ಕೆರೆಗಳ ಹೂಳು ತೆಗೆದು ಅಂತರ್ಜಲ ಸಂರಕ್ಷಿಸಬೇಕು

ತುಮಕೂರು:

ವರದಿ : ಎಂ.ಎನ್.ರಾಜೇಂದ್ರ ಮಧುಗಿರಿ

     ಸ್ವಾಭಾವಿಕವಾಗಿ ಬರುವ ಮಳೆಯ ನೀರನ್ನು ಸಂಗ್ರಹಿಸುವ ಜೊತೆಗೆ ಹಂತ ಹಂತವಾಗಿ ಮುಂದಿನ ದಿನಗಳಿಗೆ ಬೇಕಾಗುವಷ್ಟು ಹಾಗೂ ಅಂತರ್ಜಲ ಮಟ್ಟ ಹೆಚ್ಚಾಗಲೆಂಬ ದೃಷ್ಟಿಯಿಂದ ನೀರನ್ನು ಕೆರೆಗಳಿಗೆ ಹರಿಸಿಕೊಂಡು ಸಂಗ್ರಹಿಸಿ ಬಳಕೆ ಮಾಡುವುದು ವಾಡಿಕೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕೆರೆಗಳಲ್ಲಿ ಹೂಳು ತೆಗೆಯದೆ, ಕೆರೆಯಗಳನ್ನು ಅಭಿವೃದ್ಧಿ ಪಡಿಸದಿರುವುದು ವಿಪರ್ಯಾಸ.

     ಏರುತ್ತಿರುವ ಇಂದಿನ ಜಾಗತಿಕ ತಾಪಮಾನ ಹಾಗೂ ಮಳೆಯ ಅಭಾವದಿಂದಾಗಿ ಕೆರೆಗಳು ಸಂಪೂರ್ಣ ಖಾಲಿ ಖಾಲಿಯಾಗಿದ್ದು, ಏಷ್ಟೋ ವರ್ಷಗಳಿಂದ ಕೆರೆಗಳು ಹೂಳು ತುಂಬಿಕೊಂಡಿದ್ದು, ಎತ್ತುವವರಿಲ್ಲದೆ ಕೆರೆಗಳು ನೀರಿನ ಸಂಗ್ರಹದ ಮಟ್ಟವನ್ನು ಕಳೆದುಕೊಂಡು, ಅವಧಿಗೂ ಮುನ್ನವೇ ಕೆರೆಗಳಲ್ಲಿ ನೀರು ಖಾಲಿಯಾಗಿದೆ.

      ಜಲಮೂಲ ಭದ್ರಪಡಿಸುವ ಉದ್ದೇಶದಿಂದ ಘನ ಸರಕಾರವು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮುಖಾಂತರ ಕೆರೆ ಸಂಜೀವಿನಿ ಯೋಜನೆಯೊಂದನ್ನು ಜಾರಿಗೆ ತಂದಿತ್ತು. ಆದರೆ ಕೆಲ ಅಧಿಕಾರಿ, ಜನ ಪ್ರತಿನಿದಿ,ü ಗುತ್ತಿಗೆದಾರರ ಹಣದಾಸೆಗೆ ಈ ಯೋಜನೆ ಬಲಿಯಾಗಿದೆ ಎಂಬ ಆರೋಪ ರೈತಾಪಿ ವರ್ಗದ್ದು.

      ಈ ಯೋಜನೆಯಡಿಯಲ್ಲಿ ಜೆಸಿಬಿ ಬಳಸಿ ಕೆರೆಗಳ ಹೂಳು ತೆಗೆಯಲು ಅವಕಾಶವಿದೆ. ಆದರೆ ಕೆರೆಯ ಹೂಳು ವಿಲೇವಾರಿಯ ಸಮಸ್ಯೆ ಎದುರಾಗಿದೆ. ಮೊದಲು ರೈತರು ಕೆರೆಯ ಮಣ್ಣನ್ನು ತಮ್ಮ ಜಮೀನು ಹೊಲಗಳಿಗೆ ಹಾಕಿಸಿಕೊಳ್ಳುತ್ತಿದ್ದರು. ಆದರೆ ಈಗ ಕೆಲ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಅವಾಂತರದಿಂದ ಮಣ್ಣು ವಿಲೆವಾರಿಗೆ ಹೆಚ್ಚಾಗಿ ಆಸಕ್ತಿ ತೋರುತ್ತಿಲ್ಲ. ಇದು ಕೆರೆ ಸಂಜೀವಿನಿ ಯೋಜನೆ ಕುಂಟುತ್ತಾ ಸಾಗಲು ಕಾರಣವಾಗಿದೆ.

     ಈ ಹಿಂದೆ ತಮ್ಮ ಗ್ರಾಮಗಳ ಸುತ್ತಮುತ್ತ ಕೆರೆ ಕಟ್ಟೆಗಳನ್ನು ಸ್ಥಳೀಯ ರೈತರು ಮತ್ತು ಗ್ರಾಮಸ್ಥರೆಲ್ಲಾ ಒಟ್ಟಾಗಿ ಸೇರಿಕೊಂಡು ಮನೆಗೊಬ್ಬರಂತೆ ಅವರ ಬಳಿಯಿರುವ ಹಾರೆ, ಗುದ್ದಲಿ, ಪಿಕಾಸಿ ಮುಂತಾದ ಹತಾರಗಳಿಂದ ಕೆರೆಯನ್ನು ಹಾಗೂ ಕಾಲುವೆಗಳನ್ನು ಅಭಿವೃದ್ಧಿ ಪಡಿಸಲು ಒಟ್ಟಾಗುತ್ತಿದ್ದರು. ಕೆರೆಯ ಅಚ್ಚುಕಟ್ಟಿನಲ್ಲಿ ಭಾಗಿಯಾದ ರೈತರು ತಮ್ಮ ಜಮೀನುಗಳಿಗೆ ಕಾಲುವೆ ಮೂಲಕ ನೀರು ಹರಿಸಿಕೊಂಡು ಜಮೀನುಗಳಲ್ಲಿ ಬೆಳೆ ಬೆಳೆಯುತ್ತಿದ್ದರು. ಇದು ಹಿಂದಿನ ಪದ್ಧತಿಯಾಗಿದ್ದು, ಈಗ ಜಿಲ್ಲೆಯ ಕೆಲ ಭಾಗಗಳಲ್ಲಿ ಕಂಡು ಬರುತ್ತಿದೆ.

