ಹೂವಿನಹಡಗಲಿ
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕೆಲಸ ನೀಡುವಂತೆ ಆಗ್ರಹಿಸಿ ಮಹಿಳಾ ಕೂಲಿ ಕಾರ್ಮಿಕರು ಬುಧವಾರ ಹಿರೇಮಲ್ಲನಕೆರೆ ಗ್ರಾಮ ಪಂಚಾಯ್ತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪಂಚಾಯ್ತಿಯವರು ತಾಂತ್ರಿಕ ನೆಪವೊಡ್ಡಿ 15 ದಿನಗಳಿಂದ ಕೆಲಸ ಕೊಡುತ್ತಿಲ್ಲ. ಹೀಗಾಗಿ ಕೂಲಿ ಕೆಲಸವನ್ನೇ ನೆಚ್ಚಿಕೊಂಡವರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಕೂಡಲೇ ಉದ್ಯೋಗ ನೀಡಬೇಕು ಎಂದು ಮಹಿಳೆಯರು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ಅಧ್ಯಕ್ಷ ಅಂಚಿ ಮಂಜುನಾಥ ಮಾತನಾಡಿ, ಬರಗಾಲದಿಂದ ರೈತರು, ಕೃಷಿ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಮುಂಗಾರು ಮಳೆ ಸುರಿದಿದ್ದರೆ ಕೂಲಿ ಕಾರ್ಮಿಕರಿಗೆ ಹೊಲ ಗದ್ದೆಗಳಲ್ಲಿ ಕೆಲಸ ಸಿಗುತ್ತಿತ್ತು. ಮಳೆ ಆಗದೇ ಇರುವುದರಿಂದ ಈ ಭಾಗದ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿಯನ್ನೇ ನೆಚ್ಚಿಕೊಂಡಿದ್ದಾರೆ. ಹೀಗಾಗಿ ಸಮರ್ಪಕ ಕೂಲಿ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.
ಕೂಲಿಕಾರರಿಗೆ ನಿರ್ದಿಷ್ಟ ಕೂಲಿ ಹಣ ಪಾವತಿಸದೇ ಕಡಿಮೆ ಹಣ ನೀಡಲಾಗುತ್ತಿದೆ ಎಂಬ ದೂರುಗಳಿವೆ. ಈ ಅನ್ಯಾಯಗಳನ್ನು ಸರಿಪಡಿಸಿ ಕೂಲಿಕಾರರಿಗೆ ಸಮರ್ಪಕ ಉದ್ಯೋಗ, ನಿರ್ದಿಷ್ಟ ಕೂಲಿ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅರವಿಂದ ಲಿಂಗನಗೌಡ್ರ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಬದಲಾದ ನಿಯಮಗಳ ಪ್ರಕಾರ ಕ್ರಿಯಾಯೋಜನೆಗೆ ಆನ್ ಲೈನ್ ನಲ್ಲಿ ಅನುಮೋದನೆ ಪಡೆಯಬೇಕಿದೆ. ಈ ಪ್ರಕ್ರಿಯೆಗೆ ಸ್ವಲ್ಪ ಸಮಯ ಬೇಕಿದ್ದರಿಂದ ಕೆಲಸ ನೀಡಲು ವಿಳಂಬವಾಗಿದೆ. ಸೋಮವಾರದಿಂದ ಎಲ್ಲ ಕಾರ್ಮಿಕರಿಗೆ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ಕಾರ್ಮಿಕರು ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.ಹರಪನಹಳ್ಳಿ ಮಂಜುನಾಥ, ಅಯ್ಯನಹಳ್ಳಿ ರಾಮಣ್ಣ, ಅಯ್ಯನಹಳ್ಳಿ ಶಿವಪ್ಪ, ಗೊರವರ ದೇವಕ್ಕ, ಸಕ್ರಳ್ಳಿ ಪ್ರೇಮವ್ವ ಇತರರು ಇದ್ದರು.