ಶಿರಾ
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಶಿರಾ ನಗರದ ಖಾಸಗಿ ಬಸ್ ನಿಲ್ದಾಣದ ಅಭಿವೃದ್ಧಿಯ ಬಗ್ಗೆ ಶಾಸಕ ಬಿ.ಸತ್ಯನಾರಾಯಣ್ ಕಾಳಜಿ ವಹಿಸಿ 1.5 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಿಸಿದ್ದು ಶ್ಲಾಘನಾರ್ಹ ಸಂಗತಿಯಾಗಿದ್ದು ಕಳೆದ ಕೆಲ ದಿನಗಳಿಂದ ಕಾಮಗಾರಿಯು ಕೂಡಾ ನಡೆಯುತ್ತಿದೆ. ಈಗಾಗಲೇ ಅಡಿಪಾಯದಿಂದ ಪಿಲ್ಲರ್ ಕಾಮಗಾರಿ ನಡೆಯುತ್ತಿದ್ದು ಈ ಪಿಲ್ಲರ್‍ಗಳಿಗೆ ಹಾಕುತ್ತಿರುವ ಕಬ್ಬಿಣದ ರಾಡುಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪಿಲ್ಲರ್‍ಗಳಿಗೆ 12 ಎಂ.ಎಂ. ಹಾಗೂ 8 ಎಂ.ಎಂ. ಕಬ್ಬಿಣದ ರಾಡುಗಳನ್ನು ಬಳಕೆ ಮಾಡಲಾಗುತ್ತಿದ್ದು ಸದರಿ ಕಬ್ಬಿಣದ ರಾಡುಗಳು ಕೂಡಾ ಕಳಪೆಯಿಂದ ಕೂಡಿವೆ ಎಂದು ದೂರಲಾಗಿದೆ. ಶಿರಾ ಖಾಸಗಿ ಬಸ್ ನಿಲ್ಧಾಣದಲ್ಲಿ ಪ್ರತಿ ದಿನ ನೂರಾರು ಬಸ್‍ಗಳು ಬಂದು ಹೋಗುತ್ತಿದ್ದು ಸಾವಿರಾರು ಮಂದಿ ಪ್ರಯಾಣಿಕರು ಕೂಡಾ ತಂಗುದಾಣದಲ್ಲಿ ನಿಂತಿರುತ್ತಾರೆ. ಆರಂಭದಲ್ಲಿಯೇ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳದಿದ್ದಲ್ಲಿ ನಿಲ್ದಾಣದ ಅಭಿವೃದ್ಧಿಗೆ ಹಾಕಿದ ಅನುದಾನವೂ ವ್ಯರ್ಥವಾಗುತ್ತದೆ. ಸ್ಥಳೀಯ ನಗರಸಭೆಯ ಅಧಿಕಾರಿಗಳು ಸದರಿ ಕಾಮಗಾರಿಯ ಸಂಪೂರ್ಣ ಹೊಣೆಯನ್ನು ಹೊತ್ತಿದ್ದು ಗುತ್ತಿಗೆದಾರರ ಮುಂದೆ ನಿಂತು ಈ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಖಾಸಗಿ ಬಸ್ ನಿಲ್ದಾಣದ ಅಭಿವೃದ್ಧಿ ಕೈಗೊಳ್ಳಲೇಬೇಕೆಂದು ಹಠದಿಂದ ಕೋಟಿ ರೂಗಳ ಅನುದಾನ ತಂದ ಶಾಸಕರು ನಿಲ್ದಾಣದ ಅಭಿವೃದ್ಧಿಯತ್ತ ಒಂದು ಕಣ್ಣಿಡದೇ ಇದ್ದಲ್ಲಿ ಅನುದಾನ ದುರ್ಬಳಕೆಯಾಗುವುದರಲ್ಲಿ ಸಂದೇಹವೇ ಇಲ್ಲವಾಗಿದ್ದು ಈ ಕೂಡಲೇ ಕ್ರಮ ಕೈಗೊಳ್ಳುವಂತೆ ಹಾಗೂ ನಿಲ್ದಾಣದ ಕಾಮಗಾರಿ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.