ಬ್ಯಾಡಗಿ:
ಶೀಘ್ರದಲ್ಲೇ ಬ್ಯಾಡಗಿ ತಾಲ್ಲೂಕಾ ಕ್ರೀಡಾಂಗಣಕ್ಕೆ ಶ್ರೀ ಜಯದೇವ ಜಗದ್ಗುರು ಮುರುಘರಾಜೇಂದ್ರ (ಎಸ್‍ಜೆಜೆಎಂ) ಕ್ರೀಡಾಂಗಣವೆಂದು ಮರು ನಾಮಕರಣ ಮಾಡುವುದಾಗಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿದರು.
ಬುಧವಾರ ತಾಲ್ಲೂಕಾ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸದರಿ ತಾಲ್ಲೂಕಾ ಕ್ರೀಡಾಂಗಣ ಒಟ್ಟು 7.19 ಎಕರೆ ವಿಸ್ತೀರ್ಣವಿದ್ದು ಸುತ್ತಲೂ ಕ್ರೀಡಾಂಗಣದ ಮೂಲ ಜಾಗೆ ಒತ್ತುವರಿಯಾಗಿರುವ ಬಗ್ಗೆ ಅನುಮಾನಗಳಿವೆ, ಮೋಜಣಿ ಇಲಾಖೆಗೆ ಅಳತೆ ಮಾಡುವಂತೆ ಸ್ಥಳದಲ್ಲೇ ಸೂಚನೆ ನೀಡಿದ ಅವರು, ನಾಮಕರಣ ಕಾರ್ಯಕ್ರಮ ಆಯೋಜಿಸುವ ಕುರಿತು ಕ್ರೀಡಾಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ದಿನಾಂಕ ಅಂತಿಮಗೊಳಿಸುವುದಾಗಿ ತಿಳಿಸಿದರು.
ಪಟ್ಟಣದ ಹೃದಯ ಭಾಗದಲ್ಲಿ ಇಷ್ಟೊಂದು ಬೃಹದಾಕಾರದ ಕ್ರೀಡಾಂಗಣವಿರುವುದು ಹೆಮ್ಮೆಯ ವಿಷಯ, ಬಹಳ ಸುಂದರವಾಗಿ ಕ್ರೀಡಾಂಗಣವನ್ನು ನಿರ್ವಹಣೆ ಮಾಡಲಾಗಿದೆ, ಪಟ್ಟಣದಲ್ಲಿ ಕ್ರೀಡಾ ವಾತಾವರಣ ನಿರ್ಮಾಣಕ್ಕೆ ಸೂಕ್ತವಾದ ಜಾಗವೆನಿಸುತ್ತಿದೆ ಆದರೆ ಕ್ರೀಡಾಂಗಣಕ್ಕೆ ಸೂಕ್ತ ಭದ್ರತೆ ಒದಗಿಸುವುದು ಸೇರಿದಂತೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕುರಿತು ಚರ್ಚಿಸುವುದಾಗಿ ತಿಳಿಸಿದರು.
ಶೀಘ್ರದಲ್ಲೇ ಸಭೆ:
ಕ್ರೀಡಾಂಗಣ ಸಮಿತಿಯ ಅಧ್ಯಕ್ಷ ಹಾವೇರಿ ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಇಲ್ಲಿನ ಕ್ರೀಡಾಪಟುಗಳು ಅವಶ್ಯಕತೆ ಮತ್ತು ಬೇಕು ಬೇಡಗಳನ್ನು ಅಲಿಸುವುದೂ ಸೇರಿದಂತೆ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುವ ಕುರಿತು ಚಿಂತನ ನಡೆಸಲಾಗಿದ್ದು ಶೀಘ್ರದಲ್ಲೇ ಕ್ರೀಡಾಂಗಣ ಸಮಿತಿ ಸಭೆಯನ್ನು ಕ್ರೀಡಾಂಗಣದ ಆವರಣದಲ್ಲೇ ಆಯೋಜಿಸುವುದಾಗಿ ತಿಳಿಸಿದರು.
ಸುಣ್ಣ ಬಣ್ಣವಾಗಲಿ:
ಮಾಜಿ ಸೈನಿಕ ಮಲ್ಲೇಶಪ್ಪ ಚಿಕ್ಕಣ್ಣನವರ, ಕ್ರೀಡಾಂಗಣದಲ್ಲಿ ಸೂಕ್ತ ಭದ್ರತೆಯಿಲ್ಲದಿದ್ದರೇ ರಾತ್ರಿ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗುತ್ತದೆ, ಈ ನಿಟ್ಟಿನಲ್ಲಿ ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮೊದಲು ಕ್ರೀಡಾಂಗಣಕ್ಕೆ ಭದ್ರತೆ ಒದಗಿಸುವ ಕಾರ್ಯವಾಗಬೇಕು ಮತ್ತು ನಾಮಕರಣ ಮಾಡುವುದಕ್ಕೂ ಮುನ್ನ ಕ್ರೀಡಾಂಗಣದ ಸುತ್ತಲಿನ ಕಂಪೌಂಡ್ ಸೇರಿದಂತೆ ಪೆವಿಲಿಯನ್ ಬ್ಲಾಕ್ ಇವುಗಳಿಗೆ ಸುಣ್ಣ ಬಣ್ಣ ಹಾಗೂ ಆಟಗಾರರಿಗೆ ಅವಶ್ಯವಿರುವ ಕ್ರೀಡಾ ಸಾಮಗ್ರಿಗಳ ಪೂರ್ಯಕೆಯಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಗುರುಬಸವರಾಜ್, ಮುಖ್ಯಧಿಕಾರಿ ವಿ.ಎಂ.ಪೂಜಾರ, ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ವರುಣ ನಾಯಕ್, ಕ್ರೀಡಾಂಗಣದ ಕೇರ್ ಟೇಕರ್ ಮಂಜುಳ ಭಜಂತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