ಬ್ಯಾಡಗಿ:
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದರೂ ಗುಡ್ಡದಮಲ್ಲಾಪುರದಲ್ಲಿ ಸರ್ಕಾರಿ ಕೊಳವೆಭಾವಿಯೊಂದನ್ನು ಖಾಸಗಿ ವ್ಯಕ್ತಿಗಳು ಶುಂಠಿ ಬೆಳೆಯುವ ಹೊಲಕ್ಕೆ ಬಳಸಿಕೊಳ್ಳುತ್ತಿದ್ದಾರೆ, ಕೂಡಲೇ ಅದನ್ನು ಸ್ಥಗಿತಗೊಳಿಸಿ ಗ್ರಾಮದ ಮೇಲ್ಮಟ್ಟದ ಜಲಾಗಾರಕ್ಕೆ ನೀರು ಪೂರೈಸಬೇಕು ಇಲ್ಲದಿದ್ದಲ್ಲಿ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಲು ಹಿಂಜರಿಯು ವುದಿಲ್ಲ ಎಂದು ಅಧ್ಯಕ್ಷೆ ಸವಿತಾ ಸುತ್ತಕೋಟಿ ತೀವ್ರ ತರಾಟೆಗೆ ತಗೆದುಕೊಂಡ ಘಟನೆ ತಾಲ್ಲೂಕ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.
ವಿಷಯದ ಕುರಿತು ಗಮನ ಸೆಳೆದ ಸದಸ್ಯ ಶಾಂತಪ್ಪ ದೊಡ್ಮನಿ, ಮಳೆಯಿಲ್ಲದೇ ಜನರು ಕುಡಿಯುವ ನೀರಿಗಾಗಿ ತೊಂದರೆ ಪಡುತ್ತಿರುವ ಈ ದಿನಗಳಲ್ಲಿ ಸರ್ಕಾರಿ ಕೊಳವೆಭಾವಿಯೊಂದರ ದುರ್ಬಳಕೆಯಾಗುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಸಹ ಯಾವುದೇ ಕ್ರಮ ತೆಗೆದುಕೊಳ್ಳದ ಇರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ಆರೋಪಿಸಿದರು.
ಹಿರೇಕೆರೂರು ಹೆಸ್ಕಾಂ ಸಿಬ್ಬಂದಿ ಮೆಲೆ ಕ್ರಮಕ್ಕೆ ಆಗ್ರಹ:ಸದಸ್ಯ ಪ್ರಭುಗೌಡ ಪಾಟೀಲ ಮಾತನಾಡಿ, ಕುಡಿಯುವ ನೀರು ಪೂರೈ ಕೆಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ, ಹಾಗಂತಲೇ ಕೊಳವೆಭಾವಿಯನ್ನು ಗ್ರಾಮಸ್ಥರ ಅನುಕೂಲಕ್ಕಾಗಿ ಕೊರೆಸಲಾಗಿದೆ, ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಪ್ರಭಾವ ಬೀರುವ ಮೂಲಕ ಹಿರೇಕೆರೂರು ಹೆಸ್ಕಾಂ ವಿಭಾಗದಿಂದ ಅನಧೀಕೃತ ವಾಗಿ ವಿದ್ಯುತ್ ಸಂಪರ್ಕ ಪಡೆಯುವ ಮೂಲಕ ನೀರನ್ನು ಖಾಸಗಿ ಜಮೀನುಗಳಿಗೆ ಹರಿಸಿಕೊಳ್ಳಲಾಗುತ್ತಿದೆ, ಜಿಲ್ಲಾಧಿಕಾರಿ ಗಳ ಗಮನಕ್ಕೆ ತರುವ ಮೂಲಕ ಹಿರೇಕೆರೂರು ಹೆಸ್ಕಾಂ ಸಿಬ್ಬಂದಿಯ ಮೇಲೂ ಕ್ರಮ ತೆಗೆದುಕೊಳ್ಳುವ ಕೆಲಸವಾಗಬೇಕು ಎಂದರು.
ಧರ್ಮಾಧಿಕಾರಿಗಳ ಭರವಸೆ ಪಡೆದು ಬಂದಿದ್ದೇನೆ:ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣ ನೀರು ಪೂರೈಕೆ ಎಇಇ ಶಂಕರ ಚವಾಣ, ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದ್ದು ಗುಡ್ಡದ ಮಲ್ಲಾಪುರ ಶ್ರೀಮಠದ ಧರ್ಮಾಧಿಕಾರಿಗಳು ಹೊಲಕ್ಕೆ ನೀರು ಬಿಡುವುದನ್ನು ನಿಲ್ಲಿಸುತ್ತೇನೆ ಎಂದು ಮೌಖಿಕ ಭರವಸೆ ನೀಡಿದ್ದಾರೆ, ಮಾತಿನಂತೆ ನಡೆದುಕೊಳ್ಳುವ ವಿಶ್ವಾಸವಿಟ್ಟು ಮರಳಿ ಬಂದಿದ್ದೇನೆ ಎಂದರು.
