ಕಸವನ್ನು ಮೂಲದಲ್ಲಿಯೇ ಬೇರ್ಪಡಿಸಿ ವಿಲೇವಾರಿ ಮಾಡುವ ಬಗ್ಗೆ ಅರಿವು ಮೂಡಿಸಿ : ಲಲಿತಾ ರವೀಶ್

ತುಮಕೂರು

     ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಮೂಲದಲ್ಲಿಯೇ ಬೇರ್ಪಡಿಸಿ ಹೇಗೆ ವಿಲೇವಾರಿ ಮಾಡಬೇಕೆನ್ನುವ ಬಗ್ಗೆ ತಮ್ಮ ವಾರ್ಡಿನ ವ್ಯಾಪ್ತಿಯ ನಾಗರಿಕರಲ್ಲಿ ಅರಿವು ಮೂಡಿಸಬೇಕೆಂದು ಮೇಯರ್ ಲಲಿತಾ ರವೀಶ್ ಪಾಲಿಕೆ ಸದಸ್ಯರಿಗೆ ಸಲಹೆ ನೀಡಿದರು.

      ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಮೈಸೂರಿನ ಭಗೀರಥ ಸಂಸ್ಥೆಯ ಸಹಯೋಗದಲ್ಲಿ ಪಾಲಿಕೆಯ ಚುನಾಯಿತ ಪ್ರತಿನಿಧಿಗಳಿಗಾಗಿ ಪಾಲಿಕೆ ಸಭಾಂಗಣದಲ್ಲಿಂದು ಏರ್ಪಡಿಸಿದ್ದ ಘನತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಗರಿಕರು ತಮ್ಮ ಮನೆಯ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ ಮತ್ತು ಒಣ ತ್ಯಾಜ್ಯವನ್ನಾಗಿ ಬೇರ್ಪಡಿಸಿ ಪಾಲಿಕೆಯ ಕಸ ಸಂಗ್ರಹಿಸುವ ವಾಹನಗಳಿಗೆ ನೀಡುವುದರಿಂದ ನಗರವನ್ನು ಸ್ವಚ್ಛವಾಗಿಡಬಹುದು.

     ನಗರವನ್ನು ಕಸಮುಕ್ತ ಹಾಗೂ ಸ್ವಚ್ಛ ತುಮಕೂರನ್ನಾಗಿ ನಿರ್ಮಾಣ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ತುಮಕೂರನ್ನು ಸ್ವಚ್ಛ ನಗರವನ್ನಾಗಿಸುವಲ್ಲಿ ಕೈಜೋಡಿಸಲು ಭಗೀರಥ ಸಂಸ್ಥೆಯು ಮುಂದೆ ಬಂದಿದ್ದು, ನಾಗರಿಕರು ಸೇರಿದಂತೆ ಪಾಲಿಕೆ ಜನಪ್ರತಿನಿಧಿಗಳು ಸಂಸ್ಥೆಯ ಸೇವೆಯನ್ನು ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು.ಉಪ ಮೇಯರ್ ಬಿ.ಎಸ್. ರೂಪಶ್ರೀ ಮಾತನಾಡಿ ನಗರವನ್ನು ಸ್ವಚ್ಛ, ಸುಂದರ, ಆರೋಗ್ಯಕರವನ್ನಾಗಿಸಲು ಅಧಿಕಾರಿಗಳೊಂದಿಗೆ ನಾಗರಿಕರೆಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು.

      ಪಾಲಿಕೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಸ್ ಮಾತನಾಡಿ ಪ್ರತೀ ವಾರ್ಡ್‍ಗಳಲ್ಲಿ ಬೀದಿ ನಾಟಕಗಳ ಮೂಲಕ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುವುದು. ನಗರವನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ತಾಜ್ಯ ನಿರ್ವಹಣೆಯು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಎಂದು ನುಣುಚಿಕೊಳ್ಳದೆ ಭಗೀರಥ ಸಂಸ್ಥೆಯೊಂದಿಗೆ ಎಲ್ಲರೂ ಸಹಕರಿಸೋಣ ಎಂದು ತಿಳಿಸಿದರು.