    ಆದರೆ ಈಗ ಕೆರೆಗಳೆಲ್ಲ ಆಯಾ ಇಲಾಖೆಗಳ ಸುಪರ್ದಿನಲ್ಲಿರುವುದರಿಂದ ಸಮಯಕ್ಕೆ ಸರಿಯಾಗಿ ಬಾರದ ಮಳೆ, ಕೆರೆ ರಿಪೇರಿ ಮಾಡದ ಸಿಬ್ಬಂದಿಯಿಂದ ಕೆರೆಗಳು ಸೊರಗಿವೆ. ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆ ನಾಗರಿಕರಲ್ಲಿ ಮೂಡಿದ್ದು, ಮಳೆಗಾಲಕ್ಕೂ ಮುನ್ನವೆ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳಲು, ಕೆರೆಗಳ ಸಾಮಥ್ರ್ಯ ಹೆಚ್ಚಳಕ್ಕೆ ಹೂಳು ತೆಗೆಯಬೇಕಾಗಿದೆ.

     ಸಿದ್ದಾಪುರ, ಹೊಸಕೆರೆ, ಬಿದರೆಕೆರೆ, ಗರಣಿಕೆರೆ, ಬಿಜವಾರ, ರಂಟವಾಳಲು, ತಾಡಿ, ಬೇಡತ್ತೂರು, ತೆರಿಯೂರು, ಪೋಲೇನಹಳ್ಳಿ ಗ್ರಾಮಗಳ ಕೆರೆಗಳನ್ನು ಕೆರೆ ಸಂಜೀವಿನಿ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗಿತ್ತು. ಸಣ್ಣನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಕೆಲವು ಕೆರೆಗಳೂ ಹಾಗೂ ಮತ್ತಷ್ಟು ಕೆರೆಗಳು ಜಿಲ್ಲಾ ಪಂಚಾಯಿತಿಗೆ ಸೇರಿವೆ. ಈ ಸಣ್ಣನೀರಾವರಿ ಇಲಾಖೆಯಲ್ಲಿ 2018-19 ನೇ ಸಾಲಿನಲ್ಲಿ 10 ಕೆರೆಗಳ ಹೂಳನ್ನು ಪ್ರತಿ ಕೆರೆಗೆ 4 ಲಕ್ಷ ರೂ.ಗಳಂತೆ ಅನುದಾನ ನಿಗದಿಪಡಿಸಿ ಹೂಳು ತೆಗೆಯಲಾಗಿತ್ತು ಎಂಬ ಸಬೂಬು ಅಧಿಕಾರಿಗಳಿಂದ ಕೇಳಿ ಬರುತ್ತಿದೆ. ಇನ್ನೂ ಕೆಲ ಗ್ರಾಪಂಗಳಲ್ಲಿ ನರೇಗಾ ಯೋಜನೆ ಯಡಿಯಲ್ಲಿ ಕೆರೆಕಟ್ಟೆಗಳ ಅಭಿವೃದ್ಧಿಯು ಕಳಪೆಯಾಗಿವೆ ಎಂಬ ಆರೋಪವೂ ಇದೆ.

      ರಾಜ್ಯದಲ್ಲಿ ಸತತ ಬರಗಾಲ ಎದುರಾಗುತ್ತಿದ್ದು ಕುಡಿಯುವ ನೀರಿನ ಸಮಸ್ಯೆ ನೀಗಿಸಲು, ಪ್ರಾಣಿ ಸಂಕುಲಗಳ ರಕ್ಷಣೆ ಮತ್ತು ನೀರಿನ ಅಭಾವ ನೀಗಿಸುವಲ್ಲಿ ಕೆರೆ-ಕಟ್ಟೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಇಂತಹ ವಾತಾವರಣದಲ್ಲಿ ಕೆರೆಯಲ್ಲಿನ ಮರಳು ಹಾಗೂ ಮಣ್ಣಿನ ಆಸೆಗೆ ಬಿದ್ದಿರುವ ಲೂಟಿಕೋರರು ತಮಗಿಷ್ಟ ಬಂದಂತೆ ಕೆರೆಗಳ ಭೂ ಗರ್ಭವನ್ನು ಬಗೆದು ಕಲುಷಿತವಾಗಿಸುತಾ,್ತ ತನ್ನ ಅಲ್ಪ ದಿನಗಳ ಆಯುಷ್ಯಕ್ಕಾಗಿ ವಸತಿ ಪ್ರದೇಶಗಳಿಗಾಗಿ ಕೆರೆಗಳನ್ನು ಕಬಳಿಸುತ್ತಾ ಮುಂದಿನ ಪೀಳಿಗೆಗೆ ಕೆರೆಗಳ ಚಿತ್ರಗಳನ್ನು ಗೋಡೆಯ ಮೇಲೆ ತೋರಿಸುವಂತಹ ವಾತಾವರಣ ಸೃಷ್ಟಿಸುತ್ತಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap