ಕನ್ನಡದ ಅಭಿವೃದ್ಧಿಗಾಗಿ ಸ್ಥಾಪಿತವಾದ ಎಲ್ಲಾ ಕೇಂದ್ರಗಳು ಸಾಹಿತಿಗಳಿಗೆ ಪುನರ್ವಸತಿ ಕೇಂದ್ರಗಳಾಗಿ ಮಾರ್ಪಟ್ಟಿದೆ:ಕೃಷ್ಣಮೂರ್ತಿ ಬಿಳಿಗೆರೆ

ಹುಳಿಯಾರು:

          ಕನ್ನಡದ ಓದು ಕನ್ನಡದ ಧ್ಯಾನ.ಆದರಿಂದು ಯುವ ಸಮುದಾಯ ದೃಶ್ಯ ಮಾಧ್ಯಮಗಳಲ್ಲಿ,ಸಾಮಾಜಿಕ ಜಾಲತಾಣಗಳಲ್ಲೇ ಮುಳುಗೇಳುತ್ತಿರುವುದರಿಂದ ಓದು ಸಂಪೂರ್ಣವಾಗಿ ನಾಶವಾಗುತ್ತಿದೆ.ಪತ್ರಿಕೆಗಳು ಸಂಪೂರ್ಣವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ.ಅಧ್ಯಾಪಕರು,ಅಕ್ಷರ ಬಲ್ಲವರು ಇದಕ್ಕಾಗಿ ಆಂದೋಲನ ರೂಪಿಸಬೇಕಿದೆ.ಮಕ್ಕಳಿಗೆ ಓದಿನ ರುಚಿ ಹರಿಸಬೇಕಿದೆ ಎಂದು ಕವಿ ಹಾಗೂ ಕಥೆಗಾರ ಕೃಷ್ಣಮೂರ್ತಿ ಬಿಳಿಗೆರೆ ಎಚ್ಚರಿಸಿದರು.

         ಹುಳಿಯಾರು ಪತ್ರಕರ್ತರು ಮತ್ತು ಕನ್ನಡಪರ ಸಂಘಟನೆಯಿಂದ ಹುಳಿಯಾರು ಪಟ್ಟಣದ ಬಸ್ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಪತ್ರಿಕೆಗಳ ಉಚಿತ ವಿತರಣೆ ಕಾರ್ಯಕ್ರಮಕ್ಕೆ ಚಾಲನೆನೀಡಿ ಅವರು ಮಾತನಾಡಿದರು.

         ರಾಜ್ಯೋತ್ಸವದ ಶುಭಾಶಯ ವಿನಿಮಯ ಮಾಡಿಕೊಳ್ಳುವ ಕಾಲ ಇದಲ್ಲ ಎಂದ ಅವರು ಕನ್ನಡ ಬಡವಾಗಬಾರದು.ಕನ್ನಡ ಶಾಲೆಗಳ ಸಾವು ಕನ್ನಡದ ಸಾವು.23 ಸಾವಿರ ಶಾಲೆಗಳು ಮುಚ್ಚಿ ಹೋಗಿದ್ದರೂ ಕನ್ನಡ ವಿಶ್ವವಿದ್ಯಾಲಯ ಮೌನವಾಗಿದೆ.ಕನ್ನಡ ಪುಸ್ತಕ ಪ್ರಾಧಿಕಾರ,ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದಕ್ಕಾಗಿ ಯಾವ ಕಾರ್ಯಕ್ರಮವನ್ನು ರೂಪಿಸಿಲ್ಲ.ಕನ್ನಡವನ್ನು ಎತ್ತಿ ಹಿಡಿಯಲು ಸ್ಥಾಪಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಶಾಲೆಯ ಉಳಿವಿಗಾಗಿ ಯಾವ ಸ್ಪಷ್ಟವಾದ ಕಾರ್ಯಕ್ರಮವನ್ನು ಹಾಕಿಕೊಂಡಿಲ್ಲ.

       ಇಂತಹ ಸಂದರ್ಭದಲ್ಲಿ ಅನಗತ್ಯವಾಗಿರುವ,ಸತ್ತ ಸ್ಥಿತಿಯಲ್ಲಿರುವ,ಕನ್ನಡ ಕಾಪಾಡುತ್ತೇವೆ ಎಂದು ಸ್ಥಾಪಿತವಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಕನ್ನಡ ಪುಸ್ತಕ ಪ್ರಾಧಿಕಾರ,ಕನ್ನಡ ವಿಶ್ವ ವಿದ್ಯಾಲಯ ಹಂಪಿ, ಲಲಿತ ಕಲಾ ಅಕಾಡೆಮಿ,ಎಲ್ಲಾ ವಿಶ್ವವಿದ್ಯಾಲಯಗಳಲ್ಲಿರುವ ಕನ್ನಡ ಅಧ್ಯಯನ ಕೇಂದ್ರಗಳು ಸೇರಿದಂತೆ ಇವೆಲ್ಲವನ್ನೂ ಮುಚ್ಚಿ ಹೊಸ ಕಾರ್ಯಕ್ರಮವನ್ನು ಹಾಕಿಕೊಂಡಲ್ಲಿ ಕನ್ನಡ ಅಭಿವೃದ್ಧಿ ಸಾಧ್ಯವಾಗಬಹುದೇನೋ ಎಂದು ಕಟುನುಡಿಗಳಾಡಿದರು.

