ಬಸವಣ್ಣನವರ ವಚನಗಳ ಮೂಲಕ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

ಕಲಬುರ್ಗಿ

     ಬಸವಣ್ಣನವರ ವಚನಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ಸಂಸದೀಯ ಮಂಡಳಿಯ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆಯವರು ಗುರುವಾರ ಇಲ್ಲಿ ವಾಗ್ದಾಳಿ ನಡೆಸಿದರು.

      ನಗರದಲ್ಲಿ ವಿವಿಧ ಇಲಾಖೆಗಳ 114.69 ಕೋಟಿ ರೂ.ಗಳ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದಯವೇ ಧರ್ಮದ ಮೂಲವಯ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಅಧಿವೇಶನದಲ್ಲಿ ಹೇಳಿದರು. ಕೊನೆಗೆ ನನ್ನ ಭಾಷಣ ಮುಗಿಯುವಾಗ ನಾನು ಹೇಳಿದೆ ದಯವೇ ಧರ್ಮದ ಮೂಲವಯ್ಯ ಅಂತಾ ಹೇಳಿದ್ರಿ ಒಪ್ಕೋತೀನಿ. ಅದರ ಪ್ರಕಾರ ನೀವು ನಡೆದುಕೊಳ್ಳಬೇಕು. ಅದನ್ನು ಬಿಟ್ಟು ನಿಮಗೆ ತಿಳಿದಂಗ ನಡೆದುಕೊಂಡ್ರಿ ಎಂದೆ ಎಂದರು.

        ಬಸವಣ್ಣನವರು ಹೇಳಿದ ಇನ್ನೊಂದು ವಚನವನ್ನು ನಾನು ಪ್ರಧಾನಿಯವರಿಗೆ ಹೇಳಿದೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನ ಹೇಳಿದೆ. ಕಳಬೇಡ ರಫೇಲ್‍ನ್ಯಾಗ ದುಡ್ಡು ಕದಿಬೇಡ ಅಂತಾ ಹೇಳ್ಯಾನ, ಹುಸಿಯ ನುಡಿಯಬೇಡ ನೌಕರಿ ಕೊಡ್ರಾರೆ ಅಂತಾ ಸುಳ್ಳು ಹೇಳಿದಿ.

        ಮುನಿಯಬೇಡ ನಾವೇನರ ಹೇಳಿದರೆ ಮುನಿಸಿಕೊಳ್ಳೋದು, ಅನ್ಯರಿಗೆ ಅಸಹ್ಯ ಪಡಬೇಡ. ಓ ಗಾಂಧಿ ಫ್ಯಾಮಿಲಿ ಹೈ ಎಂದು ಅಸಹ್ಯ ಪಡಬೇಡ. ತನ್ನ ಬಣ್ಣಿಸಬೇಡ ಸರ್ಜಿಕಲ್ ಸ್ಟ್ರೈಕ್ ಕರಾಯಾ, ನೋಟ್ ಬ್ಯಾನ್ ಕಿಯಾ ಅಂತಾ ಹೇಳೋದು. ಇದಿರ ಹಳಿಯಲು ಬೇಡ. ಇನ್ ಕಮ್ ಟ್ಯಾಕ್ಸ್, ಇಡಿಮೂಲಕ ವಿಪಕ್ಷಗಳಿಗೆ ತೊಂದರೆ ಕೊಡೋದು, ಇವನ್ನೆಲ್ಲ ಮಾಡಬೇಡ ಅಂತಾ ಸಂಸತ್ತಿನಲ್ಲಿ ನಾನು ತಿಳಿಸಿದ್ದೇನೆ ಎಂದು ಅವರು ಹೇಳಿದರು.

       ನಗರಕ್ಕೆ ನಾಲ್ಕು ಅಥವಾ ಐದರಂದು ಪ್ರಧಾನಿ ಬರುತ್ತಾರೆ. ಆಗ ಏನು ಹೇಳುತ್ತಾರೆ ನೋಡೋಣ. ಅವರ ಹೇಳಿಕೆಗೆ ನಾನು ಮತ್ತೆ ಮಾರ್ಚ್ 8ರಂದು ಉತ್ತರ ಕೊಡ್ತೇನೆ ಎಂದು ಖರ್ಗೆಯವರು ವಾಗ್ದಾಳಿ ನಡೆಸಿದರು.ಮೋದಿಯವರು ನಗರಕ್ಕೆ ಬಂದಾಗ ಅವರ ಭಾಷಣವನ್ನು ಎಲ್ಲರೂ ಕೇಳಬೇಕು. ಎನ್‍ಎಸ್‍ಎಸ್‍ಓ ಕೇಂದ್ರ ಸರ್ಕಾರದ ಸಂಸ್ಥೆ. ದೇಶದ ಉದ್ಯೋಗ ನೀಡಿದ ಅಂಕಿ, ಸಂಖ್ಯೆ ಬಿಡುಗಡೆ ಮಾಡಿದೆ. ಅದರ ಪ್ರಕಾರ ಕೇವಲ 27 ಲಕ್ಷ ಉದ್ಯೋಗ ಸೃಷ್ಟಿ ಮಾಡಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದ್ದರು. 10 ಕೋಟಿ ನೌಕರಿ ಕೊಡ್ತೀವಿ ಅಂದವರು ಕೇವಲ 27 ಲಕ್ಷ ನೌಕರಿ ಕೊಟ್ಟಿದ್ದಾರೆ ಎಂದು ಅವರು ಟೀಕಿಸಿದರು.

      ಕೇಂದ್ರ ಸರ್ಕಾರದಲ್ಲಿಯೇ 25 ಲಕ್ಷ ಹುದ್ದೆಗಳು ಖಾಲಿ ಇವೆ. ಅವನ್ನು ಭರ್ತಿ ಮಾಡಬಹುದಿತ್ತು. ಲೋಕಸಭೆಯಲ್ಲಿ ನಾನು ಕೇಳಿದ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಅವರು ಉತ್ತರಿಸಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ನಿನ್ನೆ ಅನಿಲ್ ಅಂಬಾನಿಯವರಿಗೆ ಸುಪ್ರಿಂಕೋರ್ಟ್ ಛೀಮಾರಿ ಹಾಕಿದೆ. ಇಂತಹವರಿಗೆ ಅವರು ಬೆಂಬಲ ಕೊಡುತ್ತಾರೆ. ನೋಟು ಅಮಾನ್ಯೀಕರಣನಿಂದ ಭಯೋತ್ಪಾದನೆ ಮುಗೀತು ಅಂದ್ರು. ಭಯೋತ್ಪಾದನೆ ಎಲ್ಲಿ ಮುಗೀತು? ಮೊನ್ನೆ ಪಾಕ್ ಉಗ್ರರ ದಾಳಿಗೆ ಸಿಆರ್‍ಪಿಎಫ್ ಯೋಧರು ಹುತಾತ್ಮರಾದರು. ಎಲ್ಲರೂ ಒಗ್ಗೂಡಿ ದೇಶದ ರಕ್ಷಣೆಗೆ ಹೋರಾಡಬೇಕು. ಅದನ್ನು ಬಿಟ್ಟು ನೋಟು ಅಮಾನ್ಯೀಕರಣದಿಂದ ಭಯೋತ್ಪಾದನೆ ನಿಂತು ಹೋಯಿತು ಎಂದು ಹೇಳುತ್ತಾರೆ ಎಂದು ಪ್ರಧಾನಿಯವರನ್ನು ಖರ್ಗೆಯವರು ತೀವ್ರ ತರಾಟೆಗೆ ತೆಗೆದುಕೊಂಡರು.

       ಕಳೆದ ನಾಲ್ಕೈದು ತಿಂಗಳಲ್ಲಿಯೇ 115 ಕೋಟಿ ರೂ.ಗಳ ಕೆಲಸಗಳು ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಈ ಕಾರ್ಯ ಮಾಡಲು ಶ್ರಮಿಸಿದ ರಾಜ್ಯದ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಅಭಿನಂದಿಸುವುದಾಗಿ ತಿಳಿಸಿದರು.

      ವೇದಿಕೆಯ ಮೇಲೆ ರಾಜ್ಯದ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಎಂ.ವೈ. ಪಾಟೀಲ್, ಖನೀಜ್ ಫಾತಿಮಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ್ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಮಹಾಪೌರರಾದ ಮಲ್ಲಮ್ಮ ವಳಕೇರಿ, ಪ್ರಾದೇಶಿಕ ಆಯುಕ್ತ ಸುಭೋಧ್ ಯಾದವ್, ಜಿಲ್ಲಾಧಿಕಾರಿ ವೆಂಕಟೇಶಕುಮಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap