ಕೊಟ್ಟೂರು
ಪಟ್ಟಣದ ರೈಲ್ವೆ ನಿಲ್ಧಾಣ ಪ್ರದೇಶದಲ್ಲಿ ಲೋಡಿಂಗ್ ಪಾಯಿಂಟ್ ಸ್ಥಾಪಿಸಿದ ಎರಡು ವರ್ಷಗಳ ನಂತರ ಮೊದಲ ಬಾರಿಗೆ ಕೊಟ್ಟೂರಿನಿಂದ ತಮಿಳುನಾಡಿಗೆ ಮೆಕ್ಕೆಜೋಳ ಉತ್ಪನ್ನವನ್ನು ರೈಲ್ವೆ ವ್ಯಾಗಿನ್ ಮೂಲಕ ರವಾನಿಸಲು ಶನಿವಾರ ಲೋಡ್ ಮಾಡಲಾರಂಭಿಸಲಾಗಿದೆ.
ಇಲ್ಲಿನ ಎಪಿಎಂಸಿಯಲ್ಲಿ ಮೆಕ್ಕೆಜೋಳ ವರ್ತಕ ರೇಖಾ ಟ್ರೇಡರ್ಸ್ ಮಾಲೀಕ ಅನಿಲ್ ಜವಾಹರ್ ಬಾಗ್ರೇಚಾ, ತಮ್ಮ ರೇಖಾ ಟ್ರೇಡಿಂಗ್ ಕಂಪನಿ ಮೂಲಕ ತಮಿಳುನಾಡಿನ ತ್ರಿಪುರಾಗೆ ಮೆಕ್ಕೆಜೋಳವನ್ನು ರೈಲ್ವೆ ವ್ಯಾಗಿನ್ ಮೂಲಕ ರವಾನಿಸಲು ಮುಂದಾಗಿದ್ದಾರೆ. ಖರೀದಿಸಿದ ಮೆಕ್ಕೆಜೋಳವನ್ನು ಹೊರ ರಾಜ್ಯಗಳಿಗೆ ಲಾರಿಗಳಲ್ಲಿ ರಸ್ತೆ ಮೂಲಕವೇ ರವಾನಿಸುತ್ತಿದ್ದ ವರ್ತಕರು, ಇದೇ ಮೊದಲ ಬಾರಿಗೆ ರೈಲ್ವೆ ವ್ಯಾಗಿನ್‍ನಲ್ಲಿ ಸಾಗಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಕೊಟ್ಟೂರಿನಲ್ಲಿ 2014ರಲ್ಲಿ ಹೊಸ ರೈಲ್ವೆ ನಿಲ್ದಾಣದ ಉದ್ಘಾಟನೆಗೊಂಡಿತ್ತು. ಕೊಟ್ಟೂರಿನಿಂದ ಅರಳೆ, ಮೆಕ್ಕೆಜೋಳ ಹೊರ ರಾಜ್ಯಕ್ಕೆ ಅಪಾರ ಪ್ರಮಾಣದಲ್ಲಿ ರವಾನೆಯಾಗುತ್ತಿದ್ದು, ಕೊಟ್ಟೂರಿನಲ್ಲಿ ಲೋಡಿಂಗ್ ಪಾಯಿಂಟ್ ಸ್ಥಾಪಿಸುವಂತೆ ವರ್ತಕರು ರೈಲ್ವೆ ಇಲಾಖೆಗೆ ಒತ್ತಾಯಿಸಿದ್ದರ ಹಿನ್ನಲೆಯಲ್ಲಿ 2016ರಲ್ಲಿ ರೈಲ್ವೆ ನಿಲ್ದಾಣ ಪ್ರದೇಶದಲ್ಲಿ ಇಲಾಖೆ ಲೋಡಿಂಗ್ ಪಾಯಿಂಟ್ ವ್ಯವಸ್ಥೆ ಮಾಡಿತ್ತು. ಆದರೆ ಎರಡು ವರ್ಷವೂ ವಿಫಲವಾದ ಬೆಳೆಯಿಂದ ಮಾರುಕಟ್ಟೆಗೆ ಹೆಚ್ಚಿನ ಆವಕವಾಗದೇ ವ್ಯಾಗಿನ್‍ನಲ್ಲಿ ರವಾನಿಸುವಷ್ಟು ಉತ್ಪನ್ನಗಳು ವರ್ತಕರಿಗೆ ಸಿಕ್ಕಿರಲಿಲ್ಲ.