      ಸರ್ಕಾರದಿಂದ ಕನ್ನಡ ಅಭಿವೃದ್ಧಿಗೆ ಸ್ಥಾಪಿತವಾಗಿರುವ ಎಲ್ಲ ಕೇಂದ್ರಗಳು ಸಾಹಿತಿಗಳಿಗೆ ಪುನರ್ವಸತಿ ಕೇಂದ್ರಗಳಾಗಿ ಮಾರ್ಪಟ್ಟಿವೆ.ಒಬ್ಬ ಕವಿಯಾಗಿ ಇದನ್ನು ಹೇಳುತ್ತಿರುವುದು ಬೇಸರವಾಗುತ್ತಿದೆ ಎಂದ ಅವರು ಕನ್ನಡದ ಅಭಿವೃದ್ಧಿಗಾಗಿ ಹೊಸದಾಗಿ ಯೋಚನೆ ಶುರು ಮಾಡಬೇಕಿದೆ.ಸ್ಪಷ್ಟವಾದ ರಾಜಕೀಯ ನಿರ್ಧಾರಗಳಿಂದ ಹಾಗೂ ಕಟುವಾದ ನಿರ್ಧಾರ ತೆಗೆದುಕೊಂಡಾಗ ಮಾತ್ರ ಕರ್ನಾಟಕದಲ್ಲಿ ಕನ್ನಡ ಈಗಿರುವಷ್ಟು ಉಳಿಯುತ್ತದೆ.ಇಲ್ಲವೆಂದಲ್ಲಿ ಕನ್ನಡ ಅವಸಾನವಾಗುತ್ತದೆ ಎಂದರು.

       ಇಂದು ನಿಜವಾಗಿಯೂ ಕನ್ನಡ ಶಾಲೆಗಳು ಮುಚ್ಚಲ್ಪಡುತ್ತಿದ್ದು ಕನ್ನಡದ ಸರ್ಕಾರಿ ಆಸ್ಪತ್ರೆಗಳು ಸತ್ತಂತಿವೆ.ಸರ್ಕಾರಿ ಕಚೇರಿಗಳು ಲಂಚ ಭ್ರಷ್ಟಾಚಾರದಲ್ಲಿ ತುಂಬಿ ತುಳುಕುತ್ತಿದೆ.ಇದರ ಕಡೆ ಗಮನ ಹರಿಸದೆ ಸುಮ್ಮನೆ ಕನ್ನಡಾಭಿಮಾನ,ಕನ್ನಡ ಬಾವುಟ, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಎಂದು ಕೊಡಲ್ಪಡುತ್ತಿರುವುದರಿಂದ ಮೂರು ಕಾಸಿನ ಪ್ರಯೋಜನ ಇಲ್ಲ ಎಂದರು.

       ಸಮುದಾಯಕ್ಕೆ ಅನುಕೂಲವಾಗಬೇಕಾದರೆ ರಾಜಕೀಯ ನಿರ್ಧಾರಗಳು ಸ್ಪಷ್ಟವಾಗಬೇಕಿದೆ.ರೈತರಿಗೆ,ವ್ಯಾಪಾರಿಗಳಿಗೆ,ಕಾರ್ಮಿಕರಿಗೆ ಬೇಕಾದ ಅನುಕೂಲಗಳು ಕಲ್ಪಿಸಬೇಕಿದೆ.ಎಲ್ಲಿ ಕನ್ನಡ ಸಾಯುತ್ತಿದೆಯೋ ಅಲ್ಲಿ ರಾಜ್ಯೋತ್ಸವ ಆರ್ಭಟ ಜೋರಾಗಿದೆ.ಇದಕ್ಕೆ ಬೆಂಗಳೂರು ಪಟ್ಟಣವೇ ಸ್ಪಷ್ಟ ಉದಾಹರಣೆಯಾಗಿದ್ದು ಇದು ನಾಚಿಕೆಗೇಡಿನ ವಿಚಾರ.ಇದಕ್ಕೆ ಸ್ಪಷ್ಟ ಆರ್ಥಿಕ ನಿಲುವು ,ರಾಜಕೀಯ ನಿರ್ಧಾರ ತೆಗೆದುಕೊಳ್ಳಬೇಕಿದೆ.ಅಲ್ಲದೆ ಇಂಗ್ಲಿಷ್ ಸ್ಥಾನ ಏನೆಂದು ಸ್ಪಷ್ಟವಾಗಿ ಹೇಳಬೇಕಿದೆ.ಕನ್ನಡದ ಉಳಿವಿಗಾಗಿ ಕಾರ್ಯಕ್ರಮ ರೂಪಿಸಬೇಕಿದೆ.ಕೇವಲ ಆಚರಣೆಯಿಂದ ಒಂದು ಮೂರು ಕಾಸಿನ ಪ್ರಯೋಜನವೂ ಇಲ್ಲ ಎಂದರು
.
       ಈ ಸಂದರ್ಭದಲ್ಲಿ ಹುಳಿಯಾರು ಪತ್ರಿಕಾ ವಿತರಕರು,ವರದಿಗಾರರು ಸೇರಿದಂತೆ ಜಯ ಕರ್ನಾಟಕ ಸಂಘಟನೆಯ ಮೋಹನ್ ಕುಮಾರ್,ಸಿ.ವಿ.ನಾಗರಾಜು,ಚಿರುಮುರಿ ಶ್ರೀನಿವಾಸ್,ಭಟ್ಟರಹಳ್ಳಿ ರಾಮಚಂದ್ರಯ್ಯ,ಉಮೇಶ್,ಚಿತ್ರ ನಿರ್ಮಾಪಕ ನಂದಿಹಳ್ಳಿ ಶಿವಣ್ಣ ,ಪಂ ಸದಸ್ಯ ಸುರೇಶ್ ಮೊದಲಾದವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link