ಪ.ನಾ.ಹಳ್ಳಿ
ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿಯು ಹಾಳು ಅದ್ವಾನವೆದ್ದಿದ್ದು ಈ ಕೂಡಲೇ ಸದರಿ ರಸ್ತೆಯನ್ನು ದುರಸ್ಥಿ ಮಾಡುವಂತೆ ಪ.ನಾ.ಹಳ್ಳಿಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಬಸ್‍ಸ್ಟಾಂಡ್ ಮಾರ್ಗ ಮಧ್ಯದಲ್ಲಿ ಹಾದು ಹೋಗುವಂತಹ ರಸ್ತೆಯ ಅಗಲೀಕರಣ ಹಾಗೂ ಅಕ್ಕ ಪಕ್ಕ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿ ಕಳೆದ ವರ್ಷ ಆರಂಭವಾಗಿತ್ತು. ರಸ್ತೆ ಬದಿಯ ಅಂಗಡಿ ತೆರವುಗೊಳಿಸಿ 3 ತಿಂಗಳಲ್ಲಿ ಕಾಮಗಾರಿ ಪೊರ್ಣಗೊಳಿಸುವುದಾಗಿ ಹೇಳಿ ಕೆಲಸ ಆರಂಭಿಸಲಾಗಿತ್ತು. ಕಾಮಗಾರಿ ಪ್ರಾರಂಭಿಸಿ ಚರಂಡಿ ನಿರ್ಮಾಣ ಮಾಡಿದ ಗುತ್ತಿಗೆದಾರ ರಸ್ತೆ ಮಧ್ಯದಲ್ಲಿದ್ದ ಹಳೆಯ ಜೆಲ್ಲಿ ತೆಗೆದು ಕಾಮಗಾರಿ ಮುಂದುವರೆಸದೆ ಕಾಣೆಯಾಗಿರುವುದು ಸಾರ್ವಜನಿಕರ ಅನುಮಾನಗಳಿಗೆ ಕಾರಣವಾಗಿದೆ.
ರಸ್ತೆ ಸರಿ ಹೋಗುತ್ತೋ ಇಲ್ಲವೋ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದ್ದು, ನಿತ್ಯ ದೂಳು ಸೇವಿಸಿ ಬದುಕುವಂತ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಮಳೆ ನೀರಿನ ಜೊತೆಗೆ ಚರಂಡಿ ನೀರು ಸೇರಿ ರಸ್ತೆ ಮೇಲೆ ನಿಲ್ಲುವ ನೀರಿನಿಂದ ರಸ್ತೆ ಕೆಸರಿನ ಗದ್ದೆಯಾಗುತ್ತದೆ. ದ್ವಿಚಕ್ರವಾಹನ ಸವಾರರು ಇಲ್ಲಿ ಬಿದ್ದು ಸಣ್ಣ ಪುಟ್ಟ ಗಾಯಗಳಿಗಿರುವಂತ ಸ್ಥಿತಿ ಇದೆ.
ಈ ಮಾರ್ಗದಲ್ಲಿ ನೂರಾರು ಮಕ್ಕಳು ಪ್ರಾಥಮಿಕ ಶಾಲೆಗೆ ಹೋಗುವ ಕಾರಣ ಈ ಸ್ಥಿತಿಯಲ್ಲಿ ರಸ್ತೆಯಲ್ಲಿ ಒಡಾಡುವುದು ಕಷ್ಟಸಾಧ್ಯವಾಗಿದೆ ಎಮದು ಗ್ರಾಮಸ್ಥರು ದೂರಿದ್ದಾರೆ.
ಲೋಕಸಭೆ ಚುನಾವಣೆ ಸಂಧರ್ಭದಲ್ಲಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೂಡಾ ಸಹ ಇದೇ ರಸ್ತೆಯ ಮೂಲಕ ಪಟ್ಟನಾಯಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದರು, ಮುಖ್ಯಮಂತ್ರಿಗಳೇ ಬಂದಿದ್ದಾಗ ದುರಸ್ಥಿಯಾಗದ ಈ ರಸ್ತೆ ಈಗ ಹೇಗೆ ಅಗುತ್ತೆ? ಎಂಬುದು ಸಾರ್ವಜನಿಕರ ಪ್ರಶ್ವೆಯಾಗಿದೆ.