ತುಮಕೂರು
ಈಗಾಗಲೇ ಮರ-ಗಿಡಗಳು ಬೆಳೆದು ಹೂಳು ತುಂಬಿಕೊಂಡು ಬತ್ತಿ ಹೋಗಿರುವ ಜಿಲ್ಲೆಯ ಕೆರೆಗಳ ಅಭಿವೃದ್ಧಿ ಯೋಜನೆಯೊಂದನ್ನು ಕೈಗೊಳ್ಳಲು ಸಿದ್ಧಾರ್ಥ ವಿಶ್ವವಿದ್ಯಾಲಯವು ಮುಂದಾಗಿದೆ ಎಂದು ಸಿದ್ಧಾರ್ಥ ವೈದ್ಯಕೀಯ ಸಂಸ್ಥೆಯ ಡಾ|| ಶೆಟ್ಟಿ ತಿಳಿಸಿದ್ದಾರೆ.
ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಅಧ್ಯಕ್ಷೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗುತ್ತಿದ್ದು, ಪ್ರಥಮ ಹಂತದಲ್ಲಿ ತುಮಕೂರು ತಾಲೂಕಿನ ಹೆಗ್ಗೆರೆ, ಭೀಮಸಂದ್ರ, ಕುಂಕುಮನಹಳ್ಳಿ, ಮಲ್ಲಸಂದ್ರ, ಮೂಕನಳ್ಳಿಪಟ್ಣ, ಬಳ್ಳಾಪುರ, ಅಡಗೂರು, ಕಣೇನಹಳ್ಳಿ ಕೆರೆಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.
ವಿನಾಶದ ಅಂಚಿನಲ್ಲಿರುವ ಕೆರೆಗಳಲ್ಲಿ 10 x 10 x 10 ಅಡಿ ಅಳತೆಯಲ್ಲಿ ಉದ್ದ, ಅಗಲ ಹಾಗೂ ಆಳದ ಹೊಂಡಗಳನ್ನು ನಿರ್ಮಿಸಲಾಗುವುದು. ಇದರಿಂದ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ವೃದ್ಧಿಯಾಗಲಿದೆ. ಅಕ್ಕ-ಪಕ್ಕದ ಕೊಳವೆ ಬಾವಿ ಹಾಗೂ ತೆರೆದ ಬಾವಿಗಳಲ್ಲಿ ನೀರು ತುಂಬಿಕೊಂಡು ಬೇಸಿಗೆ ಕಾಲದಲ್ಲಿ ತಲೆದೋರುವ ನೀರಿನ ಬವಣೆ ತಪ್ಪುತ್ತದೆ.
ಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲ ಕೆರೆಗಳನ್ನು ಇದೇ ರೀತಿ ಅಭಿವೃದ್ಧಿಪಡಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ ಜಿಲ್ಲೆಯ ಕೆರೆಗಳ ಸಂಪೂರ್ಣ ಚಿತ್ರಣ ಬದಲಾಗಲಿದ್ದು, ಸಾರ್ವಜನಿಕರು ಇದರ ಅನ್ವೇಷಣೆ ಮಾಡಬಹುದಲ್ಲದೆ ಇಂದಿನ ಕೆರೆಗಳ ಚಿತ್ರಣ ಹಾಗೂ ಅಭಿವೃದ್ಧಿಯಾದ ಕೆರೆಗಳ ಚಿತ್ರಣದ ವ್ಯತ್ಯಾಸವನ್ನು ಕಾಣಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.