವ ಮೂಲಕ ಕನ್ನಡ ಸಾಹಿತ್ಯವನ್ನು ಸಮೃದ್ಧಿಗೊಳಿಸಿದ್ದಾರೆ. ಅಂತಹವರಲ್ಲಿ ಕಡಲ ತೀರದ ಭಾರ್ಗವ ಡಾ| ಶಿವರಾಮ ಕಾರಂತರು ಅಗ್ರಗಣ್ಯ ಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದರು.
ದತ್ತಿ ದಾನಿಗಳ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬಿ.ಎಂ.ಸದಾಶಿವಪ್ಪ ಶ್ಯಾಗಲೆ ಮಾತನಾಡಿ, ಡಾ.ಕಾರಂತರು ಚೋಮನದುಡಿ, ಮರಳಿ ಮಣ್ಣಿಗೆ, ಬೆಟ್ಟದ ಜೀವ, ಅಳಿದ ಮೇಲೆ, ಮೈಮನಗಳ ಸುಳಿಯಲ್ಲಿ ಸೇರಿದಂತೆ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದು, ಅವರ ಅನೇಕ ಕಾದಂಬರಿಗಳು ಪ್ರಖ್ಯಾತಿ ಗಳಿಸಿವೆ. ಇವರ ಮೂಕಜ್ಜಿಯ ಕನಸುಗಳು ಕೃತಿಗೆ ಪ್ರಶಸ್ತಿ ಲಭಿಸಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಡಾ.ಶಿವರಾಮ ಕಾರಂತರಿಗೆ ಅವರ ಸಾಹಿತ್ಯಿಕ ಸಾಧನೆಯನ್ನು ಮೆಚ್ಚಿ 1955ರಲ್ಲಿ ಮೈಸೂರಿನಲ್ಲಿ ನಡೆದ 37ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಡಾ.ಕಾರಂತರಿಗೆ ನಾಟಕದ ಗೀಳು ಇದ್ದುದನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಇವರು, ಗರ್ಭಗುಡಿ, ಬಿತ್ತಿದ ಬೆಳೆ, ಮುಕ್ತದ್ವಾರ, ಕಿಸಾ ಗೌತಮೆ, ಬುದ್ಧೋದಯ, ಯಾರೋ ಅವರು ಎನ್ನುವಂತಹ ನಾಟಕಗಳನ್ನು ರಚಿಸಿ, ಜನಪ್ರಿಯರಾಗಿರೆ ಎಂದರು.
ಡಾ.ಪರ್ವತಪ್ಪ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷೆ ಅರುಣಾ ಪರಮೇಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಿದರು.ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಪಿ. ನಾಗರಾಜ್ ಪ್ರಶಸ್ತಿ ಪ್ರದಾನ ಮಾಡಿದರು. ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಸಾಹಿತ್ಯಿಕ ರಸರಂಜನೆ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಸಾಹಿತ್ಯ ಪರಿಷತ್ತಿನ ಮಹಿಳಾ ಕಾರ್ಯದರ್ಶಿ ಶ್ರೀಮತಿ ಎಸ್.ಎಂ. ಮಲ್ಲಮ್ಮ ಪ್ರಾಸ್ತಾವಿಕ ಮಾತನಾಡಿದರು.ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ಜಿ.ಕೆ.ದಿನೇಶ್, ತಾಲೂಕು ಕ.ಸಾ.ಪ. ನಿರ್ದೇಶಕ ಎಂ.ಷಡಾಕ್ಷರಪ್ಪ ಎಲೆ ಬೇತೂರು, ಶಾಲಾ ಮುಖ್ಯೋಪಾಧ್ಯಾಯ ಸಂತೋಷ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