     ಪಾಲಿಕೆ ಆಯುಕ್ತ ಭೂಬಾಲನ್ ಮಾತನಾಡಿ “ನನ್ನ ಕಸ-ನನ್ನ ಜವಾಬ್ದಾರಿ” ಎಂಬ ಧ್ಯೇಯವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರಲ್ಲದೆ ತಾಜ್ಯ ನಿರ್ವಹಣೆಯಲ್ಲಿ ಪಾಲಿಕೆ ಸದಸ್ಯರು ವಹಿಸಬೇಕಾದ ಪಾತ್ರ ಹಾಗೂ ಅವರ ಜವಾಬ್ದಾರಿಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

      ಸ್ಮಾರ್ಟ್ ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಜಯ್ ವಿಠ್ಠಲ್ ಮಾತನಾಡಿ ತುಮಕೂರು ನಗರವು ಸುಮಾರು 3.50ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, 88ಸಾವಿರ ಕುಟುಂಬಗಳು ವಾಸಿಸುತ್ತಿವೆ. ನಗರವ್ಯಾಪ್ತಿಯ ತ್ಯಾಜ್ಯ ನಿರ್ವಹಣೆಗಾಗಿ ಮಾಹೆಯಾನ ಸುಮಾರು 2 ಕೋಟಿ ರೂ.ಗಳು ಖರ್ಚಾಗುತ್ತಿದ್ದು, ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿದಲ್ಲಿ ಪಾಲಿಕೆಯ ಆರ್ಥಿಕ ಹೊರೆಯನ್ನು ತಗ್ಗಿಸಬಹುದೆಂದರು.

      ಭಗೀರಥ ಸಂಸ್ಥೆಯ ಅಧ್ಯಕ್ಷ ಡಾ|| ಪಿ.ಎಂ. ಕುಲಕರ್ಣಿ ಮಾತನಾಡಿ ತುಮಕೂರನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ನಗರವನ್ನಾಗಿ ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ. ನಾಗರಿಕರು ಸಾಧ್ಯವಾದಷ್ಟು ಕಸ ಉತ್ಪತ್ತಿಯನ್ನು ಕಡಿಮೆ ಮಾಡಬೇಕು. ಪ್ಲಾಸ್ಟಿಕ್ ಕ್ಯಾರಿಬ್ಯಾಗ್‍ಗಳನ್ನು ತ್ಯಜಿಸಿ ಪರಿಸರಸ್ನೇಹಿ ಬಟ್ಟೆ/ಕಾಗದಬ್ಯಾಗ್‍ಗಳನ್ನು ಬಳಸಬೇಕು. ಶೌಚಾಲಯವಿಲ್ಲದವರು ಸಮುದಾಯ/ಸಾರ್ವಜನಿಕ ಶೌಚಾಲಯವನ್ನು ಬಳಸಬೇಕೆಂದು ತಿಳಿಸಿದರಲ್ಲದೆ ರಸ್ತೆ, ಖಾಲಿ ನಿವೇಶನ ಮತ್ತು ಚರಂಡಿಗಳಿಗೆ ಕಸ ಹಾಕಬಾರದು. ಬಯಲು ಮಲ-ಮೂತ್ರ ವಿಸರ್ಜನೆ ಮಾಡಬಾರದು.

