ಕುಣಿಗಲ್
ಅಂಗನವಾಡಿ ನೌಕರರಿಗೆ ಮೂರು ತಿಂಗಳ ಗೌರವ ಧನ ನೀಡಿಲ್ಲ ಹಾಗೂ ಕಾಯಂ ಸಿಡಿಪಿಒ ನೇಮಕ ಮಾಡುವಂತೆ ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷರಾದ ಶಾಂತಕುಮಾರಿ ಒತ್ತಾಯಿಸಿದರು.
ಪಟ್ಟಣದ ಸಿಡಿಪಿಓ ಕಚೇರಿಯ ಮುಂದೆ ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಸದಸ್ಯರು ಶಾಂತಕುಮಾರಿ ನೇತೃತ್ವದಲ್ಲಿ ಪ್ರತಿಭಟಿಸಿ ಮಾತನಾಡುತ್ತಾ, ಅಂಗನವಾಡಿ ನೌಕರರಿಗೆ ಕಳೆದ ಮೂರು ತಿಂಗಳಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ನೌಕರರಿಗೆ ಮೂರು ತಿಂಗಳ ಗೌರವ ಧನ ನೀಡಿಲ್ಲ. ದಿನೇ-ದಿನೇ ನೌಕರರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ, ಜೊತೆಗೆ ತಾಲ್ಲೂಕಿನಲ್ಲಿ ಕಾಯಂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಓ ಇಲ್ಲದೆ ಪ್ರಭಾರರಾಗಿ ಮಹಿಳಾ ಸಂರಕ್ಷಣಾ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದು, ಇವರಿಂದ ಯಾವುದೇ ರೀತಿಯ ನೌಕರರಿಗೆ ಸಹಾಯವಾಗುತ್ತಿಲ್ಲ.
ಮಂಡ್ಯದಲ್ಲಿ ಅಂಗನವಾಡಿ ನೌಕರರಿಗೆ ಮೂರು ತಿಂಗಳ ಗೌರವ ಧನವನ್ನ ಈಗಾಗಲೆ ನೀಡಿರುತ್ತಾರೆ. ಇಲ್ಲಿ ಯಾವುದೆ ಗೌರವ ಧನ ನೀಡದೆ ಇಲ್ಲಸಲ್ಲದ ಸಬೂಬು ಹೇಳಿಕೊಂಡು ಅಧಿಕಾರಿಗಳು ಕಚೇರಿಯ ನೌಕರರು, ಮೇಲ್ವಿಚಾರಕರು, ಚಾಲಕರು ಸೇರಿದಂತೆ ಅಂಗನವಾಡಿ ನೌಕರರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ. ಕಾರ್ಯಕರ್ತರು ನಿವೃತ್ತಿಯಾಗಲಿರುವ ಸ್ಥಳಕ್ಕೆ ಮುಂಚಿತವಾಗಿಯೆ ಅರ್ಜಿ ಕರೆದು ಲೋಪವೆಸಗಿರುತ್ತಾರೆ.
ಅಲ್ಲದೆ ಕಚೇರಿಯಲ್ಲಿ ಶೌಚಾಲಯವಾಗಲಿ, ಕುಳಿತುಕೊಳ್ಳಲು ಅವಕಾಶವಾಗಲಿ ಯಾವುದೂ ಇರುವುದಿಲ್ಲ. ಡಿ ಗ್ರೂಪ್ ನೌಕರರಿದ್ದರೂ ಸಹ ಸ್ವಚ್ಛತೆ ಇಲ್ಲ. ಕುಡಿಯಲು ನೀರಿಗೆ ಪ್ಲಾಸ್ಟಿಕ್ ಲೋಟ ಬಳಕೆ ಮಾಡುತ್ತಾರೆ. ಆದುದರಿಂದ ಅಂಗನವಾಡಿ ಕಚೇರಿಗೆ ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡಕ್ಕೆ ಹಣ ನೀಡಿರುವುದಿಲ್ಲ.
ಜೊತೆಗೆ ಬಟ್ಟೆ ಬಿಲ್ಲನ್ನು ಸಹ ಹಲವಾರು ಕಾರಣದಿಂದ ನೀಡಿರುವುದಿಲ್ಲ ಎಂದು ದೂರಿ, ಈ ಬಗ್ಗೆ ಜಿಲ್ಲಾಧಿಕಾರಿಗಳು, ಸಂಬಂಧಿಸಿದ ಮಂತ್ರಿಗಳು ಕೂಡಲೆ ಇವರ ನೆರವಿಗೆ ಧಾವಿಸಿ ಮೂರು ತಿಂಗಳ ವೇತನ ಬಿಡುಗಡೆ ಮಾಡಿ ಕಾಯಂ ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಧಿಕಾರಿಯನ್ನ ನಿಯೋಜಿಸಬೇಕೆಂದು ಒತ್ತಾಯಿಸಿ ಮಹಿಳಾ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಖಜಾಂಚಿ ಗೀತಾ ಸೇರಿದಂತೆ ಹಲವಾರು ನೌಕರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
