ಬೆಂಗಳೂರು
ಲಾಕ್ ಡೌನ್ ಕಾರಣ ಕಳೆದ ಎರಡು ತಿಂಗಳನಿಂದ ಸ್ಥಗಿತಗೊಂಡಿದ್ದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಪುನರ್ ಆರಂಭವಾಗಿದ್ದು, ವಿಮಾನ ನಿಲ್ದಾಣದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿಲ್ದಾಣದ ನಿರ್ಗಮನ ಪ್ರವೇಶ ದ್ವಾರಗಳಲ್ಲಿ ಪ್ರಯಾಣಿಕರು ಥರ್ಮಲ್ ಸ್ಕ್ಯಾನ್‍ಗೆ ಒಳಪಡಬೇಕಾಗಿರುವುದಲ್ಲದೆ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಇ -ಮುದ್ರಿತ ಬೋರ್ಡಿಂಗ್ ಪಾಸ್ ಹೊಂದಿರಬೇಕು, ಮೊಬೈಲ್ ಪೋನ್‍ಗಳಲ್ಲಿ ಆರೋಗ್ಯ ಸೇತು ಆಪ್ ಅಳವಡಿಸಿಕೊಂಡಿರಬೇಕಾಗಿರುತ್ತದೆ.
ಹಲವಾರು ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಪ್ರಯಾಣಿಕರಿಗೆ ಸುರಕ್ಷಿತ ಅನುಭವವನ್ನು ಸಾದರಪಡಿಸುವಲ್ಲಿ ಬದ್ಧತೆ ಹೊಂದಲಾಗಿದೆ ಎಂದು ಬಿಐಎಎಲ್‍ನ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಹರಿ ಮಾರರ್ ತಿಳಿಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದಲೂ ವಿಮಾನಗಳ ಹಾರಾಟ ಆರಂಭಿಸಲಾಗಿದೆ. ಇಂದು ಮುಂಜಾನೆ ಬೆಂಗಳೂರಿನಿಂದ ಹೊರಟ ವಿಮಾನ ಬೆಳಿಗೆ 8-45ಕ್ಕೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಪ್ರಯಾಣಿಕರು ಸುರಕ್ಷಿತವಾಗಿ ತಲುಪಿದ್ದಾರೆ.
ಇಲ್ಲಿಂದ ಅಹಮದಾಬಾದ್, ಪುಣೆ, ಮುಂಬೈ ಮತ್ತು ಮೈಸೂರಿಗೆ ವಿಮಾನ ಹಾರಾಟ ಏರ್ಪಾಡಾಗಿದೆ. ಕೊರೋನಾ ಸೋಂಕು ಹರಡದಂತೆ ವಿಮಾನ ನಿಲ್ದಾಣದಲ್ಲಿ ಎಲ್ಲ ರೀತಿಯ ಸುರಕ್ಷಿತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೊರರಾಜ್ಯದಿಂದ ಬರುವ ಪ್ರಯಾಣಿಕರಿಗೆ ಏಳು ದಿನಗಳವರೆಗೆ ಕ್ವಾರಂಟೈನ್ ಮಾಡಲು ಜಿಲ್ಲಾ ಆಡಳಿತ ಕ್ರಮ ತೆಗೆದುಕೊಂಡಿದೆ. ಮತ್ತೊಂದೆಡೆ ಬೆಂಗಳೂರಿನಿಂದ ಹೊರಟ ಸ್ಟಾರ್ ಏರ್ ಸಂಸ್ಥೆಯ ವಿಮಾನವು ಬೆಳಗ್ಗೆ 9-30ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ತದನಂತರ 10.20ಕ್ಕೆ 20 ಪ್ರಯಾಣಿಕರನ್ನು ಕರೆದುಕೊಂಡು ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಿತು. ಭಾರತೀಯ ವಿಮಾನಯಾನ ಪ್ರಾಧಿಕಾರದ ಮಾರ್ಗಸೂಚಿಯಂತೆ ಎಲ್ಲಾ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ ಎಂದು ಕಲಬುರಗಿ ವಿಮಾನ ನಿಲ್ದಾಣದ ಎ.ಎ.ಐ. ನಿರ್ದೇಶಕ ಜ್ಞಾನೇಶ್ವರ ರಾವ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