ಚಿತ್ರದುರ್ಗ :
ಯಾವ ವೃತ್ತಿಯೂ ಕೀಳಲ್ಲವೆಂದು ಕಾಯಕ ನಿಷ್ಠೆಯ ಮಹತ್ವ ಸಾರಿದವರು ಶಿವಶರಣ ಹಡಪದ ಅಪ್ಪಣ್ಣ ಅವರು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ.ಎಂ. ವಿಶಾಲಾಕ್ಷಿ ನಟರಾಜ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವರ ಸಹಯೋಗದೊಂದಿಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ವೃತ್ತಿ ಕೀಳಲ್ಲ, ಎಲ್ಲ ವೃತ್ತಿಗೂ ತನ್ನದೇ ಆದ ಘನತೆ, ಬೆಲೆ ಇದೆ ಎಂದು ಕಾಯಕ ನಿಷ್ಠೆಯನ್ನು ಸಾರಿದವರು ಶಿವಶರಣ ಹಡಪದ ಅಪ್ಪಣ್ಣನವರು. ಅಂತಹ ಮಹಾ ಶರಣರನ್ನು ಯಾವುದೇ ಒಂದು ಸಮಾಜಕ್ಕೆ ಸೀಮಿತಗೊಳಿಸುವುದು ತರವಲ್ಲ. ಎಲ್ಲಾ ಸಮಾಜದವರಿಗೂ ಅವರ ವಚನಗಳು, ಮಾನವೀಯ ಮೌಲ್ಯಗಳು ಸ್ಪೂರ್ತಿಯಾಗಬೇಕು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪಕ್ಕೆ ಅಪ್ಪಣ್ಣನವರು ಆಧಾರ ಸ್ಥಂಬವಾಗಿದ್ದರು.
ಅನುಭವ ಮಂಟಪದ ಯಶಸ್ಸಿಗೆ ಶ್ರಮಿಸಿದವರು. ಯಾರೂ ಕೂಡ ಯಾವುದೇ ವೃತ್ತಿಯ ಬಗ್ಗೆ ಕೀಳರಿಮೆ ಹೊಂದುವುದು ಬೇಡ. ಸಮಾಜದವರು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಂಘಟಿಗೊಂಡು, ಸದೃಢರಾಗಿ, ಜೀವನದಲ್ಲಿ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಳ್ಳಿ ಎಂದು ವಿಶಾಲಾಕ್ಷಿ ನಟರಾಜ್ ಅವರು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಅವರು ಮಾತನಾಡಿ, ಒಬ್ಬ ನಾಯಕರ ಜಯಂತಿಯನ್ನು ಆಚರಿಸುತ್ತಿದ್ದೇವೆ ಎಂದರೆ, ಆ ಮಹನೀಯರನ್ನು ನಾವು ನೋಡಬೇಕಾದ್ದು ಜಾತಿಯ ದೃಷ್ಟಿ ಕೋನದಿಂದಲ್ಲ, ಬದಲಿಗೆ ಅವರ ಸಾಧನೆ ಹಾಗೂ ಅವರು ಮನುಕುಲಕ್ಕೆ ನೀಡಿದ ಕೊಡುಗೆಯ ದೃಷ್ಟಿಕೋನದಿಂದ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ.
ಮಹನೀಯರ ವಚನಗಳು, ಅವರ ಜೀವನ ಶೈಲಿ, ಮನುಕುಲಕ್ಕೆ ಅವರು ನೀಡಿದ ಕೊಡುಗೆ ಹಾಗೂ ಒಳ್ಳೆಯ ಸಂದೇಶಗಳನ್ನು ಯುವಪೀಳಿಗೆಗೆ ತಿಳಿಸುವ ಸಲುವಾಗಿ ಮಹಾನ್ ನಾಯಕರ ಜಯಂತಿಯನ್ನು ಆಚರಿಸಲಾಗುತ್ತಿದೆ. ಆದರೆ ಮಹನೀಯರ ಜಯಂತಿಗಳು ಕೇವಲ ಸಂಬಂಧಿಸಿದ ಸಮಾಜಕ್ಕೆ ಸೀಮಿತಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇಂತಹ ಮಹನೀಯರ, ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಕಾರ್ಯಕ್ರಮದ ಆಚರಣೆಗೆ ಅರ್ಥ ಬರಲು ಸಾಧ್ಯ ಎಂದರು.
ಸಂತೆಬೆನ್ನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಫೈಜುಲ್ಲಾ ವಿಶೇಷ ಉಪನ್ಯಾಸ ನೀಡಿ, ಅಪ್ಪಣ್ಣನವರು ಸುಮಾರು 370 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದು, ಇವರ ಪತ್ನಿ ಲಿಂಗಮ್ಮ ಕೂಡ ಕಾಯಕದ ಜೊತೆಗೆ ವಚನಗಳ ರಚನೆಯಲ್ಲಿಯೂ ತೊಡಗಿದ್ದರು. ಒಳ್ಳೆಯ ನಡೆ, ನುಡಿ, ಕಾಯಕ್ಕೆ ಬಾಗುವವರೇ ನಿಜವಾದ ಶರಣರು ಎಂಬುದು ಶ್ರೇಷ್ಠ ಸಂತ ಅಪ್ಪಣ್ಣನವರ ನಂಬಿಕೆಯಾಗಿತ್ತು. ಆದರೆ ಪ್ರಸ್ತುತ ಶರಣ ಕಾಯಕವನ್ನೇ ಕಡೆಗಣಿಸಲಾಗುತ್ತಿದೆ.
ನಿಜವಾದ ಶರಣರನ್ನು ಹುಡುಕುವುದೆಂದರೇ ರಾಗಿಯಲ್ಲಿ ಸಾಸಿವೆ ಹುಡುಕಿದಷ್ಟೇ ಕಷ್ಟವಾಗಿದೆ. ಹಡಪ ಎಂದರೇ ತಕ್ಷಣಕ್ಕೆ ಬೇಕಾಗುವ ವಸ್ತುಗಳನ್ನಿಡುವ ಪೆಟ್ಟಿಗೆ. ಹಡಪದ ಅಪ್ಪಣ್ಣ ಬಸವಣ್ಣನವರ ಅನುಭವ ಮಂಟಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಅಲ್ಲಿಗೆ ಬರುವ ಶರಣರ ಹಿತಕಾಯುವ ಕೆಲಸ ಮಾಡಿ ಗೌರವಿಸುತ್ತಿದ್ದರು. ಹಡಪದ ಅಪ್ಪಣ್ಣನವರು ದುಡಿದು ತಿನ್ನುವ ಕಾಯಕಕ್ಕೆ ಮಹತ್ವ ನೀಡಿದ್ದರು. ಇವರು ಬಸವಣ್ಣನವರನ್ನು ಪ್ರತ್ಯಕ್ಷ ದೈವವೆಂದು ಪೂಜಿಸುತ್ತಿದ್ದರು.
ಹಸಿದವರಿಗೆ ಅನ್ನ, ದಣಿದವರಿಗೆ ನೀರು ಕೊಡುವುದೇ ನಿಜವಾದ ಕಾಯಕ. ಬದಲಿಗೆ ಚಿನ್ನ, ಹಣ, ಇನ್ನಿತರೆ ಬೆಲೆಬಾಳುವ ವಸ್ತುಗಳಿಂದ ಹಸಿವನ್ನು ನೀಗಿಸಲಾಗದು ಎಂದು ನಂಬಿದ್ದರು. ಇವರು ಅನ್ಯಾಯ ವಿರುದ್ಧ ಸಿಡಿದೇಳುತ್ತಿದ್ದರು. ಕನ್ನಡದ ಮೂಲ ಬೇರನ್ನು ಗಟ್ಟಿಗೊಳಿಸಿ, ಗುರು, ಲಿಂಗ, ಜಂಗಮವನ್ನು ಪ್ರತಿಪಾದಿಸಿ, ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಮುಂದಾದರು. ಕಾಯಕ ಮಾಡದೇ ಊಟ ಮಾಡಬಾರದೆಂಬ ತತ್ವವನ್ನು ಅಳವಡಿಸಿಕೊಂಡಿದ್ದರು. ಇವರ ಸರಳ ವಚನಗಳಿಂದ ಸಮಾಜವನ್ನು ತಿದ್ದಿತೀಡುವ ಕಾರ್ಯವಾಗುತ್ತಿತ್ತು. ಇಂತಹ ಮಹನೀಯರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜಯಂತಿ ಆಚರಣೆಗೆ ಅರ್ಥ ಸಿಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವಿಜಯ್ ಕುಮಾರ್, ತಹಶೀಲ್ದಾರ್ ಕಾಂತರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ವಿ. ಓಂಕಾರಪ್ಪ, ಕಾರ್ಯದರ್ಶಿ ಚನ್ನಬಸಪ್ಪ ಸೇರಿದಂತೆ ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.