ಹಣಕೊಟ್ಟರಷ್ಟೇ ಕಾಮಗಾರಿ ಆದೇಶ:ಸ್ಥಾಯಿಸಮಿತಿ ಅಧ್ಯಕ್ಷ ವೈ.ಎನ್.ಕರೇಗೌಡ್ರ ಮಾತನಾಡಿ, ವಿವಿಧ ವಸತಿ ಯೋಜನೆಯಡಿ ಬಡ ಫಲಾನುಭವಿಗಳಿಗೆ ಮಂಜೂರಾದ ಮನೆಗಳ ಕಾರ್ಯಾದೇಶವನ್ನು ಯಾವೊಬ್ಬ ಪಿಡಿಓಗಳು ಉಚಿತವಾಗಿ ಕೊಡುತ್ತಿಲ್ಲ, ಹಣ ಕೊಟ್ಟವರಿಗಷ್ಟೇ ಕಾರ್ಯಾದೇಶ ನೀಡಲಾಗುತ್ತಿದೆ ಇಲ್ಲದಿದ್ದರೇ ಬ್ಲಾಕ್ ಆಗಿದೆ ಎಂದು ಕುಂಟುನೆಪ ಹೇಳಿ ಕಳುಹಿಸುತ್ತಿದ್ದಾರೆ ಇದರಿಂದ ಫಲಾನುಭವಿಗಳಿಗೆ ಗೊತ್ತಿಲ್ಲದಂತೆ ಅವರ ಹೆಸರಿಗೆ ಬಂದಂತಹ ಮನೆಗಳು ಹಿಂದಕ್ಕೆ ಮರಳುತ್ತಿವೆ, ಇನ್ನೂ ಕೆಲವರಿಗೆ ಮನೆ ನಿರ್ಮಿಸಿಕೊಳ್ಳಲು ಮೌಖಿಕವಾಗಿ ತಿಳಿಸಲಾಗುತ್ತಿದ್ದು ಮನೆ ನಿರ್ಮಿಸಿಕೊಂಡಿದ್ದವರಿಗೆ ಹಣ ನೀಡದೇ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು..
ಇಲ್ಲಿ ಯಾರೂ ದನ ಕಾಯೋರಿಲ್ಲಾ:
ಲೋಕೋಪಯೋಗಿ ಇಲಾಖೆ ಮೇಲಿನ ಚರ್ಚೆ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಎನ್.ಕರೇಗೌಡ್ರ ಮಾತನಾಡಿ, ಕದಮನಹಳ್ಳಿ ಹಾಗೂ ಗುಂಡೇನಹಳ್ಳಿ ಗ್ರಾಮಗಳ ಮಧ್ಯೆ ರಸ್ತೆ ತಿರುವೊಂದು ಅಪಾಯಕ್ಕೆ ಆಹ್ವಾನಿಸುತ್ತಿದೆ, ಶಾಲಾ ಮಕ್ಕಳನ್ನು ಹೊತ್ತೊಯ್ಯುವ ಸಂದರ್ಭದಲ್ಲಿ ಸಾರಿಗೆ ಬಸ್ ಎರಡು ಬಾರಿ ರಸ್ತೆ ಬಿಟ್ಟು ನೆಲಕ್ಕಳಿದಿದೆ, ಹೀಗಿದ್ದರೂ ಸಹ ತಿರುವು ಸರಳೀಕರಣಗೊಳಿಸುವ ಕುರಿತು ಕಳೆದ 6 ತಿಂಗಳ ಹಿಂದೆಯೇ ಮಾನ್ಯ ಶಾಸಕರು ಅಂದಾಜು ಪತ್ರಿಕೆ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದರೂ ಸಹ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಸೂಚನೆ ಸಿಕ್ಕಿಲ್ಲ:
ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಇಂಜಿನಿಯರ್ ಕೆ.ರಾಜಪ್ಪ ಮೇಲಾಧಿಕಾರಿಗಳಿಂದ ಯಾವುದೇ ಸೂಚನೆ ಸಿಗದ ಹಿನ್ನೆಲೆಯಲ್ಲಿ ಯೋಜನಾ ಪ್ರತಿ ಸಿದ್ಧಪಡಿಸಿಲ್ಲ ಅಷ್ಟಕ್ಕೂ ಸದರಿ ರಸ್ತೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಭೆಗೆ ತಿಳಿಸಿದರು. ಇದರಿಂದ ಮತ್ತಷ್ಟು ಗರಂ ಆದ ಕರೇಗೌಡ್ರ ‘ಹಾಗಿದ್ದರೇ ಇಷ್ಟು ದಿವಸ ಮಲಗಿದ್ದೀರೇನ್ರಿ ಇಲ್ಲಿ ಯಾರೂ ದನ ಕಾಯೋರಿಲ್ಲಾ’ ಇಂತಹ ಹೇಳಿಕೆ ನೀಡಲು ನಿಮಗೆ
ನಾಚಿಕೆಯಾಗುವುದಿಲ್ಲದೇ ಎಂದು ಪ್ರಶ್ನಿಸಿದರು..?
ನಾವು ಸಭೆಗೆ ಬರೋದಿಲ್ಲಾರೀ:ಅಬಕಾರಿ ಇಲಾಖೆ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಚುನಾಯಿತ ಸದಸ್ಯರೇ ಸತತ ಮೂರು ಸಭೆಗಳಿಗೆ ತಪ್ಪಿಸಿದರೇ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ, ಆದರೆ ಐದಾರು ಸಭೆಗಳಿಗೆ ಗೈರಾಗಿದ್ದರೂ ಯಾವುದೇ ಕ್ರಮಗಳಾಗಿಲ್ಲ, ಅಬಕಾರಿ ಇಲಾಖೆಯವರಂತೂ ಸಾಮಾನ್ಯ ಸಭೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಹೀಗಾಗಿ ಸಭೆಗೆ ಬಂದು ಮಾಹಿತಿ ನೀಡಲು ಸಾಧ್ಯವಿಲ್ಲ ಹೀಗಾಗಿ ಸಭೆಗೆ ಬರುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದ್ದಾರೆ, ಹೀಗಾದರೇ ಅಬಕಾರಿ ಇಲಾಖೆ ಸಮಸ್ಯೆಗಳನ್ನು ಯಾರ ಬಳಿ ಚರ್ಚಿಸಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಟಿಇಓ ಪರುಶರಾಮ ಪೂಜಾರ ಈ ಕುರಿತು ಸಂಬಂಧಿಸಿದ ಇಲಾಖೆಯಿಂದ ಲಿಖಿತ ಪತ್ರ ಪಡೆದು ಸರ್ಕಾರಕ್ಕೆ ಬರೆದು ಕಳುಹಿಸುವುದಾಗಿ ತಿಳಿಸಿದರು.
ಒತ್ತುವರಿ ಮರಳಿ ಪಡೆಯಲು ಅನುಮತಿ ಕೊಡಿ:
ಚಿಕ್ಕಬಾಸೂರ ಗ್ರಾಪಂ ಅಧ್ಯಕ್ಷೆ ಕುಸಮಾ ಹಂಜೇರ ಮಾತನಾಡಿ, ಗ್ರಾಮ ಪಂಚಾಯತ್ ಜಾಗವನ್ನು ಒತ್ತುವರಿ ಮಾಡಿದ್ದ ಕೆಲ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ, ಒತ್ತುವರಿಯನ್ನು ಮರಳಿ ಪಡೆಯಲು ಗ್ರಾಮ ಪಂಚಾಯತಿಗೆ ಅಧಿಕಾರವಿಲ್ಲವೇ..? ಎಂದು ಪ್ರಶ್ನಿಸಿದ ಅವರು, ಕೂಡಲೇ ನೆನೆಗುದಿಗೆ ಬಿದ್ದಿರುವ ಪ್ರಕರಣಗಳನ್ನು ಪೂರ್ಣಗೊಳಿಸಿಕೊಡಬೇಕು ಮತ್ತು ಪಂಚಾಯತಿ ಹಸ್ತಾಂತರ ಮಾಡಿಕೊಡುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ ಸೇರಿದಂತೆ, ಸದಸ್ಯರಾದ ಗುಡ್ಡಪ್ಪ ಕೋಳೂರು, ಶಶಿಕಲಾ ಹಲಗೇರಿ, ಪೂರ್ಣೀಮಾ ಆನ್ವೇರಿ, ಸಾವಿತ್ರಾ ಕೋಡದ, ಪಾರ್ವತಮ್ಮ ಮುದುಕಮ್ಮನವರ, ಲಕ್ಷಣ ಮೇಗಳಮನಿ, ಲಲಿತಾ ಲಮಾಣಿ ಸೇರಿದಂತೆ ತಾಲೂಕ ಮಟ್ಟದ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.