ಯಡಿಯೂರಪ್ಪ ಪದಗ್ರಹಣದಲ್ಲಿ ಕಾಣಿಸಿಕೊಂಡ ಕೆ.ಎನ್ ಆರ್..!

ತುಮಕೂರು

      ನಾಲ್ಕನೇ ಭಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ತುಮಕೂರು ಜಿಲ್ಲೆಯ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಕೆ.ಎನ್ ರಾಜಣ್ಣ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

      ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ರಾಜ್ಯದ ವಿವಿಧ ಮುಖಂಡರುಗಳು ರಾಜಭವನದ ಮುಂಭಾಗ ನಡೆದ ಸರಳ ಸಮಾರಂಭಕ್ಕೆ ಹಾಜರಾಗಿದ್ದರು. ಬಿಎಸ್‍ವೈ ಅವರತ್ತ ಆಗಮಿಸಿ ಶುಭ ಕೋರುತ್ತಿದ್ದರು. ಇದೇ ಸಮಯಕ್ಕೆ ಕೆ.ಎನ್.ರಾಜಣ್ಣ ಅವರು ಅಲ್ಲಿಗೆ ತೆರಳಿ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಮಾತನಾಡಿ, ಶುಭ ಕೋರಿದರು.

      ಮೈತ್ರಿ ಸರ್ಕಾರ ಪತನವಾಗುವ ಒಂದೆರೆಡು ದಿನಗಳ ಹಿಂದೆ ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಲಾಗಿತ್ತು. ಕೆ.ಎನ್.ರಾಜಣ್ಣ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಬ್ಯಾಂಕ್ ಸೂಪರ್‍ಸೀಡ್ ಕ್ರಮ ಕೆ.ಎನ್.ರಾಜಣ್ಣ ಅವರನ್ನು ಕೆರೆಳಿಸಿತ್ತು. ಮಾರನೇ ದಿನವೇ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದರು. ಇದೊಂದು ರಾಜಕೀಯ ದ್ವೇಷದ ರಾಜಕಾರಣ ಎಂದು ಕಿಡಿಕಾರಿದ್ದರು.

     ದೇವೇಗೌಡರ ಕುಟುಂಬ ಹಾಗೂ ಇನ್ನೂ ಕೆಲವರ ವಿರುದ್ಧ ವಾಗ್ದಾಳಿ ನಡೆಸಿ ಇವರೆಲ್ಲರ ಚಿತಾವಣೆಯಿಂದ ಸೂಪರ್‍ಸೀಡ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು. ಅಲ್ಲದೆ ನೋಡುತ್ತಾ ಇರಿ, ಇನ್ನೊಂದು ವಾರದೊಳಗೆ ಮತ್ತೆ ನಾನೇ ಅಧ್ಯಕ್ಷನಾಗಿ ಬರುತ್ತೇನೆ ಎಂಬ ಸವಾಲನ್ನು ಎಸೆದಿದ್ದರು.

     ಇತ್ತೀಚೆಗಷ್ಟೇ ನಡೆದು ಹೋದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರ ಪರ ಕೆ.ಎನ್.ರಾಜಣ್ಣ ಕೆಲಸ ಮಾಡಲಿಲ್ಲ ಎಂಬ ಆರೋಪ ಕೇಳಿ ಬಂದಿದ್ದವು. ಈ ಆರೋಪಗಳಿಗೆ ಪುಷ್ಟಿ ನೀಡುವಂತಹ ಮಾತುಗಳನ್ನೇ ಕೆ.ಎನ್.ಆರ್ ಆಡುತ್ತಾ ಬಂದರು. ಇದು ದೇವೇಗೌಡರು ಹಾಗೂ ಎಚ್.ಡಿ.,ಕುಮಾರಸ್ವಾಮಿ ಅವರನ್ನು ಕೆರಳಿಸಿತ್ತು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೆ.ಎನ್.ಆರ್ ಪುತ್ರ ರಮೇಶ್‍ಜಾರಕಿಹೊಳಿ ಅವರ ಪರವಾಗಿ ಕೆಲಸ ಮಾಡಿದ್ದಾರೆ ಎಂಬಂತಹ ಆರೋಪಗಳನ್ನು ಹೊರಿಸಲಾಗಿತ್ತು. ಮಧುಗಿರಿಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್ಚು ಮತಗಳಿಸಲು ಸಹ ಕೆ.ಎನ್.ರಾಜಣ್ಣ ಕಾರಣ ಎಂಬ ಸಂದೇಶ ಹೋಗಿತ್ತು.

      ಚುನಾವಣೆ ಮುಗಿದ ನಂತರ ಕೆಲವು ಅನಿರೀಕ್ಷಿತ ಘಟನೆಗಳು ನಡೆದು ಹೋದವು. ಡಾ.ಜಿ.ಪರಮೇಶ್ವರ್ ಮತ್ತು ಕೆ.ಎನ್.ರಾಜಣ್ಣ ಬಣ ಎಂಬುದಾಗಿ ಎರಡು ಗುಂಪುಗಳಾದವು. ಚುನಾವಣೆ ಸಮಯದಲ್ಲಿ ಗುಪ್ತವಾಗಿದ್ದ ರಾಜಕೀಯ ಆನಂತರ ಬಹಿರಂಗವಾಗತೊಡಗಿತು. ಕೆ.ಎನ್.ರಾಜಣ್ಣ ಏನೇ ಮಾತನಾಡಿದರೂ ಸಿದ್ದರಾಮಯ್ಯ ಮೌನವಹಿಸುತ್ತಾರೆ ಆದರೆ ರೋಷನ್‍ಬೇಗ್ ಅವರಂತಹವರು ಮಾತನಾಡಿದರೆ ಅವರ ಮೇಲೆ ಶಿಸ್ತಿನ ಕ್ರಮಕ್ಕೆ ಮುಂದಾಗುತ್ತಾರೆ ಎಂಬ ಆಪಾದನೆಗಳು ಸಹ ಕೇಳಿ ಬಂದವು. ಇದಾವುದಕ್ಕೂ ಕೆ.ಎನ್,.ಆರ್ ಕೇರ್ ಮಾಡಲೇ ಇಲ್ಲ. ಇಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರು ನಾವೇ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳುತ್ತಾ ಬಂದರು.

      ಇದೀಗ ಸಮ್ಮಿಶ್ರ ಸರ್ಕಾರ ಪತನವಾಗಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ. ಕೆ.ಎನ್.ರಾಜಣ್ಣ ಜಿಲ್ಲೆಯ ಕಾಂಗ್ರೆಸ್‍ನಲ್ಲಿ ಹಿರಿಯ ರಾಜಕಾರಣಿಯಾಗಿ, ಸಹಕಾರಿ ಕ್ಷೇತ್ರದ ಧುರೀಣರಾಗಿಯೂ ಗುರ್ತಿಸಿಕೊಂಡಿದ್ದು, ಬಿ.ಎಸ್.ಯಡಿಯೂರಪ್ಪ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಹಾಜರಾಗಿ ಹಾರೈಸಿ ಬಂದಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap