ಕೆಎನ್‍ಆರ್ ಉಚ್ಛಾಟಿಸಿ ಎಂದು ಹೇಳಿಲ್ಲ : ಕೆಂಚಮಾರಯ್ಯ

ಮಧುಗಿರಿ

     ಮಾಜಿ ಶಾಸಕ ಕೆ.ಎನ್.ರಾಜಣ್ಣ ರವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಎಲ್ಲಿಯೂ ಕೂಡ ಹೇಳಿಲ್ಲ ಎಂದು ಜಿ.ಪಂ.ಸದಸ್ಯ ಹಾಗೂ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಕೆಂಚಮಾರಯ್ಯ ತಿಳಿಸಿದರು.

       ಪಟ್ಟಣದ ಮಂಜುನಾಥ ಕಂಫಟ್ರ್ಸ್‍ನಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಜಿ.ಪರಮೇಶ್ವರರವರನ್ನು ಝೀರೋ ಟ್ರಾಫಿಕ್ ಮಂತ್ರಿ ಎಂಬುದನ್ನು ನಾನು ಖಂಡಿಸುತ್ತೇನೆ. ಏಕೆಂದರೆ ಅಸ್ಪೃಶ್ಯ ಸಮಾಜಕ್ಕೆ ಇದೇ ಮೊದಲ ಬಾರಿಗೆ ಇಂತಹ ದೊಡ್ಡ ಹುದ್ದೆ ದೊರೆತಿದೆ. ಅಸ್ಪೃಶ್ಯ ಸಮಾಜದ ವಿರುದ್ಧ ನೀಡುವ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ. 2013ರ ಚುನಾವಣೆಯಲ್ಲಿ ರಾಜಣ್ಣನವರ ಗೆಲುವಿಗೆ ತುಂಬ ಕಷ್ಟ ಪಟ್ಟು ಕೆಲಸ ಮಾಡಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ನಾನು ಅಷ್ಟು ಕೆಲಸ ಮಾಡಿಲ್ಲ. ಏಕೆಂದರೆ ಈ ಹಿಂದೆ ತೋರಿಸಿದಷ್ಟು ಪ್ರೀತಿ ಅಷ್ಟಾಗಿ ತೋರಿಸಲಿಲ್ಲ. ಹಾಗಂತ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಎಲ್ಲೂ ಭಾಗವಹಿಸಿಲ್ಲ ಎಂದು ತಿಳಿಸಿದರು.

     ಮಧುಗಿರಿ ಹಾಗೂ ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಮ್ಮ ಸಮುದಾಯದವರು ಕೂಲಿ ಪಡೆದು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಇದುವರೆವಿಗೂ ತಾಲ್ಲೂಕಿನಲ್ಲಿ ರಾಜಕಾರಣದಲ್ಲಿ ಹೆಚ್ಚು ಹೊರಗಿನವರೆ ಅಧಿಕಾರ ಅನುಭವಿಸಿದ್ದಾರೆ. ಕೆಲವರು ಸಮುದಾಯದ ಹಾಸ್ಟೆಲ್‍ನ್ನು ಮನೆ ಮಾಡಿಕೊಂಡು ಜನಾಂಗದ ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ.

      ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಯಾರಿಂದಲೂ ಕೂಡ 50 ಲಕ್ಷ ಹಣ ಪಡೆದಿಲ್ಲ. ಯಾವ ಪಟ್ಟಿಯನ್ನು ಹಾಲಿ ಶಾಸಕ ವೀರಭದ್ರಯ್ಯನವರಿಗೆ ನೀಡಿಲ್ಲ. ಸಮುದಾಯದ 35 ಸಾವಿರ ಜನರಿಗೆ ನಾನು ಸಹಾಯ ಮಾಡಿರುವುದು ಏನೆಂದು ತಿಳಿದಿದೆ. ಇವರ ಆರೋಪ ನಿರಾಧಾರವಾಗಿದ್ದು ನನ್ನ ಬಗ್ಗೆ ಮಾತಾನಾಡುವವರು ನಾಲಿಗೆ ತೊಳೆದು ಕೊಂಡು ಮಾತನಾಡ ಬೇಕು. ಈ ರೀತಿ ಆರೋಪ ಮಾಡಿರುವವರ ವಿರುದ್ದ ನಾನು ಮಾನ ನಷ್ಟ ಮೊಕದ್ದಮೆ ಹೂಡುವೆ ಎಂದರು.

        ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಿಮಗೆ ಟಿಕೆಟ್ ಕೊಡಿಸಲು ಕೆ.ಎನ್.ರಾಜಣ್ಣ ಸಹಕರಿಸಲಿಲ್ಲ ಎಂಬ ಕಾರಣದಿಂದ ಅವರ ವಿರುದ್ಧ ನೀವು ಪಿತೂರಿ ನಡೆಸುತ್ತಿದ್ದೀರಾ ಎಂಬ ಆರೋಪ ನಿಮ್ಮ ಮೇಲಿದೆ ಎಂದು ಪತ್ರಕರ್ತರು ಪ್ರಶ್ನಿಸಿದರು. ಆಗ ನಾನು ಈ ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಆಕ್ಷಾಂಕ್ಷಿಯಾಗಿದ್ದೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಬಳಿ ಟಿಕೆಟ್ ವಿಚಾರ ಪ್ರಸ್ತಾಪಿಸಿದ್ದೆ. ಹಾಲಿ ಸದಸ್ಯರಿಗೆ ಟಿಕೆಟ್ ನೀಡಲಾಗುವುದು ಎಂದಾಗ ನಾನು ಸುಮ್ಮನಾದೆ. ಹಾಗಾದರೆ ತುಮಕೂರಿನಲ್ಲಿ ಮುದ್ದಹನುಮೇಗೌಡರಿಗೆ ಯಾಕೆ ಟಿಕೆಟ್ ನೀಡಲಿಲ್ಲ ಎಂದಾಗ, ದೇವೆಗೌಡರು ಮೈತ್ರಿ ಅಭ್ಯರ್ಥಿಯಾಗಿದ್ದರಿಂದ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿತು ಎಂದರು.

       ಉದ್ಯಮಿ ವೆಂಕಟೇಶ್ ಮಾತನಾಡಿ, ಯಾರೆ ನಾಯಕರಿರಬಹುದು. ಜನರ ಮಧ್ಯೆ ಕಂದಕ ಸೃಷ್ಟಿಸುವುದು ಸರಿಯಲ್ಲ. ನಾವು ಎಂದಿಗೂ ಒಪ್ಪುವುದಿಲ್ಲ ಮತ್ತು ಈಗಿನ ಎಲ್ಲಾ ಬೆಳವಣಿಗೆಗಳನ್ನು ನಾನು ಪ್ರೋತ್ಸಾಹಿಸುವುದಿಲ್ಲ ಎಂದರು.ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನರಸೀಯಪ್ಪ, ಮಾನವ ಹಕ್ಕುಗಳ ರಕ್ಷಣಾ ವೇದಿಕೆಯ ಬಿ.ನರಸಿಂಹಮೂರ್ತಿ, ಮುಖಂಡರಾದ ನರಸಿಂಹಯ್ಯ, ಮಹಾಲಿಂಗಪ್ಪ, ಶಿವಕುಮಾರ್, ತೊಂಡೋಟಿ ರಾಮಾಂಜಿ, ಸಿದ್ದಲಿಂಗಪ್ಪ, ನರಸಿಂಹಮೂರ್ತಿ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap