ಸಾಲ ಮೇಳ : 21 ಕೋಟಿ ರೂ. ಸಾಲ ನೀಡುವ ಗುರಿ.!

ದಾವಣಗೆರೆ:

    ಮೂರು ದಿನಗಳ ಮೇಳದಲ್ಲಿ 1,400 ಜನರಿಗೆ, 21 ಕೋಟಿ ರೂ. ಮೊತ್ತ ಸಾಲ ಮಂಜೂರು ಮಾಡುವ ಗುರಿ ಇದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.

    ನಗರದ ತೋಗಟವೀರ ಸಮುದಾಯ ಭವನದಲ್ಲಿ ಮೂರು ದಿನಗಳ ಕಾಲ ಕೆನರಾ ಬ್ಯಾಂಕ್, ಲೀಡ್ ಬ್ಯಾಂಕ್ ಕಚೇರಿ ವತಿಯಿಂದ ಗ್ರಾಹಕರೆಡೆಗೆ ಒಂದು ಹೆಜ್ಜೆ… ಘೋಷಣೆಯೊಂದಿಗೆ ಏರ್ಪಡಿಸಿದ್ದ ಗ್ರಾಹಕರ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ಹತ್ತು ವರ್ಷಗಳಲ್ಲಿ ಹಣಕಾಸು ಸೇರ್ಪಡೆ ಹೆಚ್ಚಾಗಿರುವುದಲ್ಲದೇ, ಹಣಕಾಸು ಸಾಕ್ಷರತೆಯಲ್ಲೂ ಪ್ರಗತಿ ಆಗಿರುವುದು ಉತ್ತಮವಾದ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಅಧ್ಯಕ್ಷತೆ ವಹಿಸಿದ್ದ ಕೆನರಾ ಬ್ಯಾಂಕ್‍ನ ಬೆಂಗಳೂರು ವೃತ್ತ ಕಚೇರಿಯ ಮಹಾ ಪ್ರಬಂಧಕ ಎನ್. ಲಕ್ಷ್ಮೀನಾರಾಯಣ ಮಾತನಾಡಿ, ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕ್‍ಗಳ ಪಾತ್ರ ಮಹತ್ವದ್ದಾಗಿದೆ. ಬ್ಯಾಂಕುಗಳು ಸಾಲ ನೀಡಲು 20ರಿಂದ 30 ರೀತಿಯ ಯೋಜನೆಗಳನ್ನು ಹೊಂದಿವೆ. ಇವುಗಳ ಕುರಿತು ಹಾಗೂ ಸಾಲಸೌಲಭ್ಯ ಪಡೆಯಲು ಸಲ್ಲಿಸಬಹುದಾದ ದಾಖಲೆಗಳ ಕುರಿತು ಮಾಹಿತಿ ಪಡೆಯಲು ಈ ಮೇಳ ಸಹಕಾರಿಯಾಗಿದೆ ಎಂದರು.

    ಬ್ಯಾಂಕುಗಳ ಹಲವು ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಇಲ್ಲ. ಮುದ್ರಾ ರೀತಿಯ ಯೋಜನೆಗಳು ಜನರಿಗೆ ಉಪಯುಕ್ತವಾಗಿವೆ. ಬ್ಯಾಂಕುಗಳು ಸಾಲ ನಿರ್ಧಾರಕ್ಕೆ ಬಳಸುವ ಸಿಬಿಲ್ ಸ್ಕೋರ್ ಅನ್ನು ಸಹ ಮೇಳದಲ್ಲಿ ತಿಳಿಯಬಹುದಾಗಿದೆ. ಅಲ್ಲದೇ, ಮೇಳಕ್ಕೆ ಬರುವ ಗ್ರಾಹಕರು ಕೇವಲ 10ರಿಂದ 15 ನಿಮಿಷಗಳಲ್ಲಿ ತಮಗೆ ಅಗತ್ಯವಾದ ಎಲ್ಲ ಮಾಹಿತಿ ಪಡೆಯಬಹುದು. ಈ ಮಾಹಿತಿ ಆಧರಿಸಿ ಬ್ಯಾಂಕುಗಳ ಸೇವೆಗಳ ಗರಿಷ್ಠ ಪ್ರಯೋಜನವನ್ನು ಪಡೆಯಬೇಕೆಂದು ಸಲಹೆ ನೀಡಿದರು.

    ಕೆನರಾ ಬ್ಯಾಂಕ್ ಕ್ಷೇತ್ರೀಯ ಕಚೇರಿಯ ಸಹಾಯಕ ಮಹಾಪ್ರಬಂಧಕ ರಘುರಾಜ್ ಮಾತನಾಡಿ, ಬ್ಯಾಂಕುಗಳು ಅಗತ್ಯ ಹಾಗೂ ಅರ್ಹತೆಗೆ ಅನುಗುಣವಾಗಿ ಸಾಲ ನೀಡಲು ಉತ್ಸುಕವಾಗಿವೆ. ಮುದ್ರ, ಸ್ಟಾಂಡ್‍ಅಪ್ ಯೋಜನೆಗಳು, ರೈತರಿಗೆ ಕಿಸಾನ್ ಕ್ರೆಡಿಟ್ ಯೋಜನೆ, ಗೃಹ, ವಾಹನ, ಶಿಕ್ಷಣ ಸಾಲವನ್ನು ಶೀಘ್ರ ಕೊಡಲು ಸಿದ್ಧವಾಗಿವೆ. ಈ ಸಾಲವನ್ನು ಅಭಿವೃದ್ಧಿಗೆ ಹಾಗೂ ಉದ್ಯೋಗ ಸೃಷ್ಟಿಗೆ ಬಳಸುವುದರಿಂದ ದೇಶದ ಅಬಿವೃದ್ಧಿಯಾಗಲಿದೆ. ಮೊದಲ ಸುತ್ತಿನ ಗ್ರಾಹಕ ಮೇಳಕ್ಕೆ ದಾವಣಗೆರೆ ಜಿಲ್ಲೆ ಆಯ್ಕೆಯಾಗಿದ್ದು, ಜಿಲ್ಲೆಯಲ್ಲಿ ಗ್ರಾಹಕರಿಂದ ಸಕಾರಾತ್ಮ ಸ್ಪಂದನೆಯೂ ದೊರೆಯುತ್ತಿದೆ ಎಂದರು.

    ನಬಾರ್ಡ್ ಜಿಲ್ಲಾ ಮುಖ್ಯ ವ್ಯವಸ್ಥಾಪಕ ವಿ.ರವೀಂದ್ರ ಮಾತನಾಡಿ, ಗೋದಾಮು, ಡೈರಿ, ಪಶು ಸಂಗೋಪನೆ, ಕೋಳಿ ಸಾಕಾಣಿಕೆ ಸೇರಿದಂತೆ ಹಲವಾರು ಉದ್ದೇಶಗಳಿಗೆ ಸಾಲ ನೀಡಲಾಗುತ್ತಿದೆ. ಡೈರಿಗಳಿಗೆ ನೀಡುವ ಸಾಲದಲ್ಲಿ ಸಾಮಾನ್ಯ ವರ್ಗಕ್ಕೆ ಶೇ.25 ರಷ್ಟು ಹಾಗೂ ಪರಿಶಿಷ್ಟರಿಗೆ ಶೇ.33 ರಷ್ಟು ಸಹಾಯಧನ (ಸಬ್ಸಿಡಿ) ದೊರೆಯಲಿದೆ. ಕುರಿ-ಮೇಕೆಗಳಿಗೆ ಶೇ.25 ಸಬ್ಸಿಡಿ ಇದೆ. ಗೋದಾಮು ನಿರ್ಮಾಣಕ್ಕೆ ನೀಡುವ 3 ಕೋಟಿ ರೂ. ಸಾಲಕ್ಕೆ ಪರಿಶಿಷ್ಟರು ಹಾಗೂ ಮಹಿಳೆಯರು 1 ಕೋಟಿ ರೂ.ಗಳವರೆಗೆ ಸಬ್ಸಿಡಿ ಪಡೆಯಬಹುದಾಗಿದೆ. ಮೊಲ ಸಾಕಣೆಗೆ 2.5 ಲಕ್ಷ ರೂ. ಸಾಲ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಕಾರ್ಯಕ್ರಮದಲ್ಲಿ ಎಸ್.ಬಿ.ಐ ರೀಜನಲ್ ಮ್ಯಾನೇಜರ್ ರಾಜೇಶ್.ಡಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ರೀಜನಲ್ ಮ್ಯಾನೇಜರ್ ಶಂಕರ್ ಕನವಳ್ಳಿ, ಸಿಂಡಿಕೇಟ್ ಬ್ಯಾಂಕ್ ರೀಜನಲ್ ಮ್ಯಾನೇಜರ್ ನವೀನ್‍ಕುಮಾರ್.ಎನ್, ಜಿಲ್ಲಾ ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಸುಶೃತ ಡಿ. ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link