     ನೀರಿನ ಮೂಲಗಳನ್ನು ಕಲುಷಿತಗೊಳಿಸಬಾರದೆಂದು ಕಿವಿಮಾತು ಹೇಳಿದರು. ಮಹಿಳೆಯರು ತಮ್ಮ ಅಡಿಗೆ ಮನೆ ಮಸಾಲೆ ಡಬ್ಬಿಯಲ್ಲಿ ವಿವಿಧ ಮಸಾಲೆ ಪದಾರ್ಥಗಳನ್ನು ಪ್ರತ್ಯೇಕವಾಗಿಟ್ಟಿರುವಂತೆ, ಕಚೇರಿಯಲ್ಲಿ ವಿಷಯವಾರು ಕಡತ ನಿರ್ವಹಣೆ ಮಾಡಿರುವ ಹಾಗೂ ಕಪಾಟಿನಲ್ಲಿ ಬಟ್ಟೆಗಳನ್ನು ಜೋಡಿಸಿಡುವ ರೀತಿಯಲ್ಲಿ ಕಸವನ್ನು ಒಣ ಕಸ, ಹಸಿ ಕಸ, ಹಾನಿಕಾರಕ ಕಸವನ್ನಾಗಿ ಬೇರ್ಪಡಿಸಬೇಕು ಎಂದು ಸಲಹೆ ನೀಡಿದರು.

      ನಾಗರಿಕರು ತ್ಯಾಜ್ಯ ನಿರ್ವಹಣೆಯಲ್ಲಿ ಬೇಯಿಸಿದ/ಹಸಿ ಆಹಾರ, ಹಣ್ಣು-ತರಕಾರಿ ಮತ್ತು ಹೂವಿನ ತ್ಯಾಜ್ಯ, ಒಣ ಎಲೆ, ಮತ್ತಿತರ ಕೊಳೆಯುವ ಪದಾರ್ಥಗಳು ಹಸಿ ಕಸವನ್ನಾಗಿ ಹಾಗೂ ಪೇಪರ್/ಪ್ಲಾಸ್ಟಿಕ್/ ಕಟ್ಟಿಗೆ/ಲೋಹ/ಬಟ್ಟೆ/ಗಾಜು/ರಬ್ಬರ್/ವೈರ್/ಹಳೆ ಟ್ಯೂಬ್‍ಲೈಟ್/ಬಲ್ಬು/ಕಾರ್ಡ್ ಬೋರ್ಡ್/ಥರ್ಮೋಕೋಲ್ ಮತ್ತಿತರ ಕೊಳೆಯದ ಪದಾರ್ಥಗಳನ್ನು ಒಣ ಕಸವನ್ನಾಗಿ ವಿಂಗಡಿಸಿ ವಿಲೇವಾರಿ ಮಾಡಬೇಕು. ಯಾವುದೇ ಕಾರಣಕ್ಕೂ ಕಸವನ್ನು ಸುಡಬಾರದು. ಇದರಿಂದ ವಾಯುಮಾಲಿನ್ಯ ಉಂಟಾಗಿ ಚರ್ಮ ಖಾಯಲೆ, ಅಸ್ತಮಾ, ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಅಲ್ಲದೆ ಮಣ್ಣಿನಲ್ಲಿ ವಿಷಯುಕ್ತ ಅಂಶ ಬೆರೆತು ಫಲವತ್ತತೆ ನಾಶವಾಗುತ್ತದೆ. ಇದರಿಂದ ಮರಗಿಡಗಳ ಬೆಳವಣಿಗೆ ತೊಂದರೆಯಾಗಿ ಪರಿಸರ ಹಾಳಾಗುತ್ತದೆ ಎಂದು ತಿಳಿಸಿದರು.

       ಜೈವಿಕ ತ್ಯಾಜ್ಯದಿಂದ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಲೈಲಾ ಗ್ರಾಮವು ತನ್ನಲ್ಲಿ ಉತ್ಪತ್ತಿಯಾಗುವ ತಾಜ್ಯದಿಂದ ಪ್ರತಿದಿನ 1 ಟನ್ ಗೊಬ್ಬರವನ್ನು ತಯಾರಿಸಿ ಪ್ರತಿ ಕೆ.ಜಿ 8 ರೂ.ನಂತೆ ಮಾರಾಟ ಮಾಡಿ ಯಶಸ್ವಿಯಾಗಿ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಉದಾಹರಣೆ ನೀಡುತ್ತಾ ಮನೆಯಲ್ಲಿ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯದಿಂದ ಸುಲಭವಾಗಿ ಗೊಬ್ಬರವನ್ನು ತಯಾರಿಸಬಹುದು ಎಂದು ಸಲಹೆ ನೀಡಿದರು.