ಈ ವರ್ಷದಲ್ಲಿ ಆವಕಗೊಂಡಿ ಮೆಕ್ಕೆಜೋಳವನ್ನು ರೇಖಾ ಟ್ರೇಡರ್ಸ್‍ನವರು ತಮಿಳುನಾಡಿನ ತ್ರಿಪುರಾಕ್ಕೆ ರವಾನಿಸಬೇಕಾಗಿತ್ತು. ಲಾರಿಗಳ ಮೂಲಕವಾದರೆ ಹೆಚ್ಚು ಸಮಯ, ಹಣ ವ್ಯಯವಾಗುತ್ತಿತ್ತು. ಈ ಹಿನ್ನಲೆಯಲ್ಲಿ ರೈಲ್ವೆ ವ್ಯಾಗಿನ್ ಬುಕ್ ಮಾಡಿ ಅದರ ಮೂಲಕ 2500 ಮೆಟ್ರಿಕ್ ಟನ್ ಮೆಕ್ಕೆಜೋಳ ರವಾನಿಸಲು ಮುಂದಾಗಿದ್ದಾರೆ.
ಕೊಟ್ಟೂರು ನಿಲ್ದಾಣಕ್ಕೆ 43 ಬಾಕ್ಸ್‍ಗಳನ್ನು ಹೊತ್ತ ರೈಲ್ವೆ ವ್ಯಾಗಿನ್ ಮಂಗಳವಾರ ಬಂದಾಗ, ಟ್ರೇಡರ್ಸ್ ಮಾಲೀಕರು, ಎಪಿಎಂಸಿ ವರ್ತಕರು ಪೂಜೆ ನೆರವೇರಿಸಿ ಲೋಡ್‍ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಲೀಕರಾದ ಅನಿಲ್ ಜವಾಹರ್ ಬಾಗ್ರೇಚಾ ಮತ್ತು ಲಕ್ಷ್ಮಣ್ ಜೈನ್, ಎಪಿಎಂಸಿ ವರ್ತಕರಾದ ಪತ್ತಿಕೊಂಡ ಗಣೇಶ, ರಾಜೇಂದ್ರಕುಮಾರ್, ಮಹೇಂದ್ರಕುಮಾರ್, ಪಿ.ಶ್ರೀಧರಶೆಟ್ಟಿ, ಬಿ.ಎಸ್.ವೀರೇಶ, ಜನಾರ್ಧನ ಶೆಟ್ಟಿ, ಪ್ರಭಾಕರ ಶೆಟ್ಟಿ, ಕರಡಿ ಕೊಟ್ರಯ್ಯ, ಜಿ.ಎಂ.ಕಾರ್ತಿಕ, ಕಾಮಶೆಟ್ಟಿ ಕೊಟ್ರೇಶ, ಪಿ.ಶರತ್, ಎನ್.ಅಪ್ಪಾಜಿ, ಪಿ.ಸುಧಾಕರಪಾಟೀಲ್, ಪ್ರಶಾಂತ್, ಭದ್ರಿ, ಜಿಎಂ ಸಿದ್ದಯ್ಯ, ರೈಲ್ವೆ ಮಾಸ್ಟರ್ ನರಸಿಂಹಮೂರ್ತಿ ಮತ್ತು ಟ್ರೇಡರ್ಸ್‍ನ ಸಿಬ್ಬಂದಿ ವರ್ಗದವರು ಸೇರಿ ಅನೇಕರಿದ್ದರು. ನಂತರ ಹಮಾಲರಿಂದ ವ್ಯಾಗಿನ್‍ಗಳಿಗೆ ಮೆಕ್ಕೆಜೋಳ ಚೀಲಗಳ ಲೋಡ್ ಮಾಡುವ ಕಾರ್ಯ ನಡೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








