ದಾವಣಗೆರೆ:
ಪ್ರಸಕ್ತ ಸಾಲಿನಿಂದಲೇ ಎಲ್ಲಾ ಇಲಾಖೆಗಳು ತಯಾರಿಸುವ ಕ್ರಿಯಾ ಯೋಜನೆಯಲ್ಲಿ ಜಿಯೋ ಸ್ಪೇಷಿಯಲ್ ತಂತ್ರಾಶವನ್ನು ಅಳವಡಿಸಿ ಕೊಂಡು ಇಲಾಖೆಗಳ ಯೋಜನೆಗಳು, ಆಸ್ತಿಗಳ ನಕ್ಷೆಗಳು ಮತ್ತು ಅಂಕಿ-ಅಂಶಗಳ ಮಾಹಿತಿ ಅಡಕಮಾಡಬೇಕೆಂದು ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ & ಟೆಕ್ನಾಲಜಿ (ಕೆಎಸ್‍ಸಿಎಸ್‍ಟಿ)ಯ ಕಾರ್ಯಪಾಲಕ ಕಾರ್ಯದರ್ಶಿ ಹೇಮಂತ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಸಿಇಒ ಹೆಚ್.ಬಸವರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ವಿವಿಧ 25 ಇಲಾಖೆಗಳ ಅಧಿಕಾರಿಗಳಿಗಾಗಿ 2019-20ನೇ ಸಾಲಿನಲ್ಲಿ ವಿವಿಧ ಇಲಾಖೆಗಳ ಮಾಹಿತಿಯನ್ನು ಬಳಸಿಕೊಂಡು ಜಿಯೋ ಸ್ಪೇಷಿಯಲ್ ಕ್ರಿಯಾಯೋಜನೆ ರೂಪಿಸುವ ಕುರಿತು ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಯೋ ಸ್ಪೇಷಿಯಲ್ ಎಂಬುದು ಭೌಗೋಳಿಕ ಆಧಾರಿತ ಮಾಹಿತಿಯಾಗಿದೆ. ನಕ್ಷೆಗಳು ಮತ್ತು ಅಂಕಿ ಅಂಶಗಳ ಕ್ರೋಢೀಕೃತ ಮಾಹಿತಿಯನ್ನು ಈ ಆ್ಯಪ್‍ನಲ್ಲಿ ಅಳವಡಿಸುವ ಮೂಲಕ ಪ್ರತಿಯೊಬ್ಬರಿಗೆ ತಲಪುವಂತೆ ಮಾಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು, ಜಿಯೋ ಸ್ಪೇಷಿಯಲ್ ತಂತ್ರಜ್ಞಾನದ ಮೂಲಕ ಇದೀಗ ಸುಮಾರು 18 ಲಕ್ಷ ಸರ್ಕಾರದ ಆಸ್ತಿಗಳನ್ನು ಗುರುತಿಸಲಾಗಿದೆ ಎಂದು ಅವರು ವಿವರಿಸಿದರು.
ಇಲಾಖೆಗಳು ತಮ್ಮ ಕ್ರಿಯಾ ಯೋಜನೆಯಲ್ಲಿ ಜಿಯೋ ಸ್ಪೇಷಿಯಲ್‍ನ್ನು ಅಳವಡಿಸಿಕೊಂಡಲ್ಲಿ, ಸರ್ಕಾರದ ಯೋಜನೆಗಳು, ಸಂಪನ್ಮೂಲಗಳ ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಈ ಸಾಲಿನ ಕ್ರಿಯಾ ಯೋಜನೆಯಲ್ಲಿ ಜಿಯೋ ಸ್ಪೇಷಿಯಲ್ ಮಾಹಿತಿ ಇರುವಂತೆ ಗಮನ ಹರಿಸಬೇಕು. ಹಾಗೂ ಜಿಲ್ಲೆಯ ಮುಖ್ಯವಾದ 25 ಇಲಾಖೆಗಳು ಈಗಿನಿಂದಲೇ ಜಿಯೋ ಸ್ಪೇಷಿಯಲ್ ಅಳವಡಿಕೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ಇಲಾಖೆಗಳ ಮಾಹಿತಿಯನ್ನು ಜಿಯೋ ಸ್ಪೇಷಿಯಲ್‍ನಲ್ಲಿ ಹೇಗೆ ಅಳವಡಿಸಬೇಕೆಂಬ ಬಗ್ಗೆ ಅಗತ್ಯವಾದ ತಾಂತ್ರಿಕ ಸಹಕಾರವನ್ನು ಭಾರತೀಯ ವಿಜ್ಞಾನ ಮಂತ್ರಾಲಯದಡಿ ಕಾರ್ಯ ನಿರ್ವಹಿಸುತ್ತಿರುವ ಕೆಎಸ್‍ಸಿಎಸ್‍ಟಿ(ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ & ಟೆಕ್ನಾಲಜಿ) ಮತ್ತು ಕೆಎಸ್‍ಆರ್‍ಎಸ್‍ಎಸಿ(ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ಸ್ ಸೆಂಟರ್) ನೀಡಲಿವೆ. ಪೂರ್ಣ ಪ್ರಮಾಣದಲ್ಲಿ ಸರ್ಕಾರ ಯೋಜನೆಗಳನ್ನು ಬೆಂಬಲಿಸುವ ಕುರಿತಾಗಿ ಮಾಹಿತಿ ಸೇರಿಸಲು ಎಲ್ಲ ಇಲಾಖೆಗಳು ಸಹಕರಿಸಬೇಕೆಂದು ಮನವಿ ಮಾಡಿದರು.