       ಭಗೀರಥ ಸಂಸ್ಥೆಯ ಕಾರ್ಯನಿರ್ವಹಣಾ ನಿರ್ದೇಶಕ ಕೆ.ಎ. ಚಂಗಪ್ಪ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸದಸ್ಯರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರಣೆ ನೀಡಿದರು.

       ಈ ಸಂದರ್ಭದಲ್ಲಿ ಘನ ತಾಜ್ಯ ವಿಲೇವಾರಿ ಕುರಿತಂತೆ ಕರಪತ್ರ ಹಾಗೂ ಸ್ಟಿಕ್ಕರ್‍ಗಳನ್ನು ಬಿಡುಗಡೆ ಮಾಡಲಾಯಿತು. ನಂತರ ಸ್ಥಳೀಯ ರೈತ ರಾಮಮೂರ್ತಿ ಅವರು ತ್ಯಾಜ್ಯದಿಂದ ತಮ್ಮ ಹೊಲದಲ್ಲಿ ಗೊಬ್ಬರ ತಯಾರಿಸಿ ಯಶಸ್ವಿ ಕಂಡಿರುವ ಬಗ್ಗೆ ಹಾಗೂ ಗೊಬ್ಬರ ತಯಾರಿಕಾ ವಿಧಾನವನ್ನು ತಿಳಿಸಿಕೊಟ್ಟರು.

      ಕಾರ್ಯಕ್ರಮದಲ್ಲಿ ವಿವಿಧ ವಾರ್ಡುಗಳ ಪಾಲಿಕೆ ಸದಸ್ಯರು, ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಸಾರ್ವಜನಿಕ ಮಾಹಿತಿ ಅಧಿಕಾರಿ ಪಿ.ವಿ. ವರಪ್ರಸಾದರಾವ್, ಪರಿಸರ ಅಭಿಯಂತರರಾದ ರಶ್ಮಿ ಹಾಗೂ ಕೆ.ಎಸ್. ಮೃತ್ಯುಂಜಯ, ರವಿವರ್ಮ, ಪಾಲಿಕೆ ಆರೋಗ್ಯಾಧಿಕಾರಿ ಡಾ|| ಟಿ. ನಾಗೇಶ್‍ಕುಮಾರ್, ಐ.ಬಿ. ನಿಖಿತ, ಮತ್ತಿತರರು ಹಾಜರಿದ್ದರು. ಕಾರ್ಯಕ್ರಮ ಸಂಯೋಜಕ ವೀರಣ್ಣಗೌಡ ಸ್ವಾಗತಿಸಿದರು. ಕಾಳಪ್ಪ ಸೊಸನೆ ನಿರೂಪಿಸಿದರು.ಇದಕ್ಕೂ ಮುನ್ನ ಎಲ್ಲ ವಾರ್ಡುಗಳಲ್ಲಿ ಮಧುಮೇಹ ತಪಾಸಣಾ ಶಿಬಿರ ಏರ್ಪಡಿಸುವ ಬಗ್ಗೆ ಡಾ|| ರಾಜಶೇಖರ್, ಟಿಹೆಚ್‍ಎಸ್ ಲ್ಯಾಬ್‍ನ ಪ್ರತಿನಿಧಿ, ರೋಟರಿ ಕ್ಲಬ್ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಯಿತು.

 

Recent Articles

spot_img

Related Stories

Share via
Copy link