ಈ ವರ್ಷದಿಂದಲೇ ಹಂತ ಹಂತವಾಗಿ ಇಲಾಖೆಗಳ ಮಾಹಿತಿಯನ್ನು ಜಿಯೋ ಸ್ಪೇಷಿಯಲ್‍ನಲ್ಲಿ ಸೇರಿಸಲು ಕ್ರಮ ವಹಿಸಬೇಕು. ಸರ್ಕಾರಿ ಅನುದಾನದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮ, ಯೋಜನೆಗಳಿದ್ದರೂ ಅದನ್ನು ನಕ್ಷೆಯಲ್ಲಿ ತೋರಿಸಬೇಕು. ಪ್ರತಿ ಇಲಾಖೆಯ ಕಳೆದ 5 ವರ್ಷದ ಕ್ರಿಯಾಯೋಜನೆಯ ಮಾಹಿತಿಯನ್ನು ನೀಡಿದರೆ ಅದನ್ನು ಮ್ಯಾಪಿಂಗ್‍ನಲ್ಲಿ ನವೀಕರಣ ಮಾಡಲಾಗುವುದು ಎಂದರು.
ಕರ್ನಾಟಕ ಜಿಐಎಸ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ರುದ್ರಸ್ವಾಮಿ ಮಾತನಾಡಿ, ಕೆ-ಜಿಐಎಸ್ ಎಂಬುದು ಸರ್ಕಾರದ ಒಂದು ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ. ಸರ್ಕಾರದ ಯಾವುದೇ ರೀತಿಯ ಅನುದಾನ ಬಳಕೆಯ ಕುರಿತು ಜಿಯೋ ಸ್ಪೇಷಿಯಲ್‍ನಲ್ಲಿ ಸೇರಿಸಬಹುದು. ಹಾಗೂ ಯಾರು ಬೇಕಾದರೂ ವೀಕ್ಷಿಸಬಹುದು. ಎಲ್ಲ ಇಲಾಖೆಗಳ ಮಾಹಿತಿಯನ್ನು ಒಂದೇ ಸೂರಿನಡಿ ತರುವುದು ಕೆಜಿಐಎಸ್‍ನ ಉದ್ದೇಶವಾಗಿದೆ. ಕೆಜಿಐಎಸ್ ಈಗಾಗಲೇ ರಾಜ್ಯದ ಅನೇಕ ರೀತಿಯ ಮಾಹಿತಿಗಳನ್ನು ಜಿಐಎಸ್ ಮೂಲಕ ಸೇರಿಸಲಾಗಿದ್ದು, ಮೌಲ್ಯ, ದಿಶಾಂತ್, ಚುನಾವಾಣ್ ಸೇರಿದಂತೆ ಅನೇಕ ರೀತಿಯ ಮಾಹಿತಿಪೂರ್ಣವಾದ ಆ್ಯಪ್‍ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.
ಜಿ.ಪಂ ಸಿಇಓ ಹೆಚ್.ಬಸವರಾಜೇಂದ್ರ ಮಾತನಾಡಿ, ಜಿಯೋ ಸ್ಪೇಷಿಯಲ್ ಒಂದು ಅತ್ಯುತ್ತಮ ಕಾರ್ಯವಾಗಿದ್ದು, ಕುಡಿಯುವ ನೀರು ಸರಬರಾಜು ಇಲಾಖೆ, ಕೃಷಿ, ತೋಟಗಾರಿಕೆ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಮುಖ್ಯ ಇಲಾಖೆಗಳು ತಮ್ಮ ಇಲಾಖಾ ಮಾಹಿತಿ, ಅಂಕಿ-ಅಂಶಗಳು, ನಕ್ಷೆಗಳನ್ನು ಜಿಯೋ ಸ್ಪೇಷಿಯಲ್ ಸೇರಿಸಬೇಕೆಂದರು.
ಕಾರ್ಯಾಗಾರದಲ್ಲಿ ಚಿತ್ರದುರ್ಗ ಜಿ.ಪಂನ ಮುಖ್ಯ ಯೋಜನಾಧಿಕಾರಿ ಶಶಿಧರ್, ಶಿವಮೊಗ್ಗ ಜಿ.ಪಂ.ನ ಮುಖ್ಯ ಯೋಜನಾಧಿಕಾರಿ ಉಮಾ ಸದಾಶಿವ, ಬೆಂಗಳೂರು ಯೋಜನಾ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಪುಷ್ಪಾ ಸೇರಿದಂತೆ ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